ವಕ್ಫ್ ಆಸ್ತಿ ವಿಚಾರವಾಗಿ ತಮ್ಮ ವಿರುದ್ಧ ಮಾಡಲಾಗಿರುವ 150 ಕೋಟಿ ರು. ಆಮಿಷದ ಆರೋಪ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು (ಡಿ.15): ವಕ್ಫ್ ಆಸ್ತಿ ವಿಚಾರವಾಗಿ ತಮ್ಮ ವಿರುದ್ಧ ಮಾಡಲಾಗಿರುವ 150 ಕೋಟಿ ರು. ಆಮಿಷದ ಆರೋಪ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಕಾಂಗ್ರೆಸಿಗರ ವಿರುದ್ಧದ ಆರೋಪಕ್ಕೆ ಯಾರಾದರೂ 150 ಕೋಟಿ ರು. ಆಮಿಷವೊಡ್ಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ವಿಜಯೇಂದ್ರ, ಇಂಥ ಕನಿಷ್ಠ ವಿವೇಕವೂ ನಿಮಗಿಲ್ಲವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರೇ ಸಿಬಿಐ, ಇ.ಡಿ ತನಿಖೆಗಳಿಗೆ ಬೆಚ್ಚಿಬಿದ್ದಿರುವ ನೀವು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿ ಪ್ರಶ್ನಿಸಿ ಘಟಾನುಘಟಿ ಹಿರಿಯ ವಕೀಲರನ್ನು ದೆಹಲಿಯಿಂದ ಕರೆಸಿಕೊಂಡು ಕಾನೂನು ರಕ್ಷಣೆ ಪಡೆಯಲು ವ್ಯರ್ಥ ಪ್ರಯತ್ನ ನಡೆಸಿದಿರಿ. ಹೈಕೋರ್ಟ್ ನ್ಯಾಯಾಲಯದ ತೀರ್ಪಿನಿಂದ ಮುಖಭಂಗಕ್ಕೀಡಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಯಾವ ನೈತಿಕತೆ ಇದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಕೋವಿಡ್ ಅಕ್ರಮ ಬಗ್ಗೆ ಮೊದಲ ಎಫ್‌ಐಆರ್: ಮೂವರು ಅಧಿಕಾರಿಗಳ ಹೆಸರು ಉಲ್ಲೇಖ
ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸದಂತೆ ತಡೆಯಲು ಈ ಕ್ಷಣಕ್ಕೂ ದೆಹಲಿಯ ಸಂವಿಧಾನ ತಜ್ಞ ವಕೀಲರನ್ನೇ ಕರೆಸಿ ಕನ್ನಡಿಗರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡಿ ವಾದ ಮಾಡಿಸಿಕೊಳ್ಳುತ್ತಿದ್ದೀರಿ. ನಿಮಗೆ ಮೆತ್ತಿಕೊಂಡಿರುವ ಕಪ್ಪುಮಸಿ ಅಳಿಸುವ ಯಾವ ರಾಸಾಯನಿಕವೂ ದೊರಕುತ್ತಿಲ್ಲ. ಇದರಿಂದ ನೀವು ಹತಾಶರಾಗಿ ತಳ ಬುಡವಿಲ್ಲದ ಕಪೋಲಕಲ್ಪಿತ ವಿಷಯ ಹಿಡಿದುಕೊಂಡು ಬ್ರಹ್ಮಾಸ್ತ್ರವೆಂದು ಭ್ರಮಿಸಿ ಪ್ರಯೋಗಿಸಲು ಹೊರಟಿದ್ದೀರಿ ಎಂದು ಪತ್ರಿಕಾ ಹೇಳಿಕೆ ಮೂಲಕ ವಿಜಯೇಂದ್ರ ಹರಿಹಾಯ್ದಿದ್ದಾರೆ.
undefined
ಇವುಗಳಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತು ಇನ್ನೇನೂ ಸಾಧಿಸಲಾಗದು. ನಿಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಾಕ್ಷಿಗಳು ದಿನನಿತ್ಯ ಸರಣಿ ರೂಪದಲ್ಲಿ ಮೇಲೆದ್ದು, ನಿಮ್ಮ ಮುಖಕ್ಕೆ ರಾಚುತ್ತಲೇ ಇವೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿರುವುದು ಕಾಂಗ್ರೆಸ್ಸಿಗರು ಆಕ್ರಮಿಸಿರುವ ವಕ್ಫ್ ಆಸ್ತಿಗಳ ಕುರಿತೇ ಹೊರತು ಬಿಜೆಪಿಯವರ ಕುರಿತು ಅಲ್ಲ. ಕಾಂಗ್ರೆಸ್ಸಿಗರ ವಿರುದ್ಧ ಇರುವ ಆರೋಪಕ್ಕೆ ಯಾರಾದರೂ 150 ಕೋಟಿ ರು. ಆಮಿಷ ಒಡ್ಡಲು ಸಾಧ್ಯವೇ? ಎಂಬ ಕನಿಷ್ಠ ವಿವೇಕವೂ ಸಿದ್ದರಾಮಯ್ಯ ಅವರಿಗಿಲ್ಲ ಎಂದಿದ್ದಾರೆ.
ತಳಬುಡವಿಲ್ಲದ ಆರೋಪವನ್ನು ನೀವು ಹಾಗೂ ನಿಮ್ಮ ಸಂಪುಟದ ಪ್ರಿಯಾಂಕ್ ಖರ್ಗೆ ಅವರು ಸಂಭ್ರಮಿಸುತ್ತಿರುವ ಪರಿ ನಿಮ್ಮ ಬಾಲಿಶತನ ತೋರಿಸುತ್ತಿದೆಯೇ ಹೊರತು ನಿಮ್ಮ ರಾಜಕೀಯ ಜಾಣ್ಮೆಯನ್ನಲ್ಲ. ನಿಮಗೆ ಧೈರ್ಯವಿದ್ದರೆ, ಹೈಕೋರ್ಟ್‌ನಲ್ಲಿರುವ ನಿಮ್ಮ ವಿರುದ್ಧದ ಮುಡಾ(ಮೈಸೂರು ನಗರಾಭಿವೃದ್ಧಿ) ಹಗರಣದ ಕುರಿತು ಸಿಬಿಐ ತನಿಖೆಗೆ ಕೋರಿದ ರಿಟ್ ಅರ್ಜಿಗೆ ಆಕ್ಷೇಪವೆತ್ತಬೇಡಿ. ಸಿಬಿಐ ತನಿಖೆಗೆ ಅವಕಾಶ ಮಾಡಿಕೊಡಿ ನೋಡೋಣ ಎಂದು ವಿಜಯೇಂದ್ರ ಸವಾಲು ಎಸೆದಿದ್ದಾರೆ.
ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ವಿಧಾನ ಮಂಡಲದ ಉಭಯ ಸದನಗಳ ಚರ್ಚೆಯ ದಿಕ್ಕುತಪ್ಪಿಸಲು ಹಾಗೂ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯಲು ಇಂತಹ ಕ್ಷುಲ್ಲಕ ಕಪೋಲಕಲ್ಪಿತ ವಿಷಯವನ್ನು ರಂಧ್ರ ಪೂರಿತ ದೋಣಿ ತೇಲಿಬಿಟ್ಟಿದ್ದೀರಿ. ಇದು ನಿಮ್ಮ ರಾಜಕೀಯ ಪ್ರಬುದ್ಧತೆಗೆ ತುಕ್ಕು ಹಿಡಿದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.