
ಬೆಳಗಾವಿ[ಫೆ.14]: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನನ್ನು ಯಾವ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತಾರೆ? ನರೇಂದ್ರ ಮೋದಿ, ಅಮಿತ್ ಶಾಗಿಂತಲೂ ರಮೇಶ್ ದೊಡ್ಡವರಾ? ಎಂದು ಶಾಸಕ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ರಮೇಶ್ ಜಾರಕಿಹೊಳಿ ಮಾತನಾಡುವ ವೇಳೆ ಸತೀಶ್‌ಗೆ ಸಿಎಂ ಆಗುವ ಅರ್ಹತೆ ಇದೆ. ತಾಳ್ಮೆ ಇರಬೇಕು ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬೇರೆ ಪಕ್ಷದಲ್ಲಿರುವ ರಮೇಶ್ ಅವರು ಅದ್ಹೇಗೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ಅವರ ಈ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.
ನನ್ನನ್ನು ಮುಖ್ಯಮಂತ್ರಿ ಮಾಡುವುದು ದೂರದ ಮಾತು. ನಮ್ಮ ಕಡತಗಳಿಗೆ ಗೋಕಾಕ ತಹಸೀಲ್ದಾರ ಕಚೇರಿಯ ಕ್ಲರ್ಕ್ ಸಹಿ ಮಾಡಿಕೊಟ್ಟರೆ ನಮಗೆ ಅಷ್ಟೇ ಸಾಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ರಮೇಶ್ ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ಬಿಜೆಪಿ ನಾಯಕರು ರಮೇಶ್‌ನನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಆಗ್ರಹಿಸಿದರು.
ರಮೇಶ ಜಾರಕಿಹೊಳಿ ಈ ಹಿಂದಿನ 20 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮುಂದಿನ 20 ವರ್ಷಗಳ ಕಾಲವೂ ಮಾಡುವುದಿಲ್ಲ. ಮಂತ್ರಿ, ಮುಖ್ಯಮಂತ್ರಿಯಾದ ಬಳಿಕ ಕೆಲಸ ಮಾಡುವುದಲ್ಲ, ಅದು ರಕ್ತದಲ್ಲಿಯೇ ಇರಬೇಕು ಎಂದರು.
ಜಲಸಂಪನ್ಮೂಲ ಖಾತೆ ದೊಡ್ಡ ಖಾತೆ. ಈ ಖಾತೆಯನ್ನು ರಮೇಶ್ ಯಾವ ರೀತಿ ನಿಭಾಯಿಸುತ್ತಾರೆ. ಬೆಳಗಾವಿಯಲ್ಲಿ ಕುಳಿತು ಅಂತಾರಾಜ್ಯ ನದಿ ವಿವಾದವನ್ನು ಯಾವ ರೀತಿ ಬಗೆಹರಿಸುತ್ತಾರೆ ಎಂಬುದನ್ನು ನಾವು ನೋಡಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.