‘ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ್ದು ಕಾಂಗ್ರೆಸ್’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಂಗಾರಪೇಟೆ (ಏ.22): ‘ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ್ದು ಕಾಂಗ್ರೆಸ್’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಲಿ, ಆಗ ನಾಳೆಯೇ ಕಾಮಗಾರಿ ಶುರು ಮಾಡಿ ಬೆಂಗಳೂರಿನಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ತಿಲಾಂಜಲಿ ಹಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಬಂಗಾರಪೇಟೆಯಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಬೃಹತ್ ರೋಡ್ ಶೋ ನಡೆಸಿದ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಶನಿವಾರ ಮಾಡಿದ ‘ಟ್ಯಾಂಕರ್ ಸಿಟಿ’ ಟೀಕೆಗೆ ಸಂಬಂಧಿಸಿ ಭಾಷಣದಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ಅದರ ಪರಿಹಾರಕ್ಕಾಗಿ ನಾವು ನಾಳೆಯೇ ಮೇಕೆದಾಟು ಕಾಮಗಾರಿ ಆರಂಭಿಸಲು ಸಿದ್ಧ. ಆದರೆ ಅವರು ಅನುಮತಿ ಕೊಡುತ್ತಾರೆಯೇ ಎಂದು ಕೇಂದ್ರ ಸರ್ಕಾರದ ಕಾಲೆಳೆದರು.
ಪ್ರತಿಪಕ್ಷಗಳಿಂದ ನೇಹಾ ಹತ್ಯೆ ಪ್ರಕರಣ ರಾಜಕೀಯಕ್ಕೆ ಬಳಕೆ: ಸಿಎಂ ಸಿದ್ದರಾಮಯ್ಯ
ನರೇಂದ್ರ ಮೋದಿ ಅವರು ಉಚಿತ ಅಕ್ಕಿ ಕೊಟ್ಟಿಲ್ಲ. ರಾಜ್ಯದಲ್ಲಿ ಉಚಿತ ಅಕ್ಕಿ ಕೊಟ್ಟಿದ್ದು ನಾನು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ ಐದು ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ದುಡ್ಡು ಕೊಡುತ್ತೇವೆ ಅಕ್ಕಿ ಪೂರೈಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ ಅವರು ಅಕ್ಕಿ ಪೂರೈಸುತ್ತಿಲ್ಲ. ಹತ್ತು ಕೆ.ಜಿ. ಉಚಿತ ಅಕ್ಕಿ ಕೊಟ್ಟರೆ ಬಡವರು ಸಿದ್ದರಾಮಯ್ಯ ಪರ ಆಗುತ್ತಾರೆ ಎಂದು ಅವರು ಕೊಡಲಿಲ್ಲ. ಹೀಗಾಗಿ ನಾವು ಅಕ್ಕಿ ಬದಲು ನಾವು 170 ರುಪಾಯಿ ಕೊಡುತ್ತಿದ್ದೇವೆ ಎಂದರು.
ತಾಕತ್ತಿದ್ರೆ ಭರವಸೆ ಈಡೇರಿಕೆ ಲೆಕ್ಕ ಕೊಡಿ: ಬಿಜೆಪಿ ಅಳೆದು ತೂಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರೂ ಅದರಲ್ಲಿರುವುದು ದೊಡ್ಡದಾದ ಖಾಲಿ ಚೊಂಬು ಮಾತ್ರ. ನರೇಂದ್ರ ಮೋದಿ ಮತ್ತು ಅವರ ಪಕ್ಷಕ್ಕೆ ದಮ್ಮು, ತಾಕತ್ ಇದ್ದರೆ ಹಿಂದಿನ ಎರಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಎಂಬ ಲೆಕ್ಕ ಮತದಾರರ ಮುಂದಿಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಇದೇ ವೇಳೆ, ‘ರೈತರು ದೆಹಲಿಗೆ ಬರದಂತೆ ರಸ್ತೆ ಮೇಲೆ ಮುಳ್ಳು ನೆಟ್ಟು, ಗುಂಡಿ ತೋಡಿದಿರಿ. ಇದೀಗ ಚುನಾವಣೆಯ ಕಾಲದಲ್ಲಿ ಮಾತ್ರ ತಪ್ಪದೆ ಹಾಜರಾಗಿ ರೈತರ ಪರ ಪ್ರೀತಿ-ಕಾಳಜಿಯ ಮಳೆ ಸುರಿಸಿದರೆ ರಾಜ್ಯದ ರೈತರು ನಿಮ್ಮನ್ನು ನಂಬುತ್ತಾರಾ?’ ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರೇ, ಎದೆ ಮೇಲೆ ಕೈಯಿಟ್ಟು ಆತ್ಮಸಾಕ್ಷಿಗೆ ಕಿವಿಕೊಟ್ಟು ಹೇಳಿ, ನೀವು ನಿಜವಾಗಿ ರೈತರ ಹಿತೈಷಿಗಳಾ? ಹಿತಶತ್ರುಗಳಾ? ರೈತರ ಪಾಲಿನ ಮರಣ ಶಾಸನದಂತಿದ್ದ ಕೃಷಿ ಕ್ಷೇತ್ರದ ಐದು ಕರಾಳ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೊಳಿಸಲು ಪ್ರಯತ್ನಿಸಿದವರು ಯಾರು? ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ 700 ಅಮಾಯಕರು ಪೊಲೀಸರ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಾಗ ಕನಿಷ‍್ಠ ಸಂತಾಪವನ್ನೂ ಸೂಚಿಸದ ನಿಮಗೆ ರೈತರ ಸಮ್ಮಾನ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.