ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸುಳಿವು ಸಿಕ್ಕಿದೆ. ಚುನಾವಣೆ ಫಲಿತಾಂಶದ ಬಳಿಕ ಮೈತ್ರಿಯ ನಿರ್ಧಾರ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿಂಧನೂರು [ಡಿ.07]: ಜೆಡಿಎಸ್ ಜತೆಗಿನ ಮೈತ್ರಿ ಡಿ.9ರ ಉಪ ಚುನಾವಣೆ ಫಲಿತಾಂಶವನ್ನು ಅವಲಂಬಿಸಿರಲಿದೆ. ಮೊದಲು ಫಲಿತಾಂಶ ಬರಲಿ ಆ ಬಳಿಕ ಮೈತ್ರಿ ಕುರಿತು ಚರ್ಚಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಯ್ಯ ತಿಳಿಸಿದರು.
ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲು ಸಾಧ್ಯವೇ’ ಎಂದ ಅವರು, ಮೊದಲು ಉಪಚುನಾವಣೆ ಫಲಿತಾಂಶ ಹೊರಬರಲಿ. ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಹೇಳಿದರೂ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರೊಂದಿಗೆ ಚರ್ಚಿಸುವುದಾಗಿಯೂ ಮಾಧ್ಯಮಗಳ ಎದುರು ಹೇಳಿದ್ದಾರೆ. ಹೀಗಾಗಿ ಡಿ.9ರ ಫಲಿತಾಂಶದ ನಂತರ ಮೈತ್ರಿ ಕುರಿತು ಚರ್ಚಿಸಲಾಗುವುದು. ಆದರೆ ಒಂದಂತೂ ಸತ್ಯ. ಉಪಚುನಾವಣೆಯ ಆಶ್ಚರ್ಯಕರ ಫಲಿತಾಂಶದ ನಂತರ ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗುವುದು ಗ್ಯಾರಂಟಿ ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಪಕ್ಷ ದ್ರೋಹ ಬಗೆದು ಅಧಿಕಾರ ಮತ್ತು ಹಣದ ಲಾಲಸೆಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಉಪಚುನಾವಣೆ ನಡೆಯಲು ಹಾಗೂ ರಾಜ್ಯದ ಬೊಕ್ಕಸಕ್ಕೆ ಹಾನಿ ಮಾಡಿರುವ ಅನರ್ಹ ಶಾಸಕರ ವಿರುದ್ಧ ಮತದಾರರು ಎಲ್ಲೆಡೆ ಆಕ್ರೋಶಪಡಿಸಿರುವುದು ಗಮನಿಸಿದ್ದೇನೆ. 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಚ್ಚಳ. 3 ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆಯಿದೆ. ಆದಾಗ್ಯೂ 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದು ಹೇಳಿದರು.
‘ಮತ್ತೆ ಆಪರೇಷನ್ ನಡೆಸಿದ್ರೆ ಜನ ಅಟ್ಟಾಡಿಸಿ ಹೊಡೀತಾರೆ’...
ಖರ್ಗೆ ಸಿಎಂ ಆಗಲು ವಿರೋಧವಿಲ್ಲ: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಲು ಬೇಡ ಎಂದವರು ಯಾರು? ಪಕ್ಷದಲ್ಲಿ ಖರ್ಗೆ ಅವರ ಹಿರಿತನದ ಬಗ್ಗೆ ಎಲ್ಲರಿಗೂ ಗೌರವವಿದೆ. ಯಾರೂ ಅವರನ್ನು ವಿರೋಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.