
ಮಡಿಕೇರಿ: ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammed Nalapad) ಅವರು ಕೊಡಗಿನ ಅಳಿಯನಾಗಿದ್ದಾರೆ. ಮಡಿಕೇರಿ ಹೊರವಲಯದ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ಇಂದು ನಲಪಾಡ್ ಮತ್ತು ಮಲಿಹಾ ಫಾತಿಮಾ ಅವರ ನಿಕಾಹ್ ಅದ್ಧೂರಿಯಾಗಿ ನೆರವೇರಿದೆ.
ನಲಪಾಡ್ ಕೈಹಿಡಿದಿರುವ ಮಲಿಹಾ ಫಾತಿಮಾ ಅವರು ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪ್ರಮುಖ ಮುಖಂಡ ಎಸ್.ಐ. ಮುನೀರ್ ಅಹಮ್ಮದ್ ಅವರ ಮೂರನೇ ಪುತ್ರಿ. ಮಲಿಹಾ ಕೇವಲ ಸುಂದರಿಯಷ್ಟೇ ಅಲ್ಲ, ಅತ್ಯಂತ ವಿದ್ಯಾವಂತೆ ಕೂಡ ಹೌದು.ಇವರು ಕಾನೂನು ಪದವೀಧರೆಯಾಗಿದ್ದಾರೆ. ಪ್ರಸ್ತುತ ಅಮೆರಿಕ ಮೂಲದ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ತಂದೆ ಮುನೀರ್ ಅಹಮ್ಮದ್ ಅವರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಎ. ಹಸನಬ್ಬ ಅವರ ಸಂಬಂಧಿ. ಶಾಸಕ ಎನ್.ಎ. ಹ್ಯಾರಿಸ್ ಮತ್ತು ವಧುವಿನ ತಂದೆ ಮುನೀರ್ ಅಹಮ್ಮದ್ ಅವರು ಕಳೆದ ಎರಡು ದಶಕಗಳಿಂದ ಅತ್ಯಪ್ತ ಸ್ನೇಹಿತರು. ಈ ದೀರ್ಘಕಾಲದ ಸ್ನೇಹವೇ ಈಗ ಎರಡೂ ಕುಟುಂಬಗಳ ನಡುವೆ ವಿವಾಹ ಸಂಬಂಧಕ್ಕೆ ನಾಂದಿ ಹಾಡಿದೆ. ಕುಟುಂಬಸ್ಥರ ಸಮ್ಮತಿಯೊಂದಿಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಮಡಿಕೇರಿಯ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್ ಅವರ ಒಡೆತನದ 'ಕೂರ್ಗ್ ವೈಲ್ಡರ್‌ನೆಸ್' ರೆಸಾರ್ಟ್‌ನಲ್ಲಿ ಆಗಸ್ಟ್ 15 ರಿಂದಲೇ ಸಂಭ್ರಮ ಶುರುವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ನಿಕಾಹ್ ನೆರವೇರಿದೆ. ಆಗಸ್ಟ್ 17 (ನಾಳೆ) ಸಂಜೆ ಗಣ್ಯರಿಗಾಗಿ ಭರ್ಜರಿ ವಿವಾಹ ಆರತಕ್ಷತೆ (Reception) ನಡೆಯಲಿದೆ. ಈ ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಂಪತಿ ಸಮೇತ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರಾದ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಮದುವೆಗೆ ಮತ್ತಷ್ಟು ಮೆರುಗು ನೀಡಿದ್ದಾರೆ.
ಮೊಹಮ್ಮದ್ ನಲಪಾಡ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಈ ಹಿಂದೆ 2017ರಲ್ಲಿ ಅವರು ಸಮ್ರೀನ್ ಸೇಲಂ ಎಂಬವರನ್ನು ವಿವಾಹವಾಗಿದ್ದರು. ಕೆಲವು ಕಾರಣಗಳಿಂದ ಆ ಸಂಬಂಧ ಅಂತ್ಯಗೊಂಡಿತ್ತು. ಇದೀಗ ಮಲಿಹಾ ಫಾತಿಮಾ ಅವರೊಂದಿಗೆ ನಲಪಾಡ್ ಹೊಸ ಜೀವನ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.