ಆರ್‌ಎಸ್ಎಸ್‌ನವರು ರಣಹೇಡಿಗಳು ಎಂದ ಬಿ.ಕೆ.ಹರಿಪ್ರಸಾದ್

By Suvarna NewsFirst Published Apr 10, 2022, 9:49 PM IST
Highlights

• ಬಿಜೆಪಿ, ಸಂಘಪರಿವಾರದವರು ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದ್ದಾರೆ
• ಮೊಟ್ಟಮೊದಲು ಸ್ವಾತಂತ್ರ್ಯ ಹೋರಾಟ ನಾಯಕತ್ವ ವಹಿಸಿದ್ದು ಬಹದೂರ್ ಎಸ್ ಜಾಫರ್
• ಬ್ರಿಟಿಷರ ಪೇನ್ಷನ್ ತಗೆದುಕೊಂಡವರು ಸಂಘಪರಿವಾರದವರು

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಏ.10): ಬಿಜೆಪಿ, ಆರ್‌ಎಸ್ಎಸ್‌ನವರು ಕರ್ನಾಟಕದ ಜನ ತಲೆತಗ್ಗಿಸುವಂತ ಕೆಲಸ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. 

Latest Videos

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, 'ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೀತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ.ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು. ಸಂವಿಧಾನ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘಪರಿವಾರ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡ್ತಿದೀವಿ ಎಂದರು.

ಮುಸ್ಲಿಂ ಅಂಗಡಿ ಧ್ವಂಸ ಮಾಡಿದವರ ವಿರುದ್ಧ ಕ್ರಮ Minister Madhuswamy

 ಮೊಟ್ಟಮೊದಲಿಗೆ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದು ಬಹದೂರ್ ಎಸ್ ಜಾಫರ್. ಇದನ್ನು ಯಾರೂ ಸಹ ಮರೆಯಕ್ಕಾಗೋದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ‌. ಭಾರತ ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಈ ಭಾರತ ದೇಶ ಸಂವಿಧಾನ ಕೊಟ್ಟು ಹೋಗಬೇಕು. ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದಿದೆ. ಇದೊಂದು ದೊಡ್ಡ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಹೇಳಿದರು.

ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ‌, ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ, ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೀತಿದೆ. ಈಗ ಅಲ್ಪಸಂಖ್ಯಾತರ ಮೇಲೆ ನೇರವಾಗಿ ದೌರ್ಜನ್ಯ ಮಾಡುತ್ತಿದ್ದು ಬಹುಸಂಖ್ಯಾತರ ಭಾವನೆ ಕೆರಳಿಸಿ ಕೆಲವು ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಪ್ರಯತ್ನ ನಡೀತಿದೆ. ಮನುಸ್ಮೃತಿ ಸಂವಿಧಾನ ಅಡಿಯಲ್ಲಿ ಪ್ರಬಲ ಜಾತಿ ಬಿಟ್ರೆ ಎಲ್ಲರೂ ಎರಡನೇ ದರ್ಜೆ ನಾಗರಿಕರು, ಅವರೆಲ್ಲ ಜೀತದಾಳರು, ಗುಲಾಮರು ಅನ್ನೋ ಭಾವನೆ ಮೂಡಿಸಲು ಬಿಜೆಪಿ,ಆರ್‌ಎಸ್ಎಸ್ ಪ್ರಯತ್ನ ಮಾಡ್ತಿದೆ. ಇದನ್ನ ನಾನು ಖಂಡಿಸುತ್ತೇನೆ' ಎಂದರು.

ವ್ಯಾಪಾರ ಮಾಡಲು‌ ಯಾರೂ ನಿರ್ಬಂಧ ಹೇರಕ್ಕಾಗಲ್ಲ'
ಇನ್ನು ದೇವಸ್ಥಾನ ಆವರಣದಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂಬ ಹಿಂದೂ ಸಂಘಟನೆಗಳ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಕೆ‌.ಹರಿಪ್ರಸಾದ್, '2002ರಲ್ಲಿ ಕಾಂಗ್ರೆಸ್ ಪಕ್ಷ ಕಾನೂನು ತಂದಿದೆ ಅಂತಾ ಅವರು ಹೇಳಬಹುದು. ದೇವಾಲಯದ ಕಟ್ಟಡದಲ್ಲಿ ಅನ್ಯಧರ್ಮೀಯರು ಮಾತ್ರ ವ್ಯಾಪಾರ ಮಾಡಬಾರದು ಅಂತಾ ಇತ್ತು. ರಸ್ತೆಯಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿಲ್ಲ. ಬಿಜೆಪಿಗೆ ಅಷ್ಟೊಂದು ಕಳಕಳಿ ಇದ್ರೆ ಜಾತಿ ಹೆಸರಿನಲ್ಲಿ ಇರೋ ಹೋಟೆಲ್‌, ಮಾರ್ಕೆಟ್ ಮುಚ್ಚಲಿ. 130 ಕೋಟಿ ಭಾರತೀಯರಿಗೆ ಸಮಾನವಾದ ಹಕ್ಕು ಇದೆ. ಸಮಾನವಾದ ಅವಕಾಶ ಇದೆ ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿ ಹೆಚ್ಚಾಗಿದೆ‌. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದೆ.ರಾಷ್ಟ್ರದ ಗಡಿ ರಕ್ಷಣೆ ಮಾಡಲು ವಿಫಲರಾದ ಮೋದಿ ವೈಫಲ್ಯತೆ ಮುಚ್ಚಲು ಷಡ್ಯಂತ್ರ ಮಾಡುತ್ತಿದ್ದು ಇದನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ' ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಸಂಘಪರಿವಾರದವರಿಂದ ಅಮಾಯಕರ ಮೇಲೆ ಹಲ್ಲೆ
ಆರ್‌ಎಸ್ಎಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಬಿ.ಕೆ‌.ಹರಿಪ್ರಸಾದ್, 'ಬ್ರಿಟಿಷರ ಪೇನ್ಷನ್ ತಗೆದುಕೊಂಡ ಸಂಘಪರಿವಾರದವರು ಇವತ್ತು ಅಮಾಯಕರ ಮೇಲೆ ಹಲ್ಲೆ ಮಾಡೋದನ್ನ ನೋಡಿದ್ರೆ ರಣಹೇಡಿಗಳು ಇವರು. ಧಾರವಾಡದಲ್ಲಿ ಅಲ್ಪಸಂಖ್ಯಾತ ಕಲ್ಲಂಗಡಿ ಹಣ್ಣು ವ್ಯಾಪಾರಸ್ಥನ ಮೇಲೆ ಹಲ್ಲೆ ಮಾಡಿದ್ದಾರೆ. ಇವರೆಲ್ಲ ರಣಹೇಡಿಗಳು ಅಂತಾ ಗೊತ್ತಾಗುತ್ತೆ. ಬ್ರಿಟಿಷರ ಕಾಲದಲ್ಲೂ ಸಹ ಬ್ರಿಟಿಷರ ಜೊತೆ ಶಾಮೀಲಾಗಿದ್ದವರು, ಬ್ರಿಟಿಷರ ಏಜೆಂಟ್, ಗುಲಾಮ ಆಗಿದ್ದವರು. ಸಂವಿಧಾನದ ಚೌಕಟ್ಟಿನಲ್ಲಿ ಇವರು ಹೋರಾಟ ಮಾಡಲಿ. ಸ್ವತಃ ಗೃಹಮಂತ್ರಿಗಳೇ ಪ್ರಚೋದನೆ ನೀಡುತ್ತಿದ್ದಾರೆ. ಇನ್ನೂ ಸಹ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು. 

ಸಂವಿಧಾನ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿ ರಾಗ, ದ್ವೇಷ ಇಲ್ಲದೇ ಸರ್ಕಾರ ನಡೆಸುತ್ತೇವೆ ಎನ್ನುವಂತ ಇಂತವರು ದ್ವೇಷದ ಭಾವನೆ ಮಾಡಿದಾಗ ಸ್ವಯಂಪ್ರೇರಿತವಾಗಿ ರಾಜ್ಯಪಾಲರು ವಜಾ ಮಾಡಬೇಕು. ಕ್ಯಾಬಿನೆಟ್ ನಿಂದ ಗೃಹಸಚಿವ ಅರಗ ಜ್ಞಾನೇಂದ್ರ ವಜಾ ಮಾಡಬೇಕು. ಬಸವರಾಜ ಬೊಮ್ಮಾಯಿ ಪಾತ್ರಧಾರಿಗಳು ಆಗಿದ್ದಾರೆ‌. ಅವರ ಸೂತ್ರಧಾರಿಗಳು ಹಾವಿನಪುರದಲ್ಲಿ ಇರುವಂತಹ ನಾಯಕರು. ಹಾವಿನಪುರ(ನಾಗಪುರ)ದ ವಿಷಜಂತುಗಳು ಇಡೀ ರಾಷ್ಟ್ರದ ಕೋಮು ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆ‌‌. ಕಾಂಗ್ರೆಸ್ ಪಕ್ಷ ಇದನ್ನ ಕಟೋರವಾಗಿ ಖಂಡಿಸುವ ಕೆಲಸ ಮಾಡುತ್ತೆ' ಎಂದು ತಿಳಿಸಿದರು.

'ಸಂವಿಧಾನ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು'
ಇನ್ನು ಮೋಹನ್ ಭಾಗವತ್ 2015ರಲ್ಲಿ ಬಿಹಾರದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದವರು. ಸಂವಿಧಾನ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು ಎಂದು ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಸಂವಿಧಾನ ಮೇಲೆ ನಂಬಿಕೆ ಇಲ್ಲದವರು ದೇಶ ಬಿಟ್ಟು ಹೋಗಬೇಕಾಗಿದೆ. ಇವರು ಬ್ರಿಟಿಷರ ಗುಲಾಮರಾಗಿದ್ದವರು, ಇವರಿಗೆ ಸಂವಿಧಾನ ಮೇಲೆ ನಂಬಿಕೆ ಇಲ್ಲ. 19 ಸಾವಿರ ಭಾಷೆಗಳು, 3600 ಜಾತಿಗಳು,7 ದೊಡ್ಡ ದೊಡ್ಡ ಧರ್ಮ ಇರುವ ದೇಶ ನಮ್ಮದು‌. ಇಲ್ಲಿ ಒಂದೇ ಒಂದು ಧರ್ಮ ಒಂದೇ ಒಂದು ಭಾಷೆ ಹೇರಲು ಸಾಧ್ಯವಿಲ್ಲ. ಅರೆಪ್ರಜ್ಞೆಯಲ್ಲಿರುವ ಅರಗ ಜ್ಞಾನೇಂದ್ರ ರನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಒತ್ತಾಯಿಸಿದರು,.

ಇನ್ನು ಬೆಂಗಳೂರಲ್ಲಿ ಚಂದ್ರು ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಸಿಐಡಿ ವರ್ಗಾವಣೆ ಆಗಲಿ ಮೊದಲು ಬೇಜವಾಬ್ದಾರಿ ಗೃಹ ಮಂತ್ರಿ ರಾಜೀನಾಮೆ ನೀಡಬೇಕು' ಎಂದರು‌. ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಕಮಲ್ ಪಂತ್ ರಿಗೆ ಪ್ರಮೋಷನ್ ಮಾಡಿ ಕಂಟಿನ್ಯೂ ಮಾಡಿದ್ದಾರೆ. ಅವರಿಗೆ ಯಾರಿಗೂ ಸರಿಯಾದ  ಪರ್ಯಾಯ ಅಧಿಕಾರಿ ಸಿಕ್ಕಿಲ್ಲ‌. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬಗ್ಗೆ ನಾನೇನೂ ಹೇಳೋದಿಲ್ಲ. ಒಂದು ವರ್ಷದ ಹಿಂದೆಯೇ ವರ್ಗಾವಣೆ ಆಗಬೇಕಿತ್ತು ಎಂದು ತಿಳಿಸಿದರು.

 ಕಮಿಷನರ್ ಆದವರು ಎಡಿಜಿ Rank ನಲ್ಲಿ ಇರ್ತಾರೆ. ಹಿಂದೆ ಕಮಿಷನರ್ ಆದ ಭಾಸ್ಕರ್‌ರಾವ್ ಆಪ್ ಸೇರಿ ಏನೇನು ಹೇಳಿಕೆ ಕೊಟ್ಟಿದ್ದಾರೆ ನೋಡಿ. ಟ್ರಾನ್ಸಫರ್ ಗೆ ಯಾರ್ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಅಂದಿದ್ದಾರೆ.ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಪಕ್ಷ ಬಿಜೆಪಿ. ಕಮಲ್ ಪಂತ್ ಪ್ರಮೋಷನ್ ಆಗಿ ಒಂದು ವರ್ಷ ಆಗಿದೆ. ಇವರ ಹತ್ತಿರ ಚಾಯ್ಸ್ ಇಲ್ಲ, ದಕ್ಷ ಅಧಿಕಾರಿ ಇಲ್ಲ ಅಂತಾ ಕಂಟಿನ್ಯೂ ಮಾಡಿದ್ದಾರೆ. ಇರೋರಲ್ಲಿ ಸತ್ಯ ಹೇಳುವಂತಹ ಕಮಿಷನರ್ ಅವರು. ಚಂದ್ರು ಹತ್ಯೆ ವಿಚಾರವಾಗಿ ಬಲ್ಲಮೂಲಗಳ ವಲಯದಿಂದ ಅಂತ ಗೃಹಸಚಿವರು ಹೇಳಿಕೆ ನೀಡಿದ್ದಾರೆ‌. ಇವರ ಬಲ್ಲಮೂಲ ಅಂದ್ರೆ ನಾಗ್ಪುರ, ಕೇಶವಕೃಪಾದ ಬಲ್ಲಮೂಲಗಳು' ಅಂತಾ ಆಕ್ರೋಶ ವ್ಯಕ್ತಪಡಿಸಿದರು.

click me!