
ಬೆಂಗಳೂರು (ಅ.31): ರಾಜ್ಯ ಸರ್ಕಾರದ ಸಚಿವರ ಕಳೆದ ಮೂರು ತಿಂಗಳ ಕಾರ್ಯವೈಖರಿ ಕುರಿತು ಹೈಕಮಾಂಡ್ ವರದಿ ಪಡೆಯುತ್ತಿದೆ ಎಂಬ ವಿಚಾರ ನನಗೆ ತಿಳಿದಿಲ್ಲ. ಆದರೆ ಪ್ರತಿ ತಿಂಗಳು ಶಾಸಕರು, ಸಚಿವರ ವರದಿಯನ್ನು ಹೈಕಮಾಂಡ್ ಪಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ನೇಮಿಸಿರುವ ತಂಡದಿಂದ ಪ್ರತಿ ತಿಂಗಳು ಸರ್ವೇ ನಡೆಯುತ್ತಿರುತ್ತದೆ. ಶಾಸಕರ, ಸಚಿವರ, ಕೆಪಿಸಿಸಿ ಪ್ರಮುಖ ಹುದ್ದೆಯಲ್ಲಿರುವವರ ಕಾರ್ಯವೈಖರಿ ಬಗ್ಗೆ ತಂಡ, ವರದಿ ಸಿದ್ಧಪಡಿಸಿ ಹೈಕಮಾಂಡ್ ನಾಯಕರಿಗೆ ನೀಡುತ್ತಿದೆ. ಪಕ್ಷದಲ್ಲಿ ನಡೆದಿರುವ ಚಟುವಟಿಕೆ, ಶಾಸಕರ ಕೆಲಸಗಳ ಮಾಹಿತಿ ಹೈಕಮಾಂಡ್ ನಾಯಕರಿಗಿದೆ ಎಂದು ಹೇಳಿದರು.
ಧರ್ಮಸ್ಥಳ ಕೇಸಲ್ಲಿ ಎಸ್‌ಐಟಿ ವರದಿ ಬಂದ ನಂತರ ಸತ್ಯ ಬಯಲು: ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖಾ ವರದಿ ಬಂದ ನಂತರ ಹಲವು ವಿಚಾರಗಳು ಬಹಿರಂಗವಾಗಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಮತ್ತು ಒಂದು ಕುಟುಂಬದ ತೇಜೋವಧೆ ಮಾಡಲು ಸಾಕಷ್ಟು ಷಡ್ಯಂತ್ರಗಳು ನಡೆದಿವೆ. ಅವುಗಳಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ. ಇದೀಗ ಎಫ್‌ಐಆರ್ ರದ್ದು ಕೋರಿ ಆರೋಪಿತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಕಾನೂನಿನಂತೆ ಕ್ರಮ ಕೈಗೊಳ್ಳಲಿದೆ ಎಂದರು. ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವ ಹೂತಿಟ್ಟ ಆರೋಪ ಸಂಬಂಧ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ಇನ್ನೂ ತನಿಖಾ ವರದಿ ಸಲ್ಲಿಸಿಲ್ಲ. ಎಸ್‌ಐಟಿಯಿಂದ ತನಿಖಾ ವರದಿ ಸಲ್ಲಿಕೆಯಾದ ನಂತರ ಮತ್ತಷ್ಟು ವಿಚಾರಗಳು ಹೊರಬರಲಿವೆ. ನ್ಯಾಯ ಉಳಿಯಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಮುಂದಿನ ದಿನಗಳಲ್ಲಿ ಆನೇಕಲ್ ಭಾಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಆನೇಕಲ್‌ನ ಮುತ್ತನಲ್ಲೂರಿಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಆನೇಕಲ್‌ಗೆ ಕಾವೇರಿ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಭವಿಷ್ಯದಲ್ಲಿ ನೀಡಬೇಕಾದ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಿನಿಂದಲೇ ಸಂಚಾರ ದಟ್ಟಣೆ ನಿಯಂತ್ರಣ ಯೋಜನೆ ರೂಪಿಸಬೇಕು. ಏಕೆಂದರೆ ನಗರ ಬೆಳವಣಿಗೆ ಆದ ನಂತರ ಯೋಜನೆ ರೂಪಿಸಲು ಕಷ್ಟವಾಗಲಿದೆ. ಅದಕ್ಕೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಬಯೋಕಾನ್ ಸಂಸ್ಥೆಯು ಪಂಚಾಯತಿ ವ್ಯಾಪ್ತಿಯಲ್ಲಿ ಇದೆ. ಬೆಂಗಳೂರು ನಗರ ವ್ಯಾಪ್ತಿ ಹಾಗೂ ಪಂಚಾಯತಿ ವ್ಯಾಪ್ತಿ ಬೇರೆ, ಬೇರೆ. ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.