* ನಾಯಕರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಶಿಸ್ತು ಕ್ರಮ?
* ‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಪ್ರಯೋಜಕರು’ ಎಂದಿದ್ದ ಲಕ್ಷ್ಮೀನಾರಾಯಣ
* ಸೀತಾರಾಂ ಅವರು ಸಭೆ ನಡೆಸಿ ನಾಯಕರ ಬಗ್ಗೆ ಮಾತನಾಡಿರುವುದು ಗಮನಕ್ಕೆ ಬಂದಿದೆ
ಬೆಂಗಳೂರು(ಜೂ.30): ಯಾರೇ ಆದರೂ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತನಾಡಬಾರದು. ಲಕ್ಷ್ಮೀನಾರಾಯಣ ಹಾಗೂ ಎಂ.ಆರ್. ಸೀತಾರಾಂ ಅವರ ಹೇಳಿಕೆಯನ್ನು ನಾನೂ ಗಮನಿಸಿದ್ದೇನೆ. ಇದು ಮೇಲ್ನೋಟಕ್ಕೆ ಪಕ್ಷ ವಿರೋಧಿ ಚಟುವಟಿಕೆಯಾಗಿರುವುದರಿಂದ ಆದಷ್ಟು ಬೇಗ ನೋಟಿಸ್ ನೀಡುತ್ತೇನೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದ್ದಾರೆ.
‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಪ್ರಯೋಜಕರು’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಹೇಳಿಕೆ ನೀಡಿದ್ದರು. ಬೆಂಬಲಿಗರ ಸಭೆ ನಡೆಸಿದ್ದ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಅವರು ಪಕ್ಷದ ನಾಯಕ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಈಗ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ: ಲಕ್ಷ್ಮೀ ಹೆಬ್ಬಾಳಕರ
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಹಮಾನ್ ಖಾನ್, ಸೀತಾರಾಂ ಅವರು ಸಭೆ ನಡೆಸಿ ನಾಯಕರ ಬಗ್ಗೆ ಮಾತನಾಡಿರುವುದು ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ಇದು ಪಕ್ಷ ವಿರೋಧಿ ಚಟುವಟಿಕೆ. ಸೀತಾರಾಂ ಆಗಲಿ ಇಲ್ಲವೇ ಅವರಿಗಿಂತ ದೊಡ್ಡವರೇ ಆಗಲಿ, ಯಾರು ಎಷ್ಟೇ ದೊಡ್ಡವರಾದರೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸೀತಾರಾಂ ನಡೆಸಿದ ಸಭೆಯಲ್ಲಿ ಹಲವರು ಭಾಗವಹಿಸಿದ್ದರು. ಶಾಸಕ ಸಂಗಮೇಶ್, ಪಕ್ಷದ ಕೆಲವು ಪದಾಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲ ಆ ಸಭೆಯಲ್ಲಿ ಯಾಕೆ ಭಾಗವಹಿಸಿದ್ದರು. ಈ ಬಗ್ಗೆ ಅವರಿಗೂ ನೋಟಿಸ್ ಕೊಡುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿದ್ದಾರೆ. ಅವರು ರಾಜ್ಯಕ್ಕೆ ವಾಪಸ್ಸಾದ ಬಳಿಕ ಚರ್ಚಿಸಿ ನೋಟಿಸ್ ಕೊಡುತ್ತೇವೆ ಎಂದು ಹೇಳಿದರು.