Karnataka Politics: ‘ಬೆಲೆ ಏರಿಕೆ ಮುಕ್ತ ಭಾರತ’: ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ರಣಕಹಳೆ

Published : Apr 12, 2022, 06:55 AM IST
Karnataka Politics: ‘ಬೆಲೆ ಏರಿಕೆ ಮುಕ್ತ ಭಾರತ’: ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ರಣಕಹಳೆ

ಸಾರಾಂಶ

*  ನಗಾರಿ ಬಾರಿಸಿ ‘ಬೆಲೆ ಏರಿಕೆ ಮುಕ್ತ ಭಾರತ’ ಹೋರಾಟಕ್ಕೆ ಡಿಕೆಶಿ, ಸಿದ್ದು ಚಾಲನೆ *  ಮನೆಮನೆಗೂ ತೆರಳಿ ಬೆಲೆ ಏರಿಕೆ ವಾಸ್ತವ ಬಿಚ್ಚಿಡಲು ಕಾರ‍್ಯಕರ್ತರಿಗೆ ಕರೆ *  ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರಿಂದ ಬೃಹತ್‌ ಪ್ರತಿಭಟನಾ ಸಭೆ  

ಬೆಂಗಳೂರು(ಏ.12):  ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆ ವಿರುದ್ಧ ರಾಜ್ಯ ಕಾಂಗ್ರೆಸ್‌(Karnataka Congress) ನಾಯಕರು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ(Protest) ಸಭೆ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಜಂಟಿಯಾಗಿ ನಗಾರಿ ಬಾರಿಸುವ ಮೂಲಕ ‘ಬೆಲೆ ಏರಿಕೆ ಮುಕ್ತ ಭಾರತ’ ಎಂಬ ಹೋರಾಟ ಅಭಿಯಾನಕ್ಕೆ ಚಾಲನೆ ನೀಡಿದ್ದು, ಕಾರ್ಯಕರ್ತರು ರಾಜ್ಯಾದ್ಯಂತ(Karnataka) ಪ್ರತಿ ಮನೆ-ಮನೆಗೂ ತೆರಳಿ ಬೆಲೆ ಏರಿಕೆ ವಾಸ್ತವವನ್ನು ಬಿಚ್ಚಿಡಬೇಕು. ತನ್ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನು(BJP) ಕಿತ್ತೊಗೆಯಬೇಕು. 2013-18ರ ಸುವರ್ಣಯುಗವನ್ನು ಮರಳಿ ತರಬೇಕು ಎಂದು ಕರೆ ನೀಡಿದರು.

ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ, ಸಿಎನ್‌ಜಿ, ವಿದ್ಯುತ್‌, ರಸಗೊಬ್ಬರ, ಕಟ್ಟಡ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ಜನರಿಂದ ಮರೆ ಮಾಚಲು ರಾಜ್ಯದಲ್ಲಿ ಕೋಮುದ್ವೇಷ ಹುಟ್ಟು ಹಾಕಲಾಗುತ್ತಿದೆ. ಈ ಮೂಲಕ ಬಂಡವಾಳ ಹೂಡಿಕೆ ವಾತಾವರಣವನ್ನು ಹಾಳು ಮಾಡಿ ರಾಜ್ಯವನ್ನು ಮತ್ತಷ್ಟುನರಕಕ್ಕೆ ತಳ್ಳಲು ಪ್ರಯತ್ನಿಸಲಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ನಲ್ಲಿ‌ ಮತ್ತೊಮ್ಮೆ ಭಿನ್ನಮತ ಸ್ಫೋಟ:'ಕೈ' ಪಾಳಯದಲ್ಲಿ ಎಲ್ಲವೂ ಸರಿ ಇದ್ಯಾ?

ಮನೆಮನೆಗೆ ತೆರಳಿ- ಡಿಕೆಶಿ:

ಡಿ.ಕೆ. ಶಿವಕುಮಾರ್‌ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಪಂಚರಾಜ್ಯ ಚುನಾವಣೆ ಗೆದ್ದ ಬಳಿಕ ಜನರ ಲೂಟಿಗೆ ಇಳಿದಿದೆ. ದಿನ ಬೆಳಗಾದರೆ ದರ ಏರಿಕೆ ಉಡುಗೊರೆಯ ಸಂದೇಶಗಳು ಬರುತ್ತಿವೆ. ಬೆಲೆ ಏರಿಕೆ ತಾಳಲಾರದೆ ಜನರ ಜೀವನ ದುಸ್ತರಗೊಂಡಿದೆ. ಈ ಹಂತದಲ್ಲಿ ನಾವು ಜನರ ಮಧ್ಯೆ ಹೋಗಿ ಅವರಿಗೆ ಬೆಲೆ ಏರಿಕೆ ಕುರಿತ ವಾಸ್ತವ ಹಾಗೂ ಕಾಂಗ್ರೆಸ್‌, ಬಿಜೆಪಿ ಸರ್ಕಾರದ ನಡುವಿನ ವ್ಯತ್ಯಾಸವನ್ನು ನೆನಪಿಸಬೇಕು. ಈ ಮೂಲಕ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಬಡವ, ಶ್ರೀಮಂತ ಎನ್ನದೆ ಪ್ರತಿಯೊಬ್ಬರಿಗೂ ಬೆಲೆ ಏರಿಕೆ ಬಿಸಿ ತಗುಲಿದೆ. ಸಣ್ಣ ಬೈಕು, ಕಾರು ಇಟ್ಟುಕೊಂಡ ಕುಟುಂಬಕ್ಕೆ ನಿತ್ಯ 100 ರು. ಹೆಚ್ಚುವರಿ ವೆಚ್ಚ ತಗುಲುತ್ತಿದೆ. 2014ರಲ್ಲಿ 410 ರು. ಇದ್ದ ಅಡುಗೆ ಅನಿಲ 1 ಸಾವಿರ ರು. ಆಗಿದೆ. 68 ರು. ಇದ್ದ ಪೆಟ್ರೋಲ್‌ 113 ರು. ಆಗಿದೆ. ಅಡುಗೆ ಎಣ್ಣೆ 210 ರು. ದಾಟಿದೆ. ಈ ವರ್ಷ ರಸಗೊಬ್ಬರ ದರವನ್ನೂ 150 ರು. ಹೆಚ್ಚಳ ಮಾಡಲಾಗಿದೆ. ಇನ್ನು ಹಾಲು, ವಿದ್ಯುತ್‌, ಬಟ್ಟೆ, ಕಟ್ಟಡ ನಿರ್ಮಾಣ ಸಾಮಗ್ರಿ ಎಲ್ಲದರಲ್ಲೂ ಶೇ.20 ರಿಂದ 30 ರಷ್ಟುದರ ಏರಿಕೆಯಾಗಿದೆ. ಹೀಗಾದರೆ ಬಡವರು ಹೇಗೆ ಬದಕಬೇಕು ಎಂದು ಕಿಡಿಕಾರಿದರು.

ಈಗಾಗಲೇ 150 ಮಂದಿ ಪದಾಧಿಕಾರಿಗಳ ನೇಮಕ ಆಗಿದೆ. ಇನ್ನೂ 200 ಮಂದಿ ನೇಮಕವಾಗಲಿದ್ದು, ನೀವು ಕಾರ್ಯಕರ್ತರೊಂದಿಗೆ ಪ್ರತಿ ಕ್ಷೇತ್ರದಲ್ಲೂ ಮನೆ-ಮನೆಗೆ ಹೋಗಬೇಕು. ಈ ಸರ್ಕಾರ ಹೇಗೆಲ್ಲಾ ಜನರಿಗೆ ಅನ್ಯಾಯ ಮಾಡುತ್ತಿದೆ ಎಂಬುದನ್ನು ತಿಳಿಸಬೇಕು. ಸರ್ಕಾರದ ಭ್ರಷ್ಟಾಚಾರವನ್ನು ಬಿಚ್ಚಿಡಬೇಕು ಎಂದು ಕರೆ ನೀಡಿದರು.

ಜನರ ಹಾದಿ ತಪ್ಪಿಸಲಾಗುತ್ತಿದೆ- ಸಲೀಂ ಅಹಮದ್‌:

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌(Saleem Ahmed), ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಈ ಜನರ ಹಾದಿ ತಪ್ಪಿಸಲು ಭಾವನಾತ್ಮಕ ವಿಚಾರಗಳನ್ನು ಮುಂದೆ ತಂದು ಸಮಾಜದಲ್ಲಿ ಹುಳಿ ಹಿಂಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ವಿಚಾರವನ್ನು ಜನರಿಗೆ ಮುಟ್ಟಿಸಬೇಕು. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದವರು ಸಬ್‌ ಕಾ ವಿನಾಶ್‌ ಮಾಡಲು ಹೊರಟಿದ್ದಾರೆ. ಈ ಅಯೋಗ್ಯರ ಸರ್ಕಾರ ಕಿತ್ತೊಗೆಯಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಗೃಹ ಸಚಿವ ಗಾಂಜಾ ಹೊಡೆಯುತ್ತಾರೆ ಎನಿಸುತ್ತೆ- ಹರಿಪ್ರಸಾದ್‌:

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಚಂದ್ರು ಕೊಲೆ ಪ್ರಕರಣದಲ್ಲಿ ರಾಜ್ಯದ ಅರೆಬೆಂದ ಗೃಹ ಸಚಿವ ಆರಗ ಜ್ಞಾನೇಂದ್ರ ನಶೆಯಲ್ಲಿದ್ದಂತೆ ಮಾತನಾಡಿದ್ದಾರೆ. ಹೆಂಡ ಅಥವಾ ಗಾಂಜಾ(Marijuana) ಹೊಡೆಯುವ ಅಭ್ಯಾಸ ಇರಬೇಕು ಎನಿಸುತ್ತದೆ. ಹೀಗಾಗಿ ಆರಗ ಜ್ಞಾನೇಂದ್ರ ಅರೆಜ್ಞಾನದಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಬೆಲೆ ಏರಿಕೆ ವಿರುದ್ಧ ರಾಜ್ಯವ್ಯಾಪಿ ಹೋರಾಟ: ಕಾಂಗ್ರೆಸ್‌

ಎಐಸಿಸಿ ಕಾರ್ಯದರ್ಶಿ ರಮಿಂದರ್‌ ಸಿಂಗ್‌ ಅವ್ಲಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್‌ ಖಂಡ್ರೆ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹಾಜರಿದ್ದರು.

ಸಿದ್ದು ಸರ್ಕಾರ ಬರಬೇಕು: ಪುಷ್ಪಾ ಅಮರನಾಥ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲೇ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಸಿದ್ದರಾಮಯ್ಯ ಸರ್ಕಾರ ಬರಬೇಕು ಎಂದರು. ಮುಂದಿನ ಒಂದು ವರ್ಷ ಮಹಿಳಾ ಕಾಂಗ್ರೆಸ್‌ ನಾಯಕಿಯರು ರಾಜ್ಯಾದ್ಯಂತ ಸಂಚರಿಸುತ್ತೇವೆ. ಬಿಜೆಪಿ ಸರ್ಕಾರ ತೊಲಗಿಸಿ ಸಿದ್ದರಾಮಯ್ಯ ಸರ್ಕಾರ ತರಲು ಕೃಷಿ ಮಾಡುತ್ತೇವೆ ಎಂದರು.

ಸಿದ್ದು ಭಾಷಣದ ವೇಳೆ ಎದ್ದು ಹೋದ ಡಿಕೆಶಿ

ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಭಟನಾ ಸಭೆಯಿಂದ ಹೊರಟು ಹೋದರು. ಕಾಮಾಕ್ಯ ದೇವಸ್ಥಾನದಲ್ಲಿ ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಭೆಯ ನಡುವೆಯೇ ಹೊರಟರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!