ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರೈತ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಚಿತ್ರದುರ್ಗ (ಡಿ.25): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರೈತ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಿಸಾನ್ ಸೆಲ್‌ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು, ಕೃಷಿಕರು, ಕಾರ್ಮಿಕರು ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ಆದರೆ ಬಿಜೆಪಿ ಶ್ರೀಮಂತರ ಪಕ್ಷವೆಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ, ಬದ್ಧತೆ ಇದೆ. ದೇಶಕ್ಕೆ ಅನ್ನ ಕೊಡುತ್ತಿರುವ ರೈತರ ಋಣ ತೀರಿಸಬೇಕಾಗಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ರೈತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕಿದೆ. ರೈತರ ಬದುಕಿಗೆ ಭದ್ರತೆ ಕೊಡುವುದು ಕಾಂಗ್ರೆಸ್ ಪಕ್ಷವೆ ವಿನಃ ಕೋಮುವಾದಿ ಬಿಜೆಪಿಯಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಡಾ.ಮನಮೋಹನ್‍ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ರೈತರ 73 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಲಾಗಿತ್ತು ಎಂದರು.
undefined
ಹಿಜಾಬ್ ಸಭೆ ಗೊತ್ತಿಲ್ಲ, ಸಮವಸ್ತ್ರ ವಿಚಾರದಲ್ಲಿ ಗೊಂದಲವಿಲ್ಲ: ಸಚಿವ ಮಧು ಬಂಗಾರಪ್ಪ
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಯಾವುದೇ ಸಭೆ ಸಮಾರಂಭ, ಸಮಾವೇಶಗಳಲ್ಲಿ ರೈತ ಗೀತೆ ಹಾಡುವ ಪದ್ದತಿಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿತ್ತು. ಅಧಿಕಾರಿಗಳು, ಸರ್ಕಾರಿ ನೌಕರರು ಮೃತಪಟ್ಟರೆ ಕುಟುಂಬಕ್ಕೆ ಅನುಕಂಪದ ನೌಕರಿ, ಪಿಂಚಣಿ ಸಿಗುತ್ತದೆ. ರೈತ ಸತ್ತರೆ ಯಾವ ಪರಿಹಾರವೂ ಇಲ್ಲ. ಕೇಂದ್ರ ಸರ್ಕಾರದ ಮೂರು ಕರಾಳ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಲಕ್ಷಾಂತರ ರೈತರು ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ 800 ರೈತರು ಸಾವನ್ನಪ್ಪಿದಾಗ ಮಾನವೀಯತೆಯಿಂದಾದರೂ ದೇಶದ ಪ್ರಧಾನಿ ಮೋದಿ ರೈತರ ಬಳಿ ಧಾವಿಸಿ ಸಮಸ್ಯೆಗಳನ್ನು ಕೇಳಬಹುದಿತ್ತು. ಅದ್ಯಾವುದು ಮಾಡಲಿಲ್ಲ.
ರೈತರು ಎಚ್ಚೆತ್ತುಕೊಂಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಕಿಸಾನ್‍ಸೆಲ್ ವಿಭಾಗದ ಉಪಾಧ್ಯಕ್ಷ ಶಿವಲಿಂಗಪ್ಪ ಮಾತನಾಡಿ, ಗೊಬ್ಬರ ಔಷಧಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರ ಸಂಪೂರ್ಣ ರೈತ ವಿರೋಧಿಯಾಗಿದೆ. ಬಡವರು, ಕೂಲಿ ಕಾರ್ಮಿಕರು, ಕೃಷಿಕರು, ರೈತರು ಬದುಕುವಂತಿಲ್ಲ. ಮೋಸ ನಡೆಯುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಕೋಮುವಾದಿಯನ್ನು ಅಧಿಕಾರದಿಂದ ಓಡಿಸಬೇಕು ಎಂದು ರೈತರಲ್ಲಿ ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಕೃಷಿಯಿದೆ. ಪಂಚ ವಾರ್ಷಿಕ ಯೋಜನೆ ದೇಶಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆಯಾಗಿದೆ. ತಾಂತ್ರಿಕ ಕಾಲೇಜು, ವಿಶ್ವವಿದ್ಯಾನಿಲಯ, ಬ್ಯಾಂಕುಗಳು ನಮ್ಮ ಪಕ್ಷದ ಕೊಡುಗೆ. ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಬಡವರು ಬ್ಯಾಂಕ್‍ಗಳಲ್ಲಿ ವ್ಯವಹರಿಸುವಂತಾಯಿತು. ರೈತರ ಭವಿಷ್ಯ ಹಾಗೂ ದೇಶದ ಸುಭದ್ರತೆಗೆ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಓಲೈಕೆ: ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಿಸಾನ್ ಸೆಲ್ ವಿಭಾಗದ ಅಧ್ಯಕ್ಷ ನಾಗರಾಜ್, ಕೆಪಿಸಿಸಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟಶಿವರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಸೇರಿದಂತೆ ಕಿಸಾನ್ ಸೆಲ್ ವಿಭಾಗದ ಪದಾಧಿಕಾರಿಗಳು ಹಾಗೂ ರೈತ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.