Latest Videos

ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

By Govindaraj SFirst Published Feb 15, 2023, 11:08 PM IST
Highlights

ಚುನಾವಣೆ ಹತ್ತಿರವಾಗುತ್ತಿದ್ದಂತೇ ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮಾವೇಶ, ಜೆಡಿಎಸ್ ರಥಯಾತ್ರೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರತಿಧ್ವನಿ ಯಾತ್ರೆಯನ್ನು ಪ್ರಾರಂಭಿಸಿದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಫೆ.15): ಚುನಾವಣೆ ಹತ್ತಿರವಾಗುತ್ತಿದ್ದಂತೇ ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮಾವೇಶ, ಜೆಡಿಎಸ್ ರಥಯಾತ್ರೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರತಿಧ್ವನಿ ಯಾತ್ರೆಯನ್ನು ಪ್ರಾರಂಭಿಸಿದೆ. ಇಂದು ಶಿರಸಿ ಹಾಗೂ ಸಿದ್ಧಾಪುರದಲ್ಲಿ ಸಭೆಯ ಮೂಲಕ ಕಾಂಗ್ರೆಸ್ ಯಾತ್ರೆಯನ್ನು ನಡೆಸಿದೆಯಾದ್ರೂ ರಾಜ್ಯದ ಘಟಾನುಘಟಿ ನಾಯಕರನ್ನು ಕಾಣದ ಕಾರ್ಯಕ್ರಮ ಸಂಪೂರ್ಣ ನೀರಸವಾಗಿತ್ತು. ಈ ನಡುವೆಯೂ ಕಾಂಗ್ರೆಸ್ ಮುಖಂಡರು ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತ‌ ಒಂದು ಸ್ಟೋರಿ ಇಲ್ಲಿದೆ ನೋಡಿ. 

ಹೌದು! ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮಾವೇಶ, ಜೆಡಿಎಸ್ ರಥಯಾತ್ರೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರತಿಧ್ವನಿ ಯಾತ್ರೆಯ ಮೂಲಕ ಜಿಲ್ಲೆಯಲ್ಲಿ ಮತಬೇಟೆಗೆ ಕಾಲಿರಿಸಿದೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಬದಲು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ‌.ಹರಿಪ್ರಸಾದ್, ಮಾಜಿ ಸಚಿವ, ಶಾಸಕ ಆರ್.ವಿ. ದೇಶ್‌ಪಾಂಡೆ ಹಾಗೂ ಸ್ಥಳೀಯ ಮುಖಂಡರು ಮಾತ್ರ ಭಾಗವಹಿಸಿ ಶಿರಸಿಯ ಅಕ್ಷಯ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡರು, ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದರು. 

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ‌. ಹರಿಪ್ರಸಾದ್ ಮಾತನಾಡಿ, ಬಿಜೆಪಿಯವರು 14 ಮಂದಿ ಕಾಂಗ್ರೆಸ್ ಶಾಸಕರು ಹಾಗೂ 3 ಮಂದಿ ಜೆಡಿಎಸ್ ಶಾಸಕರನ್ನು ಖರೀದಿಸಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ಮಾಡಿದ್ರು. ಆದರೆ, ಅವರನ್ನು ಯಾಕೆ ತೆಗೆದ್ರು ಅನ್ನೋದು ಇಂದಿಗೂ ಯಾರಿಗೂ ಹೇಳಿಲ್ಲ. ಭ್ರಷ್ಟಾಚಾರ ಆರೋಪ, ಸ್ವಜನ‌ ಪಕ್ಷಪಾತ ಅಥವಾ ಇನ್ಯಾವುದೋ ಕಾರಣಕ್ಕೆ ತೆಗೆದಿದ್ದಾರಾ ಎಂದು ತಿಳಿದಿಲ್ಲ. ಅವರನ್ನು ಉಪಯೋಗಿಸಿಕೊಂಡ ಬಳಿಕ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಸ್ತೆ, ಚರಂಡಿ, ನೀರು, ಅಡಿಕೆ ಬಗ್ಗೆ ಮಾತನಾಡಿಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾರೆ. 

ಪಾಪ ಅವರಿಗೆ ಲವ್ವಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿರಬೇಕು, ಅದ್ಕೆ ಹೀಗೆಲ್ಲಾ ಮಾತನಾಡ್ತಾರೆ. ಕಾಂಗ್ರೆಸ್ ಜನಸಾಮಾನ್ಯರ ಕಷ್ಟಗಳ ಬಗ್ಗೆ ಸ್ಪಂದಿಸುವ ಬಗ್ಗೆ ಮಾತನಾಡಿದ್ರೆ, ಬಿಜೆಪಿ ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡುತ್ತೆ ಎಂದು ವ್ಯಂಗ್ಯವಾಡಿದರು. ಭೋಪಾಲದ ಲೋಕಸಭಾ ಸದಸ್ಯೆ ಪ್ರಗ್ಯಾ ಸಿಂಗ್ ಶಿವಮೊಗ್ಗಕ್ಕೆ ಬಂದು ಮನೆಯಲ್ಲಿ ತಲವಾರು, ಚಾಕು- ಚೂರಿ ಮೊಣಚು ಮಾಡಿಟ್ಟುಕೊಳ್ಳಿ ಅಂತಾಳೆ. ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡ್ತೀರಾ.. ಅಥವಾ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡ್ತೀರಾ ಎಂದು ಜನರು ನಿರ್ಧರಿಸಬೇಕಿದೆ. ಕರಾವಳಿ ಪ್ರದೇಶವನ್ನು ಹಿಂದುತ್ವದ ಲ್ಯಾಬೋರೇಟರಿ ಮಾಡಲಾಗಿದೆ‌. 

ಸಾವರ್ಕರ್ ಕೂಡಾ ತಮ್ಮ ಆತ್ಮಕಥೆಯಲ್ಲಿ ಹಿಂದುತ್ವ ಹಾಗೂ ಹಿಂದು ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ‌‌. ಹಿಂದುತ್ವ ರಾಜಕೀಯ ಘೋಷಣೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿ, ವಿವೇಕಾನಂದ ಹಾಗೂ ನಾವು ಕಾಂಗ್ರೆಸ್ ಮುಖಂಡರು ಪಾಲಿಸ್ತಿರೋದು ನಿಜವಾದ ಹಿಂದೂ ಧರ್ಮ ಎಂದು ಬಿ.ಕೆ.‌ಹರಿಪ್ರಸಾದ್ ಹೇಳಿದರು. ಶಿರಸಿ ರಸ್ತೆಯಲ್ಲಿ ಸಾಕಷ್ಟು ಬಾರಿ ಸಾಗಿದ್ದೇನೆ.‌  ಬಹಳಷ್ಟು ಜನರು ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರ್ತಾರೆ. ಇದರಿಂದ ರಸ್ತೆಗಳಿಗೆ ಚಿನ್ನದ ಲೇಪ ಹಾಕ್ತೇವೆ ಎಂದು ಹೇಳಿದ್ರು. ಅವರು ಹಾಕಿದ ಬಂಗಾರದ ಲೇಪವನ್ನು ಜನರು ಕಿತ್ತುಕೊಂಡು ಹೋಗಿರಬೇಕು. 

ಅದಕ್ಕೆ ರಸ್ತೆ ಸರಿಯಿಲ್ಲ ಎಂದು ವ್ಯಂಗ್ಯವಾಡಿದರು. ಈ ಹಿಂದೆ ಬಿಬಿಸಿಯನ್ನು ಹೊಗಳ್ತಿದ್ದ ಮೋದಿ, ಅದೇ ಬಿಬಿಸಿಯಲ್ಲಿ ಗುಜರಾತ್‌ನಲ್ಲಾದ ಅನಾಹುತ, ಧಂಗೆಗಳ ಬಗ್ಗೆ ಪ್ರಸಾರ ಮಾಡಿದ್ದಕ್ಕೆ ಉಲ್ಟಾ ಹೊಡೆದಿದ್ದಾರೆ. ಇವರನ್ನು ಯಾರಾದ್ರೂ ಪ್ರಶ್ನೆ ಮಾಡಿದ್ರೆ ಐಟಿ, ಸಿಬಿಐ, ಇಡಿ ದಾಳಿ ಮಾಡಿಸ್ತಾರೆ. ಇಡಿಯಂದ್ರೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿದೆ. ವಿರೋಧ ಪಕ್ಷದವರನ್ನು ಬಿಟ್ರೆ ಬಿಜೆಪಿಯವರ ಮೇಲೆ ಇಡಿ ದಾಳಿ ಮಾಡುವುದಿಲ್ಲ. ಬಸವರಾಜ ಯತ್ನಾಳ್ ಹೇಳ್ತಾರೆ, ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಂದ್ರೆ 2,500ಕೋಟಿ ರೂ., ಮಂತ್ರಿಯಾಗಬೇಕಂದ್ರೆ 100 ಕೋಟಿ ರೂ. ಕೊಡಬೇಕು. 

ಶಾಸಕರಾಗಬೇಕಂದ್ರೂ ಕೋಟಿ ಕೋಟಿ ಸುರಿಬೇಕು ಅಂತಾರೆ. ಬಿಜೆಪಿಯವರು ಜನಸೇವೆ ಮಾಡಲು ಬಂದಿದ್ದಾರಾ ? ಅಥವಾ ವ್ಯಾಪಾರ ಮಾಡಲು ಬಂದಿದ್ದಾರಾ..? ಎಂದು ಟೀಕಿಸಿದರು. ಪಿಎಸ್‌ಐ ನೇಮಕಾತಿ ಹಗರಣ ವಿಚಾರದಲ್ಲಿ 60 ಜನರನ್ನು ಬಂಧಿಸಲಾಗಿತ್ತು. ಮಧ್ಯವರ್ತಿಗಳು 50ರಿಂದ 80 ಲಕ್ಷ ರೂ.ವರೆಗೆ ಲಂಚ ಪಡೆದಿದ್ರು. ಪ್ರಕರಣದಲ್ಲಿ ಜೈಲಿಗೆ ಹೋದವರು ಹೊರಗಡೆ ಬಂದಾಗಿ ಎರಡು ಬೆರಳು ತೋರಿಸಿ ಭ್ರಷ್ಟಾಚಾರದಲ್ಲೂ ಜಯಭೇರಿ ತೋರಿಸ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿಗೆ ಮಾತ್ರ ಫೇವರ್. ಬ್ಯಾಂಕ್‌ಗಳಿಗೆ ಮೂರು ನಾಮ ಹಾಕಿದ ಶೇ. 99 ಜನರು ಗುಜರಾತಿಗಳು. ನೀವು ಬ್ಯಾಂಕ್ ಮಾಡ್ತೀರಾ, ದುಡ್ಡು ಕೊಡ್ತೀರಾ.. 

ಕಾಂಗ್ರೆಸ್‌ ಭಯೋತ್ಪಾದನಾ ಸಂಘಟನೆ: ನಳಿನ್ ಕುಮಾರ್ ಕಟೀಲ್‌

ಅವರು ಲೋನ್ ತೆಗೋತಾರೆ, ನುಂಗ್ತಾ ಇರ್ತಾರೆ. ಇದೇ ಗುಜರಾತ್ ಮಾಡೆಲ್ ಅನ್ನೋದು. ಬಿಜೆಪಿಗೆ ಚುನಾವಣೆಯ ಬಳಿಕ ಜನರೇ ಬುದ್ಧಿ ಕಲಿಸ್ತಾರೆ ಅಂತಾ ಕಾಂಗ್ರೆಸ್ ಮುಖಂಡರು ಟೀಕಿಸಿದರು. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಚಾಲನೆ ಪಡೆದುಕೊಂಡ ಜನಪ್ರತಿಧ್ವನಿ ಯಾತ್ರೆ ನೀರಸವಾಗಿದ್ರೂ, ಕಾಂಗ್ರೆಸ್ ಮುಖಂಡರು ಮಾತ್ರ ಬಿಜೆಪಿಯನ್ನು ಭರ್ಜರಿಯಾಗೇ ಟಾರ್ಗೆಟ್ ಮಾಡಿದ್ರು. ನಾಳೆ ಮತ್ತೆ ಕುಮಟಾ ಹಾಗೂ ಹೊನ್ನಾವರದಲ್ಲೂ ಕಾಂಗ್ರೆಸ್ ಯಾತ್ರೆ ನಡೆಯಲಿದ್ದು, ತಮ್ಮ ಯಾತ್ರೆಯ ಮೂಲಕ ಕಾಂಗ್ರೆಸ್ ಯಾವ ಮಟ್ಟದಲ್ಲಿ ಮತಭೇಟೆ ನಡೆಸಲಿದೆ ಎಂದು ಕಾದು ನೋಡಬೇಕಷ್ಟೇ. 

click me!