ನಾನು ಸಂಸತ್ತಲ್ಲಿ ‘ನೀಟ್ ವಿದ್ಯಾರ್ಥಿಗಳ’ ದನಿ ಆಗುವೆ: ರಾಹುಲ್ ಗಾಂಧಿ
ನೀಟ್-ಯುಜಿ ವೈದ್ಯಕೀಯ ಪ್ರವೇಶದ ವಿಚಾರವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೀಟ್ ಪರೀಕ್ಷಾ ಅಕ್ರಮಗಳು ಮೋದಿ ಮತ್ತೆ ಪ್ರಧಾನಿ ಆಗುವ ಮೊದಲೇ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಶಯಗಳನ್ನು ಧ್ವಂಸಗೊಳಿಸಿವೆ’ ಎಂದು ಆರೋಪಿಸಿದ್ದಾರೆ.
ನವದೆಹಲಿ (ಜೂ.10): ನೀಟ್-ಯುಜಿ ವೈದ್ಯಕೀಯ ಪ್ರವೇಶದ ವಿಚಾರವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೀಟ್ ಪರೀಕ್ಷಾ ಅಕ್ರಮಗಳು ಮೋದಿ ಮತ್ತೆ ಪ್ರಧಾನಿ ಆಗುವ ಮೊದಲೇ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಶಯಗಳನ್ನು ಧ್ವಂಸಗೊಳಿಸಿವೆ’ ಎಂದು ಆರೋಪಿಸಿದ್ದಾರೆ. ಅಲ್ಲದೆ, ‘ನಾನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಮತ್ತು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಲವಾಗಿ ಪ್ರಸ್ತಾಪಿಸುತ್ತೇನೆ’ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತಮಗೆ ಬೇಕಾದ 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸುಖಾಸುಮ್ಮನೇ ಗ್ರೇಸ್ ಅಂಕ ನೀಡಿ ಕೇಂದ್ರ ಸರ್ಕಾರವು ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಕಾಂಗ್ರೆಸ್ ಇತ್ತೀಚೆಗೆ ಆಪಾದಿಸಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ನಿರಾಕರಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯವು, ಗ್ರೇಸ್ ಅಂಕಗಳ ವಿವಾದದ ಬಗ್ಗೆ ಮಾತ್ರ ತನಿಖೆಗೆ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ.
ರಾಜ್ಯದಲ್ಲಿ ಸೋತಿರುವ ಲೋಕಸಭೆ ರಿಸಲ್ಟ್ ಬಗ್ಗೆ ವರದಿ ಕೇಳಿದ ರಾಹುಲ್ ಗಾಂಧಿ
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ರಾಹುಲ್, ‘ಶಿಕ್ಷಣ ಮಾಫಿಯಾ ಮತ್ತು ಸರ್ಕಾರಿ ಯಂತ್ರಗಳ ಒಳ ಒಪ್ಪಂದದಿಂದ ನಡೆಯುತ್ತಿರುವ ಈ ‘ಪೇಪರ್ ಸೋರಿಕೆ ಉದ್ಯಮ’ವನ್ನು ಎದುರಿಸಲು ಕಾಂಗ್ರೆಸ್ ದೃಢವಾದ ಯೋಜನೆ ಮಾಡಿದೆ. ನಾನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಮತ್ತು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಲವಾಗಿ ಪ್ರಸ್ತಾಪಿಸುತ್ತುತ್ತೇನೆ’ ಎಂದಿದ್ದಾರೆ.
ಆರೋಪಗಳ ಬಗ್ಗೆ ಪರಿಶೀಲನೆಗೆ ಸಮಿತಿ: ನೀಟ್ ಪರೀಕ್ಷೆಗೆ ವಿಳಂಬವಾಗಿ ಪತ್ರಿಕೆ ಪಡೆದ ಕಾರಣಕ್ಕೆ ಉಂಟಾದ ಸಮಯ ನಷ್ಟ ಸರಿದೂಗಿಸಲು 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಿರುವ ‘ಗ್ರೇಸ್ ಮಾರ್ಕ್ಸ್/ ಕಂಪನ್ಸೆಟರಿ ಮಾರ್ಕ್ಸ್’ ಕುರಿತು ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.
ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಹರಿದ ಒಎಂಆರ್ ಪತ್ರಿಕೆ ಮತ್ತು ತಪ್ಪು ಪತ್ರಿಕೆಯನ್ನು ನೀಡಿದ ಕಾರಣ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ನಿಗದಿಪಡಿಸಿದ ಸಮಯ ನಷ್ಟವಾಗಿತ್ತು. ಈ ಕಾರಣಕ್ಕೆ ಪಂಜಾಬ್, ಹರಿಯಾಣ, ದಿಲ್ಲಿ ಮತ್ತು ಛತ್ತೀಸ್‌ಗಢ ಹೈಕೋರ್ಟ್‌ಗಳಿಗೆ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರನ್ನು ಒಳಗೊಂಡ ದೂರು ಪರಿಹಾರ ಸಮಿತಿ ರಚಿಸಲಾಗಿತ್ತು.
ಲೋಕಸಭೆಯಲ್ಲಿ ಲೀಡ್ ಕೊಡಿಸದ ರಾಜ್ಯದ 17 ಮಂತ್ರಿಗಳಿಗೆ ರಾಹುಲ್ ಗಾಂಧಿ ಚಾಟಿ
ಸಮಿತಿಯು ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಪರಿಶೀಲಿಸಿ, ನಷ್ಟವಾಗಿದ್ದ ಸಮಯ ಮತ್ತು ವಿದ್ಯಾರ್ಥಿಗಳ ಉತ್ತರಿಸುವ ಸಾಮರ್ಥ್ಯ ಆಧಾರದ ಮೇಲೆ ಗ್ರೇಸ್ ಮಾರ್ಕ್ಸ್ ನೀಡಿತ್ತು. ಗ್ರೇಸ್ ಮಾರ್ಕ್ಸ್ ನೀಡಲು ಅನುಸರಿಸಬೇಕಾದ ಮಾನದಂಡದ ಕುರಿತು 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪಾಲನೆ ಮಾಡಲಾಗಿದೆ. ಆದರೂ, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಈ ಕುರಿತು ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಎನ್‌ಟಿಎ ತಿಳಿಸಿದೆ.