ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

By Kannadaprabha NewsFirst Published May 11, 2023, 5:31 PM IST
Highlights

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. 

ಕಲಬುರಗಿ (ಮೇ.11): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ಬಸವನಗರದ ಮತಗಟ್ಟೆಕೇಂದ್ರದಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕಾಂಗ್ರೆಸ್‌ ಪರವಾದ ಅಲೆ ಇದೆ. ಈ ಬಾರಿ ಕಾಂಗ್ರೆಸ್‌ ಸ್ಪಷ್ಟಬಹುಮತ ಸಿಗಲಿದೆ ಎಂದರು. ಕಳೆದ 1967ರಿಂದ ಬಸವನಗರದ ಮತಗಟ್ಟೆಕೇಂದ್ರದಲ್ಲಿ ಮತದಾನ ಮಾಡುತ್ತ ಬಂದಿದ್ದೇನೆ. ಇಲ್ಲಿಯವರೆಗೆ 27ರಿಂದ 28 ಬಾರಿ ಮತದಾನ ಮಾಡಿರಬಹುದು. ಇಲ್ಲಿನ ಜನರ ಪ್ರೀತಿ-ವಿಶ್ವಾಸ ದೊಡ್ಡದು, ಅವರ ಪ್ರೀತಿ-ವಿಶ್ವಾಸ ಮರೆಯಲು ಸಾಧ್ಯವಿಲ್ಲ ಎಂದರು.

ಎಸ್‌ಸಿ ಎಸ್‌ಟಿ ಮೀಸಲಾತಿಗೆ ಕೋರ್ಟ ತಡೆ ನೀಡಿದೆ ಎನ್ನುವ ಖರ್ಗೆ ಹೇಳಿಕೆ ಸುಳ್ಳು ಎಂದಿದ್ದ ಸಿಎಂ ಬೊಮ್ಮಾಯಿ ಹೇಳಿಕೆ ಬಗ್ಗೆ ತಿರುಗೇಟು ನೀಡಿದ ಖರ್ಗೆಯವರು ಮೀಸಲಾತಿ ವಿಚಾರ ಕೋರ್ಚ್‌ನಲ್ಲಿ ಇದೆ ಅಂತ ಹೇಳ್ತಾರೆ, ಮೀಸಲಾತಿ ಕೊಟ್ಟಿದ್ರೆ ದಿನಾಂಕ ಯಾಕೆ ಮುಂದೆ ಹಾಕಿದ್ರು. ಪದೇ ಪದೇ ಮುಂದೆ ಹಾಕಲು ಕಾರಣ ಏನು ಅನ್ನೋದನ್ನ ಸಿಎಂ ಹೇಳಲಿ. ಅವರು ಅಧಿಕಾರದಲ್ಲಿ ಇದ್ದಾಗಲೇ ಜಾರಿಗೆ ತರಬೇಕಿತ್ತು. ಯಾಕೆ ಜಾರಿಗೆ ತಂದಿಲ್ಲ ? ಇದೆಲ್ಲ ಸುಮ್ನೆ ಚುನಾವಣೆ ಬಂದಿದೆ ಅಂತಾ ಹೀಗೆ ಮಾಡುತ್ತಾರೆಂದರು.

Kodagu: ಸೂಟ್‌ಕೇಸ್ ಕ್ಯಾಂಡಿಡೇಟ್‌ನಿಂದ ಚುನಾವಣಾ ಕಣ ಟಫ್ ಇತ್ತು: ಅಪ್ಪಚ್ಚು ರಂಜನ್

ಡಾ. ಖರ್ಗೆಯವರು ಬಸವನ ನಗರದ ಮತಗಟ್ಟೆಗೆ ಬರುವಾಗ ನೂರಾರು ಜನ ಅರವರನ್ನು ಹಿಂಬಾಲಿಸಿದ್ದರು. ಖರ್ಗೆಯವರ ಆಗಮನದ ಹಿನ್ನೆಲೆಯಲ್ಲಿ ಮತಗಟ್ಟೆಬಳಿ 100 ಮೀಟರ್‌ನಷ್ಟುಹಸಿರು ಹೊದಿಕೆ ಹಾಸಲಾಗಿತ್ತು. ಇನ್ನೂರು ಮೀಟರ್‌ನಷ್ಟು ದೂರದಿಂದ ಕಾಲ್ನಡಿಗೆಯಲ್ಲೇ ಬಂದ ಖರ್ಗೆಯವರಿಗೆ ಅಭಿಮಾನಿಗಳು ಹಸಿರು ಹಾಸಿನಿಂದ ಸ್ವಾಗತಿಸಿದ್ದು ಗಮನಾರ್ಹವಾಗಿತ್ತು.

ಲಂಚಕೋರ ಬಿಜೆಪಿ ಸೋಲಿಸಿ: ಜನರ ಹಣವನ್ನು ಲೂಟಿ ಮಾಡಿದ 40 ಪರ್ಸೆಂಟ್‌ ಲಂಚದ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿದರು. ಹಿಂದುಳಿದ ಜಿಲ್ಲೆಗಳ ಅನುಕೂಲಕ್ಕಾಗಿ 371(ಜೆ) ಕಾಯ್ದೆ ಅನುಷ್ಠಾನಗೊಳಿಸಿ ಏಳು ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರೆಯುವಂತೆ ಕಾಂಗ್ರೆಸ್‌ ಮಾಡಿದೆ. ಎಲ್ಲ ಸಮುದಾಯಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಅನೇಕ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಈ ಕಾಯ್ದೆ ನೆರವಾಗಿದೆ. 

ಇದು ಕಾಂಗ್ರೆಸ್‌ ನೀಡಿರುವ ಕೊಡುಗೆ. ಸೋನಿಯಾ ಪ್ಯಾಕೇಜ್‌ ಮೂಲಕ ಬಳ್ಳಾರಿ ಜಿಲ್ಲೆಯ ಪ್ರಗತಿಗೆ ಕಾಂಗ್ರೆಸ್‌ ಒತ್ತು ನೀಡಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ 10 ಕೆಜಿ ಉಚಿತ ಅಕ್ಕಿ, ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು, ನಿರುದ್ಯೋಗಿ ಯುವಕರಿಗೆ ಭತ್ಯೆ, 200 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು. ಈ ಬಾರಿ ಮತ್ತೆ ಅಧಿಕಾರಕ್ಕೆ ತನ್ನಿ. ಇನ್ನು ಅನೇಕ ಜನಪರ ಕೆಲಸಗಳನ್ನು ಮಾಡುತ್ತೇವೆ. ಇಡೀ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತೇವೆ ಎಂದರು.

Udupi: ಚುನಾವಣೆ ಮುಗಿತು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಚೆಗೆ ಬಳ್ಳಾರಿಗೆ ಬಂದಿದ್ದರು. ಅನೇಕ ಭರವಸೆಗಳನ್ನು ನೀಡಿ ಹೋಗಿದ್ದಾರೆ. ಅವರ ಮಾತುಗಳನ್ನು ನಂಬಬೇಡಿ. ಬರೀ ಸುಳ್ಳು ಹೇಳುವುದೇ ಅವರ ಕೆಲಸ. ಈ ಹಿಂದೆ ಕಪ್ಪು ಹಣ ವಾಪಸ್‌ ತಂದು ಪ್ರತಿ ಭಾರತೀಯನ ಖಾತೆಗೆ .15 ಲಕ್ಷ ಹಾಕುವುದಾಗಿ ಹೇಳಿದ್ದರು. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಎಂದು ಹೇಳಿದ್ದರು. ಖಾತೆಗೆ ಹಣ ಬರಲಿಲ್ಲ. ಉದ್ಯೊಗ ಸೃಷ್ಟಿಯೂ ಆಗಲಿಲ್ಲ. ಬದಲಿಗೆ ಉದ್ಯೋಗ ನಾಶಕ್ಕೆ ಕಾರಣರಾದರು ಎಂದು ಟೀಕಿಸಿದರು.

click me!