ಕೊಡಗು ಬಿಜೆಪಿ ಸಿಎಂ ಕಾನೂನು ಸಲಹೆಗಾರರೂ, ವಿರಾಜಪೇಟೆಯ ಶಾಸಕರೂ ಆಗಿರುವ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ನಿನ್ನೆ ಪ್ರತಿಭಟನೆ ಮಾಡಿತ್ತು. ಇದು ಈಗ ಸಾಕಷ್ಟು ವಿವಾದದ ರೂಪ ಪಡೆದುಕೊಂಡಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.22): ಎರಡುವರೆ ದಶಕಗಳ ಬಿಜೆಪಿಯ ಭದ್ರಕೋಟೆಯನ್ನು ಕೊಡಗು ಕಾಂಗ್ರೆಸ್ ಛಿದ್ರಗೊಳಿಸಿ ಎರಡು ಶಾಸಕರನ್ನು ವಿಧಾನಸಭೆಗೆ ಕಳುಹಿಸಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದ ಕಾಂಗ್ರೆಸ್ ಸರ್ಕಾರ ವಾರದ ಹಿಂದೆಯಷ್ಟೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಜಾಸ್ತಿ ಮಾಡಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಕೊಡಗು ಬಿಜೆಪಿ ಸಿಎಂ ಕಾನೂನು ಸಲಹೆಗಾರರೂ, ವಿರಾಜಪೇಟೆಯ ಶಾಸಕರೂ ಆಗಿರುವ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ನಿನ್ನೆ ಪ್ರತಿಭಟನೆ ಮಾಡಿತ್ತು. ಇದು ಈಗ ಸಾಕಷ್ಟು ವಿವಾದದ ರೂಪ ಪಡೆದುಕೊಂಡಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ.
undefined
ಹೌದು ಶಾಸಕ ಪೊನ್ನಣ್ಣ ಅವರು ಕೊಡವ ಸಮುದಾಯದವರಾಗಿದ್ದು ಅವರನ್ನು ಬಿಜೆಪಿಯಲ್ಲಿರುವ ಕೆಲವು ಕೊಡವರೇ ತಮ್ಮ ಸಂಪ್ರದಾಯಗಳನ್ನು ಮೀರಿ ಹೀಗೆ ಪ್ರತಿಕೃತಿ ದಹನ ಮಾಡಿರುವುದು ಕೊಡವ ಸಂಸ್ಕೃತಿಗೆ ಮಾಡಿರುವ ಅಪಚಾರ ಎಂದು ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಜೊತೆಗೆ ಸಾಕಷ್ಟು ಕೆಲಸ ಮಾಡುತ್ತಿರುವ ಹಾಗೂ ಯಾವುದೇ ಸಚಿವಸ್ಥಾನ ಇಲ್ಲದೆ ಕೇವಲ ಒಬ್ಬ ಕಾನೂನು ಸಲಹೆಗಾರರಾಗಿರುವ ಪೊನ್ನಣ್ಣ ಅವರ ವಿರುದ್ಧ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ ಎಂದು ಪ್ರತಿಕೃತಿ ದಹಿಸಿ ಪ್ರತಿಭಟಿಸುತ್ತಿರುವುದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಅಧಿಕಾರಿಗಳು ನಾವೇ ಮಾಸ್ಟರ್ ಎಂದು ಮೆರೆಯಬೇಡಿ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬಿಜೆಪಿಯವರು ವಿಕೃತ ಮನಸ್ಸಿನವರು ಎಂದು ಕಾಂಗ್ರೆಸ್ ಕೂಡ ಬಿಜೆಪಿ ವಿಕೃತ ಮನಸ್ಸು ಎಂಬ ಪ್ರತಿಕೃತಿ ಮಾಡಿ ಅದಕ್ಕೆ ಬಳೆ ತೊಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಡಿಕೇರಿಯಿಂದ ಮಂಗಳೂರು ಮಾರ್ಗದಲ್ಲಿ ಸಂಪಾಜೆಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದೆ. ಬಾಯಿಗೆ ಕಪ್ಪುಪಟ್ಟಿ ಕಟ್ಟಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೆದ್ದಾರಿ ಬದಿಯಲ್ಲಿ ಮೆರವಣಿಗೆ ಸಾಗಿದರು. ಬಳಿಕ ಕೊಡಗು ಮಂಗಳೂರು ಗಡಿಭಾಗದ ಸಂಪಾಜೆ ಚೆಕ್ಪೋಸ್ಟ್ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಕುಳಿತುಕೊಳ್ಳುತ್ತಿದ್ದಂತೆ ಪೊಲೀಸರು ತಡೆಯುವ ಪ್ರಯತ್ನ ಮಾಡಿದರು.
ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ರಸ್ತೆಯ ಬದಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಬಿಜೆಪಿಯ ವಿಕೃತಿ ಮನಸ್ಸಿನ ಪ್ರತಿಕೃತಿಗೆ ಬಳೆಯ ತೊಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಕಾಂಗ್ರೆಸ್ನ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಸುದ್ಧಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು. ಹುಟ್ಟಿದ ಮನುಷ್ಯ ಯಾರೂ ಸಾಯದೇ ಇರುವುದಿಲ್ಲ. ಇಂದು ಪೊನ್ನಣ್ಣನವರ ಪ್ರತಿಕೃತಿ ದಹಿಸಿದವರೂ ನಾಳೆ ಸಾಯಲೇ ಬೇಕು. ಆದರೆ ಕೊಡಗಿನಲ್ಲಿ ಯಾವಾಗಲೂ ಇಂತಹ ಕೀಳುಮಟ್ಟಕ್ಕೆ ಇಳಿದು ಯಾರೂ ರಾಜಕಾರಣ ಮಾಡಿರಲಿಲ್ಲ.
ಏನೇ ಇರಲಿ ಕೊಡವರು ಯಾರೇ ಸತ್ತರು ಅವರ ಶವ ಸಂಸ್ಕಾರ ಮಾಡುವಾಗ ಅದಕ್ಕೊಂದು ಶಾಸ್ತ್ರ ಸಂಪ್ರದಾಯ ಎನ್ನುವುದು ಇದೆ. ಮೃತಪಟ್ಟವರಿಗೆ ಬಿಳಿಬಟ್ಟೆ ಹೊದಿಸಲಾಗುತ್ತದೆ. ಹೂವಿನ ಹಾರ ಹಾಕಲಾಗುತ್ತದೆ. ಕೊಡವ ಧಿರಿಸುಗಳನ್ನು ತೊಡಿಸಲಾಗುತ್ತದೆ. ಜೊತೆಗೆ ಸಂಸ್ಕಾರ ಮಾಡುವವರು ಕೂಡ ಬಿಳಿ ವಸ್ತ್ರಗಳನ್ನು ಧರಿಸಿಯೇ ವಿಧಿವಿಧಾನಗಳನ್ನು ನೆರವೇರಿಸಬೇಕು. ಹಾದಿ ಬೀದಿಯಲ್ಲೆಲ್ಲಾ ಸಂಸ್ಕಾರ ಮಾಡುವಂತಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ವಿರಾಜಪೇಟೆ, ಅದರಲ್ಲೂ ಕೊಡವ ಜನಾಂಗದವರಾದ ಶಾಸಕ ಪೊನ್ನಣ್ಣನವರ ಪ್ರತಿಕೃತಿಯನ್ನು ಅತ್ಯಂತ ಹೀನಾಯವಾಗಿ ದಹಿಸಿ ಪ್ರತಿಭಟಿಸುವ ಮೂಲಕ ಕೊಡವ ಸಮುದಾಯದ ಕೆಲವರು ಇಡೀ ಕೊಡವ ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಗರ್‌ಹುಕುಂ ಸಾಗುವಳಿದಾರರ ನೆರವಿಗೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ
ಇವಿಷ್ಟೇ ಅಲ್ಲ, ಬಿಜೆಪಿಯಲ್ಲಿರುವ ಕೆಲವು ಕೊಡವರು ಈ ರೀತಿಯ ಪ್ರತಿಭಟನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಹಿಂದೆ ಕೆ.ಜಿ. ಬೋಪಯ್ಯ ನವರು ವಿಧಾನಸಭಾಧ್ಯಕ್ಷರಾಗಿದ್ದ ವೇಳೆ ಅವರ ಪ್ರತಿಕೃತಿಯನ್ನು ಇದೇ ಕಾಂಗ್ರೆಸ್ ಮುಖಂಡರು ಸುಟ್ಟು ಅಪಮಾನ ಮಾಡಿದ್ದರು. ಈಗ ಕಾಂಗ್ರೆಸ್ನವರು ನಮಗೆ ಸಂಸ್ಕೃತಿ, ಸಂಪ್ರದಾಯದ ನೀತಿಪಾಠ ಹೇಳಲು ಬರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸುವುದಕ್ಕಾಗಿ ಬಿಜೆಪಿ ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿರುವುದಂತು ಸತ್ಯ.