ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಬಡವರಿಗೆ ನೆಮ್ಮದಿ: ಯತೀಂದ್ರ ಸಿದ್ದರಾಮಯ್ಯ

By Kannadaprabha News  |  First Published Dec 16, 2023, 3:21 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. 


ಮೈಸೂರು (ಡಿ.16): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ವರುಣ ಕ್ಷೇತ್ರದ ತಾಂಡವಪುರ ಗ್ರಾಪಂ ವ್ಯಾಪ್ತಿಯ ಹೆಬ್ಯಾ, ಅಡಕನಹಳ್ಳಿಹುಂಡಿ, ತಾಂಡವಪುರ, ಚಿಕ್ಕಯ್ಯನ ಛತ್ರ, ಬಂಚಳ್ಳಿ ಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಅದಾಲತ್, ಪಿಂಚಣಿ ಅದಾಲತ್ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಹೆಬ್ಯಾ ಗ್ರಾಮದಲ್ಲಿ ಅವರು ಮಾತನಾಡಿದರು.

ನಿಮ್ಮೆಲ್ಲರ ಆರ್ಶೀವಾದದಿಂದ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಗ್ರಾಮಕ್ಕೆ ಸಿಸಿ ರಸ್ತೆ, ಬಸ್ ಬೇಕು, ಸ್ಮಶಾನ ಅಭಿವೃದ್ಧಿ, ಅಂಬೇಡ್ಕರ್ ಭವನ, ದೇವಸ್ಥಾನ, ಸೇತುವೆ ನಿರ್ಮಾಣ, ಯುಜಿಡಿ, ವಿದ್ಯುತ್ ಕಂಬ, ಪೌರಕಾರ್ಮಿಕರಿಗೆ ನಿವೇಶನ ಸೇರಿದಂತೆ 20 ಕಾಮಗಾರಿಗಳ ಪಟ್ಟಿ ನೀಡಿದ್ದೀರಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಅವಧಿಯಲ್ಲಿ ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದರು. ಗೃಹಲಕ್ಷ್ಮಿ ಹಣ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಬರುತ್ತದೆ, ಮಹಿಳೆಯರು ಆತಂಕಪಡಬೇಕಾಗಿಲ್ಲ. 150 ಜನ ಪೌರಕಾರ್ಮಿಕರಿಗೆ ಎಲ್ಲೆಲ್ಲಿ ನಿವೇಶನಗಳಿವೆ ಗುರುತಿಸಿ, ಆಯಾ ಗ್ರಾಮಗಳಲ್ಲಿ ನಿವೇಶನ ಕೊಡಲು ಕ್ರಮ ಕೈಗೊಳ್ಳವುದಾಗಿ ಅವರು ತಿಳಿಸಿದರು.

Latest Videos

undefined

ಸಿಎಂ ಸಿದ್ದರಾಮಯ್ಯ ಏನು ಪ್ರಧಾನಿಮಂತ್ರಿನಾ?: ಸಂಸದ ಮುನಿಸ್ವಾಮಿ

ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಗ್ರಾಪಂ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಶಿವಣ್ಣ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಪಿಡಿಒ ಪ್ರಕಾಶ್, ಗ್ರಾಪಂ ಸದಸ್ಯರಾದ ನಾಗವೇಣಿ, ರೇವಮ್ಮ, ಸುಧಾರಾಣಿ, ಭಾಗ್ಯ, ಇಒ ಜೆರಾಲ್ಡ್ ರಾಜೇಶ್, ಸಿಡಿಪಿಒ ಮಂಜುಳಾ, ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್, ಮುಖಂಡರಾದ ರಾಜು, ಬಾಕನಹುಂಡಿ ಶಿವು, ಹಿನಕಲ್ ಉದಯ್, ಎಪಿಎಂಸಿ ಮಾಜಿ ಸದಸ್ಯ ಬಸವರಾಜು ಇದ್ದರು.

ಕೂಸಿನ ಮನೆ ಉದ್ಘಾಟಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ: ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅವರ ಮಕ್ಕಳ ಸುರಕ್ಷತೆ ಮತ್ತು ಪೋಷಣೆಗೆ ಕೂಸಿನ ಮನೆ ಅಗತ್ಯವಿದೆ ಎಂದು ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಪಂ ಪಕ್ಕದ ಹಳೆಯ ಸರ್ಕಾರಿ ಶಾಲಾ ಕಟ್ಟಡದಲ್ಲಿ ವ್ಯವಸ್ಥಿತವಾಗಿ ಸಿದ್ಧಗೊಂಡಿರುವ ಕೂಸಿನ ಮನೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಕೆಲಸ: ಸಚಿವ ಜಮೀರ್‌

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಮತ್ತು ನರೇಗಾ ಯೋಜನೆಯಡಿ ಮಹಿಳೆಯರು ಕೂಲಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಹಾಗೂ ಸೌಕರ್ಯ ಕಲ್ಪಿಸುವುದರ ಜತೆಗೆ ಅವರ ಮಕ್ಕಳ ಆರೋಗ್ಯ ಪೌಷ್ಟಿಕತೆ ಮತ್ತು ಸುರಕ್ಷತೆಗೆ ಕೂಸಿನ ಮನೆ ನೆರವಾಗಲಿದೆ ಎಂದರು. ಈ ವೇಳೆ ಕೂಸಿನ ಮನೆ ಮಕ್ಕಳಿಗೆ ಸಿಹಿ ತಿನಿಸಿ ಶುಭ ಕೋರಲಾಯಿತು. ನಂತರ ಕೂಸಿನ ಮನೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದರು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಪಿಡಿಒ ಪ್ರಕಾಶ್, ಗ್ರಾಪಂ ಅಧ್ಯಕ್ಷ ನಾಗಮ್ಮ, ಉಪಾಧ್ಯಕ್ಷ ಬಿ.ಶಿವಣ್ಣ, ಸದಸ್ಯರು, ಇಲಾಖೆ ಅಧಿಕಾರಿಗಳು ಇದ್ದರು.

click me!