ತಲೆಮಾರುಗಳ ಹೋರಾಟ, ಸೇವೆ ಮತ್ತು ತ್ಯಾಗದ ಮಾಡಿದವರಿಗೆ ಇಂದು ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಮೋದಿಯವರು ತಮ್ಮ ಸರ್ಕಾರಿ ಪರಿವಾರದಲ್ಲಿ ತಮ್ಮಿಷ್ಟಕ್ಕೆ ತಕ್ಕಂತೆ ಕುಟುಂಬ ಹಿನ್ನೆಲೆ ರಾಜಕೀಯದಿಂದ ಬಂದವರಿಗೆ ಮಂತ್ರಿಗಿರಿ ಹಂಚಿದ್ದಾರೆ ಎಂದು ಕಿಡಿಕಾರಿದ ರಾಹುಲ್ ಗಾಂಧಿ
ನವದೆಹಲಿ(ಜೂ.12): ಕಾಂಗ್ರೆಸ್ ಪರಂಪರೆ ರಾಜಕೀಯ ಮಾಡುತ್ತದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಖುದ್ದು ಇಂದು ‘ಪರಿವಾರ ಮಂಡಲ’ದ ಮಂತ್ರಿಮಂಡಲ ರಚಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ರಾಹುಲ್, ‘ತಲೆಮಾರುಗಳ ಹೋರಾಟ, ಸೇವೆ ಮತ್ತು ತ್ಯಾಗದ ಮಾಡಿದವರಿಗೆ ಇಂದು ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಮೋದಿಯವರು ತಮ್ಮ ಸರ್ಕಾರಿ ಪರಿವಾರದಲ್ಲಿ ತಮ್ಮಿಷ್ಟಕ್ಕೆ ತಕ್ಕಂತೆ ಕುಟುಂಬ ಹಿನ್ನೆಲೆ ರಾಜಕೀಯದಿಂದ ಬಂದವರಿಗೆ ಮಂತ್ರಿಗಿರಿ ಹಂಚಿದ್ದಾರೆ’ ಎಂದು ಕಿಡಿಕಾರಿದ್ದಾರೆ,
ಇದನ್ನು ಉದಾಹರಣೆ ನೀಡಿರುವ ಅವರು, ‘ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪುತ್ರ ಎಚ್‌ಡಿ ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವ ಮಾಧವ್ ರಾವ್ ಸಿಂಧಿಯಾ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ, ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್ ರಿಂಚಿನ್ ಖರು ಅವರ ಪುತ್ರ ಕಿರಣ್ ರಿಜಿಜು, ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ ಅವರ ಸೊಸೆ ರಕ್ಷಾ ಖಾಡ್ಸೆ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಮತ್ತು ಮಧ್ಯಪ್ರದೇಶದಲ್ಲಿ ಮಂತ್ರಿ ಆಗಿದ್ದ ಜಯಶ್ರೀ ಬ್ಯಾನರ್ಜಿ ಅವರ ಅಳಿಯ ಜೆಪಿ ನಡ್ಡಾ ಅವರಿಗೆ ಮಂತ್ರಿಗಿರಿ ನೀಡಲಾಗಿದೆ. ಇವರು ಎನ್‌ಡಿಎಯ ‘ಪರಿವಾರ ಮಂಡಲ’ದ ಭಾಗ’ ಎಂದು ಕುಟುಕಿದ್ದಾರೆ.
ನಾನು ಸಂಸತ್ತಲ್ಲಿ ‘ನೀಟ್ ವಿದ್ಯಾರ್ಥಿಗಳ’ ದನಿ ಆಗುವೆ: ರಾಹುಲ್ ಗಾಂಧಿ
ಈ ಪಟ್ಟಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್, ಮಾಜಿ ಕೇಂದ್ರ ಸಚಿವ ಯರ್ರನ್ ನಾಯ್ಡು ಅವರ ಪುತ್ರ ರಾಮ್ ಮೋಹನ್ ನಾಯ್ಡು, ಮಾಜಿ ಸಂಸದ ಜಿತೇಂದ್ರ ಪ್ರಸಾದ ಅವರ ಪುತ್ರ ಜಿತಿನ್ ಪ್ರಸಾದ, ಹರಿಯಾಣದ ಮಾಜಿ ಮುಖ್ಯಮಂತ್ರಿ ರಾವ್ ಬೀರೇಂದ್ರ ಸಿಂಗ್ ಅವರ ಮಗ ರಾವ್ ಇಂದರ್‌ಜಿತ್ ಸಿಂಗ್, ಮಾಜಿ ಕೇಂದ್ರ ಸಚಿವ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ ಪಿಯೂಷ್ ಗೋಯಲ್, ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ರವನೀತ್ ಸಿಂಗ್ ಬಿಟ್ಟು, ಅಪ್ನಾ ದಳದ ಸಂಸ್ಥಾಪಕ ಸೋನೆಲಾಲ್ ಪಟೇಲ್ ಅವರ ಪುತ್ರಿ ಅನುಪ್ರಿಯಾ ಪಟೇಲ್ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಮಹಾರಾಜ್ ಆನಂದ್ ಸಿಂಗ್ ಪುತ್ರ ಕೀರ್ತಿ ವರ್ಧನ್ ಸಿಂಗ್ ಅವರನ್ನೂ ಸೇರಿಸಿದ್ದಾರೆ.
ಭದ್ರಾವತಿ ಉಕ್ಕು ಕಾರ್ಖಾನೆ ಉಳಿಸಿ: ಸಚಿವ ಎಚ್‌ಡಿಕೆಗೆ ಕಾಂಗ್ರೆಸ್ ಸವಾಲ್
ನವದೆಹಲಿ: ಕೇಂದ್ರ ಸರ್ಕಾರದಲ್ಲಿ ಉಕ್ಕು ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕರ್ನಾಟಕದ ಭದ್ರಾವತಿಯೂ ಸೇರಿದಂತೆ ದೇಶದ ಪ್ರಮುಖ ಐದು ಉಕ್ಕು ಉತ್ಪಾದನಾ ಘಟಕಗಳನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಬಹಿರಂಗವಾಗಿ ಪ್ರಕಟಿಸುವಂತೆ ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಸವಾಲ್ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜೈರಾಂ, ‘ಮೋದಿ ಸರ್ಕಾರದಲ್ಲಿ ಉಕ್ಕಿನ ಮಂತ್ರಿಯಾದ ಕುಮಾರಸ್ವಾಮಿಗೆ 5 ಸವಾಲುಗಳನ್ನು ಹಾಕುತ್ತೇನೆ. ದೇಶದಲ್ಲಿ ಪ್ರಮುಖವಾಗಿ 5 ಉಕ್ಕು ಕೈಗಾರಿಕೆಗಳಿವೆ. ವಿಶಾಖಪಟ್ಟಣ, ಭದ್ರಾವತಿ, ನಾಗರ್ನಾರ್, ಬಸ್ತರ್ ಮತ್ತು ದುರ್ಗಾಪುರದಲ್ಲಿರುವ ಉಕ್ಕು ಕಾರ್ಖಾನೆಗಳನ್ನು ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ನಿರುತ್ತೇಜಿಸಿ ನಷ್ಟವಾಗುವಂತೆ ಮಾಡುವ ಮೂಲಕ ಖಾಸಗೀಕರಣ ಮಾಡಲು ಹೊರಟಿದೆ. ಆ ಕಾರ್ಖಾನೆಗಳು ಖಾಸಗೀಕರಣ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಪ್ರಕಟಿಸಲಿ’ ಎಂದು ಆಗ್ರಹಿಸಿದ್ದಾರೆ.