ಆಡಳಿತ ಯಂತ್ರಕ್ಕೆ ಚುರುಕು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ 5 ಇಲಾಖೆಗಳ ಪ್ರಗತಿ ಪರಿಶೀಲಿಸಿದ್ದಾರೆ ಹಾಗೂ ತೆರಿಗೆ, ರಾಜಸ್ವ ಸಂಗ್ರಹ ಹೆಚ್ಚಳ, ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು (ಜೂ.12): ಲೋಕಸಭೆ ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ 5 ಇಲಾಖೆಗಳ ಪ್ರಗತಿ ಪರಿಶೀಲಿಸಿದ್ದಾರೆ ಹಾಗೂ ತೆರಿಗೆ, ರಾಜಸ್ವ ಸಂಗ್ರಹ ಹೆಚ್ಚಳ, ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇದರಲ್ಲಿ ನಿಗದಿತ ಗುರಿ ತಲುಪದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ, ವಾಣಿಜ್ಯ, ನೋಂದಣಿ ಮುದ್ರಾಂಕ, ಗಣಿ ಭೂ ವಿಜ್ಞಾನ ಮತ್ತು ಸಾರಿಗೆ ಇಲಾಖೆಗಳು ನಿಗದಿತ ತೆರಿಗೆ, ರಾಜಸ್ವ ಸಂಗ್ರಹದ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು. ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿನ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸುತ್ತೇನೆ. ಬೇರೆ ಯಾವ ಪ್ರಭಾವಕ್ಕೂ ಮಣೆ ಹಾಕುವುದಿಲ್ಲ. ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ಗುರಿ ನಿಗದಿ ಪಡಿಸಲಾಗಿರುತ್ತದೆ. ಬರುವ ಸೆಪ್ಟಂಬರ್‌ನಲ್ಲಿ ಸಭೆ ನಡೆಸುವ ವೇಳೆ ನಿಗದಿತ ಗುರಿ ತಲುಪದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಎಚ್‌ಡಿಕೆ ಮಂಡ್ಯಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಳ್ತಾರೆ: ಡಿ.ಕೆ.ಸುರೇಶ್
ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ನಿಗದಿತ ತೆರಿಗೆ ಸಂಗ್ರಹಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು. ಅಂದಾಜು, ಜಾರಿ, ಮೇಲ್ಮನವಿ ತಂಡಗಳು ನಿರಂತರ ಸಹಕಾರದೊಂದಿಗೆ ಕೆಲಸ ಮಾಡಬೇಕೆಂದು ಸೂಚಿಸಿದರು. ಸಮಗ್ರ ಸರಕು ಸೇವಾ ತೆರಿಗೆ (ಐಜಿಎಸ್‌ಟಿ) ನಕಾರಾತ್ಮಕ ಸೆಟಲ್ ಮೆಂಟ್ ಆಗುವ ಕಡೆ ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕುಗೊಳಿಸಬೇಕು.
ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗದಿ ಪಡಿಸಲು ನಿರ್ದೇಶನ ನೀಡಿದರು. ಮೇಲ್ಮನವಿ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ನಡೆಸಬೇಕು. ಬೆಂಗಳೂರಿನಲ್ಲಿ ಹೆಚ್ಚು ದಾಖಲಾಗುತ್ತಿರುವ ಮೇಲ್ಮನವಿಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರಾಗಿದ್ದು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಕಿರುಕುಳ ನೀಡಬೇಡಿ: ಅಬಕಾರಿ ಇಲಾಖಾ ಪ್ರಗತಿ ಪರಿಶೀಲನೆ ವೇಳೆ ಅಬಕಾರಿ ಪರವಾನಗಿ ನವೀಕರಣಕ್ಕೆ ಅಧಿಕಾರಿಗಳು ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಕಳ್ಳಸಾಗಣೆ ಮೂಲಕ ನುಸುಳುವ ಮದ್ಯವನ್ನು ತಡೆಗಟ್ಟಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ಗುರಿ ನಿಗದಿ ಪಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡಬೇಕು. ಇಲಾಖೆಯಲ್ಲಿ ಕಾನ್ಸ್‌ಟೇಬಲ್, ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಅಬಕಾರಿ ಇಲಾಖೆಯ ಆಯುಕ್ತ ಡಾ . ರವಿಶಂಕರ್ ಉಪಸ್ಥಿತರಿದ್ದರು.
ಜಿಐಎಸ್ ಆಸ್ತಿ ವಿವರದಿಂದ ತೆರಿಗೆ ಸೋರಿಕೆ ತಡೆಗಟ್ಟಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು, ಜಿಐಎಸ್ ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿಯನ್ನು ಜಾರಿಗೊಳಿಸುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಗಮನ ಹರಿಸಿ. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
3 ಡಿಸಿಎಂ ಹುದ್ದೆ ಬೇಕು: ಮತ್ತೆ ಕೂಗೆಬ್ಬಿಸಿದ ಸಚಿವ ರಾಜಣ್ಣ!
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇಲಾಖೆಯಲ್ಲಿ ಈ ವರೆಗಿನ ತೆರಿಗೆ ಸಂಗ್ರಹ ನಿಗದಿತ ಗುರಿಗೆ ಶೇ.110 ರಷ್ಟಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣಾ ಕ್ರಮಗಳಿಂದ ಹೆಚ್ಚಿನ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. 2023-24 ನೇ ಸಾಲಿನಲ್ಲಿ 20 ಸಾವಿರ ಕೋಟಿ ರು. ಗುರಿಗೆ ಎದುರಾಗಿ 20,287.30 ಕೋಟಿ ರು. ರಾಜಸ್ವ ಸಂಗ್ರಹವಾಗಿದೆ. ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲ್ ಆಗಿ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.