* ನವಲಿ ಜಲಾಶಯ ಯೋಜನೆಯ ದಿಕ್ಕು ತಪ್ಪಿಸಿದ್ದಾರೆ
* ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕೂವರೆ ವರ್ಷದಲ್ಲಿ ಬಿಜೆಪಿ ಸಾಧನೆ ಶೂನ್ಯ
* ಸಚಿವರೆಲ್ಲ ಜಾತ್ರೆ ಮಾಡಿಕೊಂಡು ಹೋಗುತ್ತಿದ್ದಾರೆ
ಕೊಪ್ಪಳ(ಜು.03): ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಲು ಸಾಲು ಸಾಧನೆ ಮಾಡಿದೆ. ಆದರೆ, ಪ್ರಸಕ್ತ ಸರ್ಕಾರದಲ್ಲಿ ಬಿಜೆಪಿ ಒಂದೇ ಒಂದೂ ಸಾಧನೆ ಮಾಡಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಇಂಥ ಕೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ. ಇಂಥ ಆಡಳಿತದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಮತದಾರರು ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
undefined
ರಾಜಿ ಪಂಚಾಯ್ತಿ ಯಶಸ್ವಿ, ಪುತ್ರನೊಂದಿಗೆ ಹಿರಿಯ ನಾಯಕ ವಾಪಸ್ ಕಾಂಗ್ರೆಸ್ ಸೇರ್ಪಡೆ
ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕೆರೆ ತುಂಬಿಸುವ ಯೋಜನೆ, ಹಾಸ್ಟೆಲ್‌ಗಳ ನಿರ್ಮಾಣ, ಎನ್‌ಎಚ್ ರಸ್ತೆಗಳ ಮಂಜೂರಾತಿ, ಬ್ಯಾರೇಜ್ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಆಗಿವೆ. ಕನಕಗಿರಿ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ಕೆರೆ ತುಂಬಿಸುವ ಯೋಜನೆ, ರೈಸ್ ಟೆಕ್ನಾಲಜಿ ಪಾರ್ಕ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಆದರೆ, ಕೊಪ್ಪಳ ಏತ ನೀರಾವರಿ ಯೋಜನೆಗೆ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನೀಡಲಾಯಿತು. ಆದರೆ ಈಗ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಹೇಳಿಕೊಳ್ಳುವುದಕ್ಕೆ ಒಂದೇ ಒಂದೂ ಕೆಲಸ ಆಗಿಲ್ಲ. ಬರಿ ಸುಳ್ಳು ಹೇಳುತ್ತಲೆ ಜನರನ್ನು ಭ್ರಮೆಯಲ್ಲಿ ತೇಲಿವಂತೆ ಮಾಡಿದ್ದಾರೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನ ಕೆರೆ ತುಂಬಿಸುವ .290 ಕೋಟಿ ಯೋಜನೆ ನನೆಗುದಿಗೆ ಬಿದ್ದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ನಾನು ಹಿಂದೂವೇ:
ನಾನು ಸಹ ಹಿಂದೂ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಆದರೆ ನಾನು ಹಿಂದೂವಾಗಿದ್ದರೂ ಮುಸ್ಲಿಮರನ್ನು, ಕ್ರಿಶ್ಚಿಯನ್ನರನ್ನು ತುಂಬಾ ಪ್ರೀತಿಯಿಂದ ಕಾಣುತ್ತೇನೆ. ದ್ವೇಷಿಸುವುದಿಲ್ಲ. ಆದರೆ ಕೆಲವರು ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದರು.
ಎರಡು ಸಮುದಾಯದಲ್ಲಿಯೂ ಮೂಲಭೂತವಾದಿಗಳು ಅಪಾಯಕಾರಿಯಾಗಿದ್ದಾರೆ. ಇದನ್ನು ಎಲ್ಲರೂ ವಿರೋಧಿಸಲೇಬೇಕು. ಉದಯಪುರದಲ್ಲಿ ನಡೆದ ಘಟನೆಯನ್ನ ನಾವು ಖಂಡಿಸಿದ್ದೇವೆ. ಕೊಲೆ ಮಾಡುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಮತ್ತು ಇಂಥವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಹೇಳಿದರು.
ಗೆಲುವು ನೂರಕ್ಕೆ ನೂರು:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವುದು ನೂರಕ್ಕೆ ನೂರು ಎನ್ನುವ ವಿಶ್ವಾಸವಿದೆ. ಮತದಾರರ ಮನಸ್ಸು ಅರ್ಥ ಮಾಡಿಕೊಂಡಿರುವುದರಿಂದ ಹೇಳುತ್ತಿದ್ದೇನೆ, ಈ ಬಾರಿ ಗೆಲವು ನಿಶ್ಚಿತ ಎಂದರು.
ಕಾಂಗ್ರೆಸ್ ಸಮೀಕ್ಷೆ ಇನ್ನೂ ನನ್ನ ಕೈಗೆ ಬಂದಿಲ್ಲ. ಅದರ ಪ್ರಕಾರ ಬರುವ ಚುನಾವಣೆಯಲ್ಲಿ 120 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಹೇಳಲಾಗಿದೆ. ಅದರಲ್ಲಿ ಕೊಪ್ಪಳ ಐದು ಕ್ಷೇತ್ರಗಳು ಇರಲಿವೆ. ಐದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆಕಾಂಕ್ಷಿಗಳು ಇರುವುದು ಸತ್ಯ. ಈಗಾಗಲೇ ಶೇ. 80ರಷ್ಟುಸಮಸ್ಯೆ ನೀಗಿಸಲಾಗಿದ್ದು, ಇತ್ಯರ್ಥವಾಗುತ್ತದೆ ಮತ್ತು ಪಕ್ಷ ನಿರ್ಧಾರ ಮಾಡಿ, ಸೂಕ್ತರಾದವರಿಗೆ ಟಿಕೆಟ್ ನೀಡುತ್ತದೆ ಎಂದರು.
40 ಪರ್ಸೆಂಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾಗೂ ಪಾಲಿದೆ: ಶಿವರಾಜ ತಂಗಡಗಿ
ಸಮಾನಾಂತರ ಜಲಾಶಯ:
ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಯೋಜನೆಯ ದಿಕ್ಕು ತಪ್ಪಿಸಿದೆ. ಅದನ್ನು ಸಂಕುಚಿತಗೊಳಿಸಿದೆ. ಅದರ ಮೂಲ ಯೋಜನೆ ನವಲಿ ಸಮಾನಾಂತರ ಜಲಾಶಯಗಳು ಎಂದು. ಅದನ್ನು ಕೇವಲ 1 ಸಮಾನಾಂತರ ಜಲಾಶಯಕ್ಕೆ ಸೀಮಿತ ಮಾಡಲಾಗಿದೆ. ಇದು ಸರಿಯಲ್ಲ ಎಂದರು.
ಮುಂದಿನ ವರ್ಷ ನೀರು ತಂದೇ ಬಿಡುತ್ತೇವೆ ಎಂದು ಹೇಳಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಹೇಳಿದ್ದಾರೆ ಎಂಬುದನ್ನು ಕಾದು ನೋಡುತ್ತಿದ್ದೇನೆ. ಸುಮಾರು 35 ಟಿಎಂಸಿ ಸಾಮರ್ಥ್ಯದ ಈ ಯೋಜನೆ ಕಾವೇರಿಗಿಂತಲೂ ದೊಡ್ಡ ಯೋಜನೆಯಾಗಿದೆ. ಇದಕ್ಕೆ ಸಾಕಷ್ಟುಕಾಲವಕಾಶ ಬೇಕಾಗುತ್ತದೆ. ಅದರೆ, ನಮ್ಮ ಸರ್ಕಾರ ಬಂದರೆ ಆದ್ಯತೆ ಮೇಲೆ ನಿರ್ಮಾಣ ಮಾಡಲಾಗುವುದು ಎಂದರು.