ಸ್ವತಂತ್ರ ಭಾರತದ ಅತಂತ್ರ ಪ್ರಜೆಗಳ ವೇದಿಕೆಯಿದು, ನನ್ನನ್ನು ಮಂತ್ರಿ ಮಾಡದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಇಲ್ಲದಿದ್ದರೆ ಸಮಾಜಕ್ಕೆ ಶಕ್ತಿ ತುಂಬುವ ಈ ಕಾರ್ಯಕ್ರಮ ಆಗುತ್ತಿರಲಿಲ್ಲ. ಮುಂದೆಯೂ ಮುಖ್ಯಮಂತ್ರಿ, ಮಂತ್ರಿ ಆಗುತ್ತೇನೆ ಎಂಬ ಭ್ರಮೆ ಬೇಡ’ ಎಂದರ ಬಿ.ಕೆ.ಹರಿಪ್ರಸಾದ್
ಬೆಂಗಳೂರು(ಸೆ.10): ‘ರಾಜ್ಯದಲ್ಲಿ ಯಾರೋ ಒಬ್ಬರು ಸಮಾಜವಾದಿ ಹೆಸರಿನಲ್ಲಿ ಮಜಾವಾದಿಯಾಗಿದ್ದಾರೆ. ಹ್ಯೂಬ್ಲೋ ವಾಚ್ ಕಟ್ಟಿಕೊಂಡು, ಪಂಚೆಯುಟ್ಟು, ಒಳಗೆ ಖಾಕಿ ಚಡ್ಡಿ ಹಾಕಿ ಓಡಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ‘ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿ ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆ’ ವೇಳೆ ಮಾತನಾಡಿದ ಅವರು, ಭಾಷಣದ ಉದ್ದಕ್ಕೂ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವರ ಹೆಸರು ಹೇಳದೆ ತೀವ್ರ ಟೀಕಾಪ್ರಹಾರ ನಡೆಸಿದರು.
ಇಸ್ರೋಗೆ ಬೆಂಗಳೂರಲ್ಲಿ ಜಾಗ ನೀಡಿದ್ದು ಕಾಂಗ್ರೆಸ್: ಬಿಕೆ ಹರಿಪ್ರಸಾದ್
‘ಕಾಂಗ್ರೆಸ್‌ನಲ್ಲಿ ಅವಮಾನವಾಗಿದ್ದರೂ ನೀವಿನ್ನೂ ಕಾಂಗ್ರೆಸ್‌ನಲ್ಲಿ ಯಾಕಿದ್ದೀರಿ ಎಂದು ಹಲವರು ಕೇಳುತ್ತಾರೆ. ನಾನು ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇನೆ. ಎಲ್ಲಿಂದಲೋ ಬಂದ ನನಗೆ ಅಧಿಕಾರ ಸಿಗದಿದ್ದಾಗ ಎಲ್.ಕೆ.ಅಡ್ವಾಣಿ ಅವರ ಬಳಿ ಹೋಗಿ ಅವರ ಮನೆಯಲ್ಲಿ ಉಪಾಹಾರ ಮಾಡಿ ಬಿಜೆಪಿ ಸೇರಲು ಹೋಗಿರಲಿಲ್ಲ. ವೆಂಕಯ್ಯ ನಾಯ್ಡು, ಅರವಿಂದ ಲಿಂಬಾವಳಿ ಅವರನ್ನು ಕೇಳಿದರೆ ಈ ಬಗ್ಗೆ ಹೇಳುತ್ತಾರೆ. ಅಂತಹವರಿಂದ ನಮಗೆ ಪಕ್ಷನಿಷ್ಠೆ ಪಾಠ ಬೇಕಾಗಿಲ್ಲ’ ಎಂದು ಕಿಡಿಕಾರಿದರು.
‘ದೇವರಾಜ ಅರಸು ಅವರ ಕಾರಿನಲ್ಲಿ ಓಡಾಡಿದ ತಕ್ಷಣ ಅವರು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಅರಸು ಹೆಸರು ಹೇಳುವವರು ಅವರ ಮೊಮ್ಮಗನಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಲಿಲ್ಲ. ಹಿಂದೆ ಸಮಾಜವಾದಿ ಎನ್ನಿಸಿಕೊಂಡಿದ್ದವರು ಇವರಂತೆ ಮಜಾವಾದಿ ಆಗಿರಲಿಲ್ಲ. ಈ ಮೊದಲು ಯಾವ ಮುಖ್ಯಮಂತ್ರಿಯೂ ಈ ಪರಿ ಜಾತಿ ರಾಜಕಾರಣ ಮಾಡಿಲ್ಲ. ನಾನೇ ಸರ್ಕಾರ ಮಾಡಿದ್ದೇನೆ, ನನಗೆ ಇಷ್ಟಬಂದಂತೆ ತೀರ್ಮಾನ ಮಾಡುತ್ತೇನೆ ಎಂದರೆ ಜನಗಳೂ ಮುಂದೆ ತಮ್ಮ ನಿರ್ಧಾರ ಮಾಡುತ್ತಾರೆ’ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಶತ್ರುಗಳಂತೆ ನೋಡ್ತಾರೆ, ವೇದಿಕೆಯಲ್ಲೇ ಸಿಎಂ ಸಿದ್ದು, ಡಿಕೆಶಿ ಕುಟಕಿದ ಬಿಕೆ ಹರಿಪ್ರಸಾದ್
‘ಕೆಪಿಸಿಸಿ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇತ್ತು. ಆದರೆ, ಈ ಬಾರಿ ಮುಖ್ಯಮಂತ್ರಿ ಹೋಗಲಿ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡದೆ ಹಿಂಬಡ್ತಿ ನೀಡಲಾಗಿದೆ. ಉಪಮುಖ್ಯಮಂತ್ರಿ ಮಾಡುವಾಗ ದಲಿತರನ್ನು ಮಾಡಬಹುದಿತ್ತು. ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಅಥವಾ ಅಲ್ಪಸಂಖ್ಯಾತರನ್ನು ಮಾಡಬಹುದಾಗಿತ್ತು. ಆದರೆ ಅದ್ಯಾವ ಯೋಚನೆಯನ್ನೂ ಮಾಡಿಲ್ಲ’ ಎಂದು ಟೀಕಿಸಿದರು.
ಇದಕ್ಕೂ ಮೊದಲು ಮಾತು ಆರಂಭಿಸುತ್ತಿದಂತೆಯೇ ‘ಸ್ವತಂತ್ರ ಭಾರತದ ಅತಂತ್ರ ಪ್ರಜೆಗಳ ವೇದಿಕೆಯಿದು, ನನ್ನನ್ನು ಮಂತ್ರಿ ಮಾಡದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಇಲ್ಲದಿದ್ದರೆ ಸಮಾಜಕ್ಕೆ ಶಕ್ತಿ ತುಂಬುವ ಈ ಕಾರ್ಯಕ್ರಮ ಆಗುತ್ತಿರಲಿಲ್ಲ. ಮುಂದೆಯೂ ಮುಖ್ಯಮಂತ್ರಿ, ಮಂತ್ರಿ ಆಗುತ್ತೇನೆ ಎಂಬ ಭ್ರಮೆ ಬೇಡ’ ಎಂದರು.
ಹರಿ ವಾಗ್ಬಾಣಗಳು
- ಹಿಂದಿನ ಸಮಾಜವಾದಿಗಳು ಇವರಂತೆ ಮಜಾವಾದಿ ಆಗಿರಲಿಲ್ಲ
- ದೇವರಾಜ ಅರಸು ಅವರ ಕಾರಲ್ಲಿ ಓಡಾಡಿದರೆ ಅರಸು ಆಗಲ್ಲ
- ಹಿಂದಿನ ಯಾವ ಸಿಎಮ್ಮೂ ಈ ಪರಿ ಜಾತಿ ರಾಜಕೀಯ ಮಾಡಿಲ್ಲ
- ಎಲ್ಲ ಅರ್ಹತೆ ಇದ್ದ ಪರಂಗೆ ಸಿಎಂ/ ಡಿಸಿಎಂ ಹುದ್ದೆ ನೀಡಲಿಲ್ಲ
- ಜನರೇ ಇವರಿಗೆ ಪಾಠ ಕಲಿಸ್ತಾರೆ
- ನನ್ನನ್ನು ಮಂತ್ರಿ ಮಾಡದ್ದಕ್ಕೆ ಧನ್ಯವಾದ