Latest Videos

ಅಧಿಕಾರಿಗಳು ನಾವೇ ಮಾಸ್ಟರ್‌ ಎಂದು ಮೆರೆಯಬೇಡಿ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

By Kannadaprabha NewsFirst Published Jun 22, 2024, 6:35 PM IST
Highlights

ಡಿಸಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಆಡಳಿತಕ್ಕೆ ಚುರುಕು ಮುಟ್ಟಿಸಲು ಶಾಲಾ, ಕಾಲೇಜ್‌, ಹಾಸ್ಟೆಲ್‌, ಅಂಗನವಾಡಿ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ನಾವೇ ಮಾಸ್ಟರ್‌ ಎಂಬ ಮನೋಭಾವದಿಂದ ಹೊರಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. 

ಹೊಸಪೇಟೆ (ಜೂ.22): ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಭೇಟಿ ನೀಡಬೇಕು. ಡಿಸಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಆಡಳಿತಕ್ಕೆ ಚುರುಕು ಮುಟ್ಟಿಸಲು ಶಾಲಾ, ಕಾಲೇಜ್‌, ಹಾಸ್ಟೆಲ್‌, ಅಂಗನವಾಡಿ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ನಾವೇ ಮಾಸ್ಟರ್‌ ಎಂಬ ಮನೋಭಾವದಿಂದ ಹೊರಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಗೆ ಜಿಲ್ಲಾಧಿಕಾರಿಯೇ ಮನೆಯ ಯಜಮಾನ. ವಾರಕ್ಕೊಮ್ಮೆ ಅಹವಾಲು ಸ್ವೀಕರಿಸಬೇಕು. ಜಿಲ್ಲೆಯ ಉಳಿದ ಅಧಿಕಾರಿಗಳು ವಾರದಲ್ಲಿ ಎರಡು ದಿನ ಅಹವಾಲು ಸ್ವೀಕರಿಸಬೇಕು. 

ಜಿಲ್ಲೆಯ ಜನರು ಸಣ್ಣಪುಟ್ಟ ಕೆಲಸಕ್ಕೂ ನಮ್ಮಲ್ಲಿ ಬರುತ್ತಿದ್ದಾರೆ. ಜನರ ಕೆಲಸವನ್ನು ಅಧಿಕಾರಿಗಳು ಜಿಲ್ಲಾ, ತಾಲೂಕು ಹಂತದಲ್ಲೇ ಮಾಡಿಕೊಡಬೇಕು ಎಂದರು. ಜಿಲ್ಲಾಧಿಕಾರಿ ಉತ್ತಮ ಕೆಲಸ ಮಾಡುತ್ತಾರೆ ಎಂದು ಜಿಲ್ಲೆಯ ಶಾಸಕರು ಹೇಳುತ್ತಿದ್ದಾರೆ. ಇರಲಿ, ಆದರೂ ಅಧಿಕಾರಿಗಳ ಕೆಲಸದ ಬಗ್ಗೆ ನನಗೆ ಸಮಾಧಾನ ಇಲ್ಲ. ಜಿಲ್ಲೆಯ ಅಧಿಕಾರಿಗಳ ಕೆಲಸದಿಂದ ನನಗೆ ಸಂತೋಷ ಇಲ್ಲ. ಜಿಲ್ಲೆಯ ಎಲ್ಲ ಇಲಾಖೆಗಳಲ್ಲೂ ಆಡಳಿತ ವೇಗ ಪಡೆದಿಲ್ಲ. ಕೆಂಗಲ್‌ ಹನುಮಂತರಾಯರು ವಿಧಾನಸೌಧದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ನೌಕರರು ಜನರ ಸೇವೆ ಮಾಡಬೇಕು ಎಂದರು.

ಬೆಂಗಳೂರಿನ ಗಾಂಧಿನಗರದಲ್ಲಿ ರಸ್ತೆ ಬದಿ ಪಾರ್ಕಿಂಗ್ ನಿಷೇಧ: ಡಿಕೆಶಿ ಹೇಳಿದ್ದೇನು?

ಎಸ್ಟಿ ಆಶ್ರಮ ಶಾಲೆಗಳಲ್ಲಿ ಮಕ್ಕಳಿಲ್ಲ: ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಎಸ್ಟಿ ವರ್ಗದ ಇಲಾಖೆಯ ಹೊಣೆಗಾರಿಕೆ ನಾನೇ ವಹಿಸಿಕೊಂಡಿರುವೆ. ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸುವೆ. ಆಶ್ರಮ ಶಾಲೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಮಕ್ಕಳೇ ಇರಲ್ಲ. ಆದರೂ ಹಾಸಿಗೆ, ದಿಂಬು ಖರೀದಿಸಲಾಗಿದೆ. ಈ ಇಲಾಖೆಯ ನಿರ್ದೇಶಕರನ್ನೇ ಅಮಾನತುಗೊಳಿಸಲು ಸೂಚಿಸಿರುವೆ. ಇಲಾಖೆಯ ಉನ್ನತ ಅಧಿಕಾರಿಗಳನ್ನು ಅಮಾನತುಗೊಳಿಸಿದರೆ, ಉಳಿದ ಅಧಿಕಾರಿಗಳು ಪಾಠ ಕಲಿಯುತ್ತಾರೆ. ಜಿಲ್ಲೆಯ ಪ್ರಮುಖ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ತಾಲೂಕು ಕಚೇರಿಗಳಿಗೆ ತೆರಳಿ ಪರಿಶೀಲಿಸಬೇಕು. ಒಂದು ವೇಳೆ ಜಡತ್ವದಲ್ಲೇ ಇದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಡಕ್‌ ಎಚ್ಚರಿಕೆ ನೀಡಿದರು.

ಬಿತ್ತನೆ ಬೀಜ, ಗೊಬ್ಬರ ಕೊರತೆ ಆಗದಿರಲಿ: ರೈತರಿಗೆ ಬೀಜ ಗೊಬ್ಬರ ಕೊರತೆ ಆಗಬಾರದು. ಕೊರತೆ ಉಂಟಾದರೆ, ನೀವೇ ಹೊಣೆ. ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಹೋಗಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ತಿಳಿವಳಿಕೆ ನೀಡಬೇಕು. ಯಾವ ಅಧಿಕಾರಿಗಳು ಯಾವ ಹಳ್ಳಿಗೆ ಹೋಗಿದ್ದೀರಿ? ಎಷ್ಟು ರೈತರಿಗೆ ತಿಳಿವಳಿಕೆ ನೀಡಿದ್ದೀರಿ? ನೀವು ಭೇಟಿ ನೀಡಿ ತಿಳಿವಳಿಕೆ ನೀಡಿದ ಡೈರಿ ಎಲ್ಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಅವರನ್ನು ಪ್ರಶ್ನಿಸಿದರು.

ಬರ ಪರಿಹಾರ ₹130 ಕೋಟಿ ವಿತರಣೆ: ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ ₹130 ಕೋಟಿ ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿಳಂಬ: 2023-24ರಲ್ಲಿ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾಲಿನಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿ ರೈತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ದೊರಕಿದೆಯೇ ಎಂದು ಸಿಎಂ ಪ್ರಶ್ನಿಸಿದರು. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ 20 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡೆವಾಗಿದ್ದಕ್ಕೆ ಸಿಎಂ ಗರಂ ಆದರು. ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಲ್ಲಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರುಜೀವ ಒದಗಿಸಬೇಕು. 52 ಶುದ್ಧ ನೀರಿನ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದರೂ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 

ಮರ್ಡರ್ ಆಗಿದೆ ಅಂತಾ ಪೊಲೀಸರಿಗೇ ಟೆನ್ಶನ್ ಕೊಟ್ಟ ಮಾನಸಿಕ‌ ಅಸ್ವಸ್ಥ: ನಂತರ ಆಗಿದ್ದೇನು?

ಕೆಲ ಬೋರ್‌ ವೆಲ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಗರಂ ಆದ ಸಿಎಂ, ರಿಪೇರಿ ಮಾಡಿದ್ದು ಇಲಾಖೆಯವರೇ ತಾನೇ? ಪದೇಪದೇ ಕೆಟ್ಟು ಹೋಗುವ ರೀತಿ ರಿಪೇರಿ ಏಕೆ ಮಾಡ್ತಾರೆ? ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಪರಿಶೀಲಿಸಿ ಎಂದರು. ಜಿಲ್ಲೆಯಲ್ಲಿ ಶೌಚಾಲಯಗಳು ಇಲ್ಲದ ಮನೆಗಳು ಇವೆಯೇ ಎಂದು ಸಿಎಂ ಪ್ರಶ್ನಿಸಿದರು. ಇವೆ ಎಂದು ಅಧಿಕಾರಿಗಳು ವರದಿ ನೀಡಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ಸಿಎಂ ಪ್ರಶ್ನಿಸಿದರು. ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

click me!