ರಾಜ್ಯದಲ್ಲಿ ಪಕ್ಷ 20ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಹೊಂದಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಈ ಸಾಧನೆ ಹೇಗೆ ಮತ್ತು ಏಕೆ ನಡೆಯಲಿದೆ, ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯಲಿದೆ ಎಂಬ ಬಗ್ಗೆ ವಿವರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
ಎಸ್.ಗಿರೀಶ್ ಬಾಬು
ಬೆಂಗಳೂರು (ಏ.22): ಕಳೆದ ವಿಧಾನಸಭಾ ಚುನಾವಣೆ ವೇಳೆಯ ‘ಪೇ ಸಿಎಂ’ ಕ್ಯಾಂಪೇನ್ ಆಗಿರಬಹುದು, ಈ ಭಾರಿ ಕೋಲಾಹಲ ಉಂಟುಮಾಡಿರುವ ‘ಚೊಂಬು’ ಜಾಹೀರಾತು ಇರಬಹುದು. ಇದನ್ನು ಯಾರೇ ರೂಪಿಸಿದರೂ ಅದಕ್ಕೆ ಅಂತಿಮ ಮೊಹರು ಹಾಕುವುದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಕಾಣಿಕೆ ನೀಡಿರುವ ಸುರ್ಜೇವಾಲಾ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಈ ಬಾರಿ ದೇಶದಲ್ಲಿ 2004ರ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಲಿದೆ ಮತ್ತು ರಾಜ್ಯದಲ್ಲಿ ಪಕ್ಷ 20ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಹೊಂದಿರುವ ಅವರು ಈ ಸಾಧನೆ ಹೇಗೆ ಮತ್ತು ಏಕೆ ನಡೆಯಲಿದೆ, ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯಲಿದೆ ಎಂಬ ಬಗ್ಗೆ ವಿವರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
* ಚುನಾವಣೆಯ ಕ್ಲೈಮಾಕ್ಸ್ ಹಂತ ಸಮೀಪಿಸಿದೆ. ಹೇಗಿದೆ ವಾತಾವರಣ?
ಮೊದಲ ಹಂತದ ಚುನಾವಣೆ ಮುಗಿದ ನಂತರ ಬಿಜೆಪಿ ನಾಯಕತ್ವಕ್ಕೆ ಗಾಬರಿ ಶುರುವಾಗಿದೆ. ಏಕೆಂದರೆ, ಜನತೆ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಕುಸಿತ, ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿ ಸರ್ಕಾರದ ನಡವಳಿಕೆ ಬಗ್ಗೆ ಜನರು ಪ್ರಶ್ನೆ ಕೇಳತೊಡಗಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಬಾಂಡ್‌ನಲ್ಲಿ ಕೋಟ್ಯಂತರ ರು. ವಸೂಲಿ ಬಗ್ಗೆ ಹಾಗೂ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಹಾಳುಗೆಡವಿ ಸರ್ವಾಧಿಕಾರ ವ್ಯವಸ್ಥೆ ಜಾರಿಗೆ ತರುತ್ತಿರುವ ಪ್ರಯತ್ನದ ಬಗ್ಗೆ ದೇಶದ ಜನರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ, ಮೋದಿ ಹಾಗೂ ಮೋದಿ ಸರ್ಕಾರ ಪ್ಯಾನಿಕ್ ಮೋಡ್‌ಗೆ ಹೋಗಿದ್ದಾರೆ. 400 ಸೀಟು ಗಡಿ ದಾಟುವ ಘೋಷಣೆ ಮಾಡಿದ್ದ ಅವರಿಗೆ 150ರ ಗಡಿ ದಾಟುವುದು ಕಷ್ಟ ಎಂದು ಅರಿವಾಗಿದೆ.
ಮೇಕೆದಾಟು ಡ್ಯಾಂಗೆ ಅನುಮತಿ ನೀಡಿ, ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸ್ತೀವಿ: ಸಿಎಂ ಸಿದ್ದರಾಮಯ್ಯ
* ಬಿಜೆಪಿ ಸ್ಥಿತಿ ಅತ್ಲಾಗಿರಲಿ, ಕಾಂಗ್ರೆಸ್ ಕಥೆ ಏನು?
ಈ ಚುನಾವಣೆಯಲ್ಲಿ 2004ರ ಲೋಕಸಭಾ ಚುನಾವಣೆ ಫಲಿತಾಂಶ ಈ ಬಾರಿ ಪುನರಾವರ್ತಿತವಾಗಲಿದೆ. ಭಾರತ ಪ್ರಕಾಶಿಸುತ್ತಿದೆ ಎಂದು ಬಿಂಬಿಸಿ 2004ರ ಚುನಾವಣೆ ಎದುರಿಸಿದ್ದ ಬಿಜೆಪಿ ಹಾಗೂ ವಾಜಪೇಯಿ ಸೋಲುಂಡಿದ್ದರು. ಅದು ಈ ಬಾರಿ ಪುನಾರವರ್ತನೆಯಾಗಲಿದೆ. ಕಾಂಗ್ರೆಸ್ ಪಕ್ಷ ತನ್ನ ಸ್ವಸಾಮರ್ಥ್ಯದಲ್ಲಿ 200ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲ್ಲಲಿದೆ.
* ಅಷ್ಟು ಆತ್ಮವಿಶ್ವಾಸವಿದ್ದರೆ ಇತಿಹಾಸದಲ್ಲೇ ಅತಿ ಕಡಿಮೆ ಸೀಟಲ್ಲಿ ಸ್ಪರ್ಧೆ ಏಕೆ?
ಇಲ್ಲ. ಇದು ನಿಜವಲ್ಲ. ಕಾಂಗ್ರೆಸ್ ಈಗಾಗಲೇ 330 ಸೀಟುಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ. ಇನ್ನು ಹಲವು ಹಂತಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಾಕಿಯಿದೆ. ಒಟ್ಟಾರೆ ನಾವು 200ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ.
* ಹೇಗೆ ಗೆಲ್ಲುತ್ತೀರಿ. ನಿಮ್ಮ ಬಳಿ ಗ್ಯಾರಂಟಿ ಬಿಟ್ಟು ಜನತೆಗೆ ಹೇಳಲು ಬೇರೆ ಏನು ಇದೆ?
ಗ್ಯಾರಂಟಿ ಯೋಜನೆ ಎಂದರೆ ಸಾಮಾನ್ಯ ಅಲ್ಲ. ಅದು ಪ್ರತಿಯೊಬ್ಬ ಕನ್ನಡಿಗನು ರಾಜ್ಯದ ಮಾಲೀಕನಾಗಲು ದೊರೆತ ಅವಕಾಶ. ರಾಜ್ಯದ ಪ್ರಗತಿಯಲ್ಲಿ ಪಾಲುದಾರ ಆಗಲು ಕನ್ನಡಿಗರಿಗೆ ಶಕ್ತಿ ತುಂಬಲು ಯತ್ನಿಸುವುದೇ ಗ್ಯಾರಂಟಿ ಯೋಜನೆಯ ಧ್ಯೇಯ. ಇವು ಕೇವಲ ಗ್ಯಾರಂಟಿಗಳಲ್ಲ. ವಾಸ್ತವವಾಗಿ ಜೀವನವನ್ನು ಬದಲಾಯಿಸುವ ಸಾಧನ. ಚುನಾವಣೆ ಎದುರಿಸಲು ಇದಕ್ಕಿಂತ ಉತ್ತಮ್ಮ ಅಸ್ತ್ರ ಬೇರೆ ಏನು ಬೇಕು?
* ಹೀಗಾಗಿಯೇ ಕರ್ನಾಟಕದ ಗ್ಯಾರಂಟಿ ಮಾದರಿ ದೇಶಾದ್ಯಂತ ವಿಸ್ತರಿಸುತ್ತಿದ್ದೀರಾ?
2014 ರಿಂದ 2019ರ ಚುನಾವಣೆಗಳ ಫಲಿತಾಂಶದ ನಂತರ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿದೆ. ಈ ಅವಧಿಯಲ್ಲಿ ಪಕ್ಷ ಬಡ ಜನರು, ಮಧ್ಯಮವರ್ಗದವರು, ದಲಿತರೊಂದಿಗೆ ಸಂಪರ್ಕ ಕಡಿತಗೊಳಿಸಿಕೊಂಡಿತ್ತು. ಜನರ ಆಶಯಗಳನ್ನು ಸಂಪೂರ್ಣವಾಗಿ ಅರಿಯುವಲ್ಲಿ ವಿಫಲವಾಗಿದ್ದೆವು. ಆದರೆ, ಕರ್ನಾಟಕದಲ್ಲಿ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ಈ ನ್ಯೂನತೆ ಸರಿಪಡಿಸಿಕೊಳ್ಳುವ ಅವಕಾಶ ನೀಡಿತು. ದೇಶದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಎಂಬ ಪಾಠ ಕಲಿಸಿತು. ಹೀಗಾಗಿಯೇ ಕರ್ನಾಟಕ ಗ್ಯಾರಂಟಿ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಲು ಕಾಂಗ್ರೆಸ್ ಮುಂದಾಗಿದೆ. ಇದು ದೇಶದ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಲಿದೆ.
* ನೀವು ಕಾಂಗ್ರೆಸ್ ಗ್ಯಾರಂಟಿ ಅನ್ನುತ್ತೀರಿ. ಆದರೆ, ಬಿಜೆಪಿಯವರು ಮೋದಿ ಕಾ ಗ್ಯಾರಂಟಿ ಎನ್ನುತ್ತಾರೆ?
ಮೋದಿ ಅವರ ಚೊಂಬು ಸರ್ಕಾರವು ನೀಡುತ್ತಿರುವುದು ಫೇಕ್ ಗ್ಯಾರಂಟಿಯನ್ನು. ಈ ಮೊದಲು ಅವರು ನೀಡಿದ್ದ ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರು. ಹಾಕುವ ಗ್ಯಾರಂಟಿ ಏನಾಯ್ತು? 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡುವ ಗ್ಯಾರಂಟಿ ಏನಾಯ್ತು? ರೈತರ ಆದಾಯವನ್ನು 2022ರೊಳಗೆ ಡಬಲ್ ಮಾಡುವ ಗ್ಯಾರಂಟಿ ಏನಾಯ್ತು? 2022ರೊಳಗೆ ಎಲ್ಲ ಭಾರತೀಯರಿಗೂ ವಸತಿ ಕಲ್ಪಿಸುವ ಗ್ಯಾರಂಟಿ ಏನಾಯ್ತು? 100 ಸ್ಮಾರ್ಟ್ ಸಿಟಿ ನಿರ್ಮಾಣದ ಗ್ಯಾರಂಟಿ ಎಲ್ಲಿ ಹೋಯ್ತು? ಇದು ದೇಶದ ಜನರ ಪ್ರಶ್ನೆ. ಆದರೆ, ಈ ಪ್ರಶ್ನೆಗಳಿಗೆ ಮೋದಿ ಬಳಿ ಉತ್ತರವಿಲ್ಲ. ಹೀಗಾಗಿ ಮೋದಿ ಗ್ಯಾರಂಟಿ ಎಂಬುದು ಫೇಕ್ ಎಂದು ಸ್ಪಷ್ಟವಾಗಿ ಜನರಿಗೆ ಅರ್ಥವಾಗಿದೆ.
* ಹಾಗಿದ್ದರೆ, ಈ ಚುನಾವಣೆ ಗ್ಯಾರಂಟಿ ಯೋಜನೆ ಬಗ್ಗೆ ಜನಾದೇಶ ದೊರೆಯುತ್ತದೆ ಎನ್ನಬಹುದೇ?
ಚುನಾವಣೆಗಳು ಹಲವು ವಿಚಾರಗಳ ಆಧಾರದ ಮೇಲೆ ನಡೆಯುತ್ತದೆ. ಮೋದಿ ಸರ್ಕಾರವು ಕರ್ನಾಟಕದ ವಿರುದ್ಧ ತೋರುತ್ತಿರುವ ಮಲತಾಯಿ ಧೋರಣೆ, ತೆರಿಗೆ ಹಣ ನೀಡದೇ ಮಾಡುತ್ತಿರುವ ವಂಚನೆ, ವ್ಯವಸ್ಥಿತವಾಗಿ ಕರ್ನಾಟಕಕ್ಕೆ ಶಿಕ್ಷೆಯನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗದಂತಹ ವಿಚಾರಗಳೂ ಇವೆ. ಇವೆಲ್ಲದರ ಜತೆಗೆ ಗ್ಯಾರಂಟಿ ಯೋಜನೆಗಳ ಯಶಸ್ವಿಯೂ ಜನರ ಮೇಲೆ ಪ್ರಭಾವ ಬೀರಲಿದೆ.
* ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗ್ಯಾರಂಟಿ ಅಭಿವೃದ್ಧಿಗೆ ಮಾರಕ ಅಂತಾರೆ?
ವಿಜಯೇಂದ್ರ ಅವರ ಈ ಹೇಳಿಕೆ ನನಗೆ ತೀವ್ರ ನೋವು ತಂದಿದೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆತ ನಾಚಿಕೆಯಿಲ್ಲದೆ ಕಾಂಗ್ರೆಸ್‌ನ ಗರೀಬಿ ಹಠಾವೋ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿದ್ದಾರೆ.ಈ ಹೇಳಿಕೆಯಿಂದ ವಿಜಯೇಂದ್ರ ಅವರಿಗೆ ಕರುನಾಡಿನ ಸಾಮಾಜಿಕ ಹಾಗೂ ರಾಜಕೀಯ ಅರಿವು ಇಲ್ಲ ಎಂದು ಗೊತ್ತಾಗುತ್ತಿದೆ. ಅದಷ್ಟೇ ಅಲ್ಲ, ಬಿಜೆಪಿಯು ವಾಸ್ತವವಾಗಿ ಉಳ್ಳವರ ಪರ ಪಕ್ಷ ಎಂಬ ವಾಸ್ತವ ಬಹಿರಂಗಗೊಂಡಿದೆ. ಇಂತಹ ಹೇಳಿಕೆಯಿಂದ ಆತ 6.5 ಕೋಟಿ ಕನ್ನಡಿಗರಿಗೆ ಅಗೌರವ ತಂದಿದ್ದಾರೆ.
* ಅದು ಹೇಗೆ?
ನೋಡಿ, ಯಾವುದೇ ಸರ್ಕಾರದ ಮೂಲ ಕರ್ತವ್ಯ ಪ್ರಜೆಗಳ ಹಿತ ರಕ್ಷಣೆ. ಸಂಕಷ್ಟದಲ್ಲಿರುವ ಜನತೆ ಕೂಡ ತಮ್ಮ ಆಶಯಗಳ ಈಡೇರಿಕೆಗೆ ಸರ್ಕಾರದತ್ತ ನೋಡುತ್ತಾರೆ. ಅದನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮೂಲಕ ಮಾಡುತ್ತಿದೆ. ಇಂತಹ ಯೋಜನೆ ಬಗ್ಗೆ ಕೀಳು ಹೇಳಿಕೆ ನೀಡುವುದು ರಾಜ್ಯದ ದಲಿತರು ಮಧ್ಯಮವರ್ಗದವರು ಹಾಗೂ ಸಂಬಳ ನೆಚ್ಚಿ ಬದುಕುವ ವರ್ಗಕ್ಕೆ ಅವಮಾನ ಮಾಡಿದಂತೆ. ಇಂತಹ ಜನ ವಿರೋಧಿ ಹೇಳಿಕೆಯನ್ನು ಕನ್ನಡಿಗರು ಯಾವತ್ತೂ ಕ್ಷಮಿಸುವುದಿಲ್ಲ.
* ಆಯ್ತು, ಬಿಜೆಪಿ ಕೇಂದ್ರದಲ್ಲಿ ಗೆದ್ದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಆದರೆ, ನೀವು ಗೆದ್ದರೆ ಪ್ರಧಾನಿ ಯಾರು?
ಇಂತಹ ಪ್ರಶ್ನೆಗೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೋ ಅಥವಾ ಚೀನಾದಂತೆ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೆಯೇ ಎಂದು ಮರು ಪ್ರಶ್ನಿಸಬೇಕಾಗುತ್ತದೆ. ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾಗುವ ಸಂಸದರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಸರ್ವಾಧಿಕಾರದಲ್ಲಿ ಚುನಾವಣೆಗೂ ಮೊದಲೇ ನಾಯಕನ ನಿರ್ಧಾರವಾಗಿರುತ್ತದೆ. ನಾಮ ಕಾ ವಾಸ್ಥೆ ಚುನಾವಣೆ ನಡೆಯುತ್ತದೆ. ಮೋದಿಗೆ ಚೀನಾ ಮಾದರಿ ಬೇಕಾಗಿದೆ. ಆದರೆ, ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ.
* ಅಂದರೆ, ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ...
ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ನಾಯಕತ್ವವನ್ನು ಈಗಾಗಲೇ ಹೊಂದಿದೆ. ಚುನಾವಣೆ ಫಲಿತಾಂಶ ಬಂದ ನಂತರ ಯಾವ ಪಕ್ಷ ಅತಿ ಹೆಚ್ಚು ಸಂಖ್ಯೆಯ ಸಂಸದರನ್ನು ಹೊಂದಿರುತ್ತಾರೋ ಅ ಪಕ್ಷದ ಸಂಸದರು ತಮ್ಮ ನಾಯಕನನ್ನು ಅರ್ಥಾತ್ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಆದರೆ, ನನ್ನಂತಹ ಕಾಂಗ್ರೆಸ್‌ನ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರು ಈ ದೇಶದ ನಾಯಕತ್ವ ವಹಿಸಬೇಕು ಮತ್ತು ವಹಿಸಬೇಕು ಎಂಬ ಪರಿಪೂರ್ಣ ಆಶಯ ಹೊಂದಿದ್ದೇವೆ.
* ಹಾಗಿದ್ದಾರೆ, ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬಹುದಲ್ಲ?
ನಾವು ಈ ಚುನಾವಣೆಯನ್ನು ಜನ ಹಿತಕ್ಕೆ ಸಂಬಂಧಿಸಿದ ವಿಚಾರಗಳ ಆಧಾರದ ಮೇಲೆ ಎದುರಿಸುತ್ತಿದ್ದೇವೆಯೇ ಹೊರತು ಒಬ್ಬ ವ್ಯಕ್ತಿಯ ಸರ್ವಾಧಿಕಾರದ ಆಧಾರದ ಮೇಲೆ ಅಲ್ಲ. ಈ ಚುನಾವಣೆಯು ಒಬ್ಬ ವ್ಯಕ್ತಿಯನ್ನು ಈ ದೇಶದ ಸಾಮ್ರಾಟ ಎಂದು ಘೋಷಿಸಲು ನಡೆಯುತ್ತಿಲ್ಲ. ಆದರೆ, ಬಿಜೆಪಿಗೆ ಈ ಪ್ರಜಾಪ್ರಭುತ್ವ ಬೇಕಿಲ್ಲ. ಅವರಿಗೆ ಮೋದಿಯನ್ನು ಈ ದೇಶದ ಮಹಾರಾಜ ಎಂದು ಮಾಡುವ ಬಯಕೆಯಿದೆ. ಹೀಗಾಗಿಯೇ ಅವರು ಸಂವಿಧಾನ ಮೇಲೆ ದಾಳಿ ನಡೆಸುತ್ತಿದ್ದಾರೆ.
* ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕೇವಲ ಒಂದು ಸ್ಥಾನ ಗೆದ್ದಿತ್ತು. ಉಳಿದೆಲ್ಲ ಬಿಜೆಪಿ-ಜೆಡಿಎಸ್ ಗೆದ್ದಿದ್ದವು. ಈ ಬಾರಿ ಏನಾಗತ್ತೆ?
ಕಳೆದ ಬಾರಿಯ ಫಲಿತಾಂಶ ಈ ಬಾರಿ ಉಲ್ಟಾ ಆಗತ್ತೆ. ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ.
* ಚುನಾವಣೆ ನಂತರ ಸಂಪುಟ ಬದಲಾವಣೆಯಿದೆಯೇ?
ನಮ್ಮದು ಐದು ವರ್ಷಗಳ ಸ್ಥಿರ ಸರ್ಕಾರ. ಆದರೆ, ಪಕ್ಷವು ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸಚಿವರ ಕಾರ್ಯ ಸಾಧನೆ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ಖಂಡಿತ ನಡೆಯುತ್ತದೆ. ಇಂತಹ ಮರು ಪರಿಶೀಲನೆ ಯಾವಾಗ ನಡೆಯುವುದೋ ಅದನ್ನು ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸುತ್ತೇವೆ.
* ಅಧಿಕಾರ ಹಸ್ತಾಂತರ ಒಪ್ಪಂದ?
ಅಂತಹ ವಿಚಾರವನ್ನು ನಾನು ಯಾವತ್ತು ಹೇಳಿಲ್ಲವಲ್ಲ.
* ಆದರೆ, ಸರ್ಕಾರ ರಚನೆ ವೇಳೆ ಇಂತಹ ಒಪ್ಪಂದ ಆಗಿದೆ ಅಂತ ಗುಲ್ಲು ಇತ್ತಲ್ಲ?
ವದಂತಿಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.
* ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಒಗ್ಗೂಡಿದ್ದಾರೆ. ಅದರ ಪರಿಣಾಮವೇನಾಗಬಹುದು?
ನಾನು ದೇವೇಗೌಡರ ಬಗ್ಗೆ ಬಹಳ ಗೌರವ ಹೊಂದಿದ್ದೇನೆ. ಆದರೆ, ದೇವೇಗೌಡರು ಹಿಂದೆ ಏನು ಹೇಳಿದ್ದರು ಎಂಬುದನ್ನು ಸ್ಮರಿಸಬೇಕು. ಬಿಜೆಪಿ ಜತೆ ಸೇರುವುದಕ್ಕಿಂತ ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು ಎಂದು ಅವರು ಹೇಳಿದ್ದರು. ಅದೇ ವೇಳೆ ಮೋದಿ ಅವರು ದೇವೇಗೌಡರ ಕುಟುಂಬವು ದೇಶದಲ್ಲೇ ಅತ್ಯಂತ ಭ್ರಷ್ಟ ಕುಟುಂಬ ಎಂದು ಹೇಳಿದ್ದರು. ಈಗ ಅವರಿಬ್ಬರು ಒಂದಾಗಿದ್ದಾರೆ. ಇದು ಬಿಜೆಪಿ-ಜೆಡಿಎಸ್ ನಾಯಕತ್ವ ಸೈದ್ದಾಂತಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜನರು ಸೈದ್ದಾಂತಿಕ ದಿವಾಳಿತನವನ್ನು ಎಂದೂ ಕ್ಷಮಿಸುವುದಿಲ್ಲ. ಶಿಕ್ಷೆ ಖಂಡಿತ ನೀಡುತ್ತಾರೆ.
* ಕಾಂಗ್ರೆಸ್ ಈ ಬಾರಿ ರಾಜಕಾರಣಿಗಳ ಸಂಬಂಧಿಕರಿಗೆ ಅತಿ ಹೆಚ್ಚು ಸೀಟು ನೀಡಿದೆ? ಇದರ ಸಂದೇಶವೇನು?
ರಾಜ್ಯದ 28 ಸೀಟುಗಳ ಪೈಕಿ ಸಚಿವರ ಮಕ್ಕಳಿಗೆ ನೀಡಿರುವುದು ಕೇವಲ 5 ಮಾತ್ರ.
* ಸುಳ್ಳು. ಹತ್ತಕ್ಕೂ ಹೆಚ್ಚು ಮಂದಿಗೆ ನೀಡಿದೆಯಲ್ಲ?
ನಿಮ್ಮ ಅಭಿಪ್ರಾಯ ತಪ್ಪು. ಏಕೆಂದರೆ, ಸೀಟು ಪಡೆದವರಲ್ಲಿ ಕೆಲವರು ಸಚಿವರ ಮಕ್ಕಳೇ ಇರಬಹುದು. ಆದರೆ, ಅವರು ಎರಡು ದಶಕಗಳಿಂದ ಪಕ್ಷ ಹಾಗೂ ರಾಜಕಾರಣದಲ್ಲಿ ಇದ್ದಾರೆ. ಈಗ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಅವರಂತಹವರ ತಂದೆಯರು ರಾಜಕಾರಣದಲ್ಲಿ ಇದ್ದರೂ ಕೂಡ ತಮ್ಮ ತಂದೆಯರಿಂದಾಗಿಯೇ ಪ್ರವರ್ಧಮಾನಕ್ಕೆ ಬಂದವರಲ್ಲ. ಬದಲಾಗಿ ಸ್ವಂತ ಶಕ್ತಿಯಿಂದ ಮೇಲೆ ಬಂದವರು. ಅದೇ ರೀತಿ ಸೌಮ್ಯ ರೆಡ್ಡಿ ಅವರು ಮಾಜಿ ಶಾಸಕಿ ಹಾಗೂ ನಾಯಕಿ. ಅವರಿಗೆ ನೀವು ಸಚಿವ ರಾಮಲಿಂಗಾರೆಡ್ಡಿ ಮಗಳಾಗಿದ್ದಕ್ಕೆ ಟಿಕೆಟ್ ದೊರಕಿದೆ ಎಂದು ಪರಿಗಣಿಸುವುದು ಎಷ್ಟು ಸರಿ? ನಿಜವಾಗಿ ನೋಡಿದರೆ ಕೌಟುಂಬಿಕ ರಾಜಕಾರಣವಿರುವುದು ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ. ಕರ್ನಾಟಕದಲ್ಲಿ ಬಿಜೆಪಿ ಎಂಬುದು ಬಿಜೆಪಿಯಾಗಿ ಉಳಿದಿಲ್ಲ. ಅದು ಯಡಿಯೂರಪ್ಪ ಹಾಗೂ ಅವರ ಮಕ್ಕಳ ಪಕ್ಷವಾಗಿ ಬಿಟ್ಟಿದೆ.
* ಏನೇ ಲಾಜಿಕ್ ನೀಡಿದರೂ ಕಾಂಗ್ರೆಸ್‌ನಲ್ಲೂ ಕೌಟುಂಬಿಕ ರಾಜಕಾರಣ ಆಳವಾಗಿಯೇ ಇದೆ?
ಇಲ್ಲ. ಕಾಂಗ್ರೆಸ್‌ನ ಇಬ್ಬರು ಕಾರ್ಯಕರ್ತರು ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ನಿಂದ ಬೆಳೆದು ಬಂದ ಹಲವರು ಸಚಿವರಾಗಿದ್ದಾರೆ. ನಮ್ಮ ಸಚಿವ ಸಂಪುಟದ ಮೂರನೇ ಎರಡರಷ್ಟು ಮಂದಿ ತಳಹಂತದಿಂದ ಬೆಳೆದು ಬಂದವರು. ಆದರೆ, ಬಿಜೆಪಿಯು ಯಡಿಯೂರಪ್ಪ ಅಂಡ್ ಸನ್ಸ್ ಪಕ್ಷ ಹಾಗೂ ಜೆಡಿಎಸ್ ಕುಮಾರಸ್ವಾಮಿ ಅಂಡ್ ಸನ್ಸ್ ಅಂಡ್ ಬ್ರದರ್ಸ್ ಪಕ್ಷವಾಗಿ ಬಿಟ್ಟಿದೆ.
ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಪ್ರಧಾನಿ ಮೋದಿ
* ದೇಶದ ಚುನಾವಣೆ ವೆಚ್ಚ ಭರಿಸಲು ಕರ್ನಾಟಕವು ಕಾಂಗ್ರೆಸ್ ಪಾಲಿಗೆ ಎಟಿಎಂ ಆಗಿದೆ ಎಂಬ ಆರೋಪವಿದೆ?
ಹಿಂದಿಯಲ್ಲಿ ಚೋರ್ ಮಚಾಯೇ ಶೋರ್ ಎಂಬ ನಾಣ್ನುಡಿಯಿದೆ. ಅಂದರೆ, ಕಳವು ಮಾಡಲು ಬಂದವ ತಾನೇ ಕೂಗಿಕೊಂಡು ಜನರ ಗಮನವನ್ನು ಬೇರೇಡೆ ಸಳೆದ ಎಂದರ್ಥ. ಅದೇ ರೀತಿ ಕರ್ನಾಟಕದಲ್ಲಿ ಜನರ ಹಣವನ್ನು ಲೂಟಿ ಮಾಡಿದವರು. 40 ಪರ್ಸೆಂಟ್ ಹಣ ದೋಚಿದವರು ಬಿಜೆಪಿಯವರು ನೀಡುವ ಇಂತಹ ಕೂಗುಮಾರಿಗೆ ಏನರ್ಥವಿದೆ? ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ಈಗಲೂ ಇಲ್ಲವೇ. ನ್ಯಾಯಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿಲ್ಲವೆ. ಇದಷ್ಟೆ ಅಲ್ಲ. ಲೂಟಿಗೆ ಹೆಸರಾಗಿದ್ದ ಯಡ್ಡಿ ಹಾಗೂ ರೆಡ್ಡಿ ಈಗ ಮತ್ತೆ ಒಂದಾಗಿಲ್ಲವೇ? ಭವಿಷ್ಯದಲ್ಲಿ ಮತ್ತೆ ರಾಜ್ಯವನ್ನು ಲೂಟಿ ಮಾಡಲು ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಭಾಯಿ ಭಾಯಿ ಆಗಿ ಮತ್ತೆ ಸಜ್ಜಾಗಿಲ್ಲವೇ?
* ಈ ಬಾರಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿದರೆ ಆ ಹೆಗ್ಗಳಿಕೆ ಸಿಎಂಗೋ ಅಥವಾ ಕೆಪಿಸಿಸಿ ಅಧ್ಯಕ್ಷರಿಗೋ?
ಕಾಂಗ್ರೆಸ್ ಸಾಧನೆ ಮಾಡಿದರೆ ಅದರ ಶ್ರೇಯಸ್ಸು ಕರ್ನಾಟಕದ ಜನತೆ ಸಲ್ಲಲಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಎಲ್ಲರಿಗೂ ಶಕ್ತಿ ತುಂಬುವುದು ಕನ್ನಡಿಗರು. ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದರೆ ಅದರ ಶ್ರೇಯಸ್ಸು ಕನ್ನಡಿಗರಿಗೆ ಮಾತ್ರ.