ರೈಲು ಯೋಜನೆಗೆ ಕಾಂಗ್ರೆಸ್ ಸರ್ಕಾರ ಭೂಮಿ ಕೊಡಿಸಲಿ: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha News  |  First Published Jul 14, 2024, 11:29 PM IST

2026ರ ಡಿಸೆಂಬರ್‌ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿದಂಲೇ ಈ ಯೋಜನೆ ಲೋಕರ್ಪಣೆ ಮಾಡಿಸಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
 


ಮಧುಗಿರಿ (ಜು.14): ಈ ಭಾಗದ ಬಹು ದಿನಗಳ ಬೇಡಿಕೆಯಾದ ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆಗೆ ₹1,000 ಕೋಟಿ ನೀಡಲಿದ್ದು, 2026ರ ಡಿಸೆಂಬರ್‌ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿದಂಲೇ ಈ ಯೋಜನೆ ಲೋಕರ್ಪಣೆ ಮಾಡಿಸಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಡಿಎಸ್‌, ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಜನತೆ ನನಗೆ ಅತ್ಯಧಿಕ ಮತ ನೀಡಿದ್ದು, ನಿಮಗೆ ಸೇತುವೆಯಾಗಿ ಕೆಲಸ ಮಾಡುತ್ತೇನೆ. ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೇ ತಡವಾಗಿದ್ದು, 24-25ರ ಆಯವ್ಯದಲ್ಲಿ 1 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ. 

ಈ ಬಗ್ಗೆ ರಾಜ್ಯ ಸರ್ಕಾರ ಭೂಮಿ ಕೊಡಿಸಲು ಮುಂದಾಗಬೇಕು ಎಂದರು.ಅಧಿಕಾರ ಶಾಶ್ವತವಲ್ಲ, ನಿಮ್ಮ ಪ್ರೀತಿ, ವಿಶ್ವಾಸ, ದೇಶದ ಅಭ್ಯುದಯ ಮುಖ್ಯ. ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ, ಕೈಗಾರಿಕಾ ವಲಯ ಪುನಶ್ಚೇತನ ಹಾಗೂ ಇಲ್ಲಿನ ಏಕಶಿಲಾ ಬೆಟ್ಟ ಪ್ರವಾಸೋದ್ಯಮ ಮಾಡಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ನಾನು ಹಾಗೂ ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್‌ ಬದ್ಧರಾಗಿದ್ದೇವೆ. ಆದರೆ ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಸಹಕಾರ ಅತಿ ಮುಖ್ಯ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಲಬೇಕು. ಇಲ್ಲವೆಂದರೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

Latest Videos

undefined

ಅಭಿವೃದ್ಧಿ ಕಾರ್ಯದಲ್ಲಿ ಭ್ರಷ್ಟಾಚಾರ ಸಹಿಸಲ್ಲ: ಅಧಿಕಾರಿಗಳಿಗೆ ಶಾಸಕ ಬಸವರಾಜ ರಾಯರಡ್ಡಿ ಎಚ್ಚರಿಕೆ

4.9 ಕೋಟಿ ರು. ಅನುದಾನ ಬಿಡುಗಡೆ: ಮಧುಗಿರಿಗೆ ಕೇಂದ್ರಿಯ ವಿದ್ಯಾಲಯ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದು, ನನ್ನ ಅನುದಾನದಲ್ಲ್ಲಿ4.9 ಕೋಟಿ ರು. ಬಿಡುಗಡೆಯಾಗಿದ್ದು, ಪ್ರತಿ ಗ್ರಾಪಂ ಮಟ್ಟಕ್ಕೂ ಅಭಿವೃದ್ಧಿ ವಿಸ್ತರಿಸುತ್ತೇನೆ. ಶಾಲೆ, ರಸ್ತೆ, ಶುದ್ಧ ಕುಡಿವ ನೀರು, ವಿದ್ಯುತ್‌ ಹಾಗೂ ರೈತರ ಪೌತಿ ಖಾತೆ ಆಂದೋಲನ ಜಮೀನಿಗೆ ಸಾಗುವಳಿ ಚೀಟಿ ಬಗ್ಗೆ ಅಧಿಕಾರಿಗಳು ಕಾಳಜಿವಹಿಸಬೇಕು ಎಂದರು.

ನಾನು ಕೇಂದ್ರ ಸಚಿವನಾಗಿದ್ದೇನೆ ನೆನಪಿರಲಿ: ನಾನು ಕ್ಷೇತ್ರಕ್ಕೆ ಬಂದಾಗ ಸ್ಥಳೀಯ ಅಧಿಕಾರಿಗಳು ಶಿಷ್ಠಾಚಾರ ಪಾಲಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಗೃಹ ಸಚಿವರು ಅಧಿಕಾರಿಗಳನ್ನು ನಾನು ಪ್ರಶ್ನಿಸುವಂತಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರದ ಪ್ರತಿ ಕಾರ್ಯಕ್ರಮಗಳಿಗೆ ಕೇಂದ್ರ ಶೇ.50 ಅನುದಾನ ಇರಲಿದೆ. ಆದ ಕಾರಣ ನಾನು ಪ್ರತಿ ತಿಂಗಳಿಗೊಮ್ಮೆ ಕ್ಷೇತ್ರಗಳಿಗೆ ಆಗಮಿಸಲಿದ್ದು, ನಾನು ಕೇಂದ್ರದ ಸಚಿವನಾಗಿದ್ದೇನೆ ಗುರು ಇದು ನೆನಪಿರಲಿ. ಶಿಷ್ಟಾಚಾರ ಉಲ್ಲಂಘನೆ ಬೇಡ ಜಿಲ್ಲೆಯ ಜನರ ಭಾವನೆಗಳಿಗೆ ಬೆಲೆ ಕೊಡಬೇಕು ಎಂದು ಗುಡುಗಿದರು.

ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದಂತೆ ಜೆಡಿಎಸ್‌, ಬಿಜೆಪಿಯವರು ಮತ ನೀಡುವ ಜೊತೆಗೆ ಕಾಂಗ್ರೆಸ್‌ನವರು ಮತ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಕೊಡಲಿದ್ದು, ಅಭಿವೃದ್ಧಿಗಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡೋಣ, ಗೆಲುವು ನಿರೀಕ್ಷಿಸಿದ್ದ ನನಗೆ 1.65 ಲಕ್ಷ ಬಹು ಮತ ನೀಡಿದ್ದು ಕ್ಷೇತ್ರದ ಮತದಾರರಿಗೆ ಅಭಾರಿಯಾಗಿದ್ದು, ಅನಿರೀಕ್ಷಿತವಾಗಿ ಬಂದವನಿಗೆ ಆಶೀರ್ವಾದ ಮಾಡಿದ್ದು ನಿಮ್ಮ ಋಣ ತಿರೀಸುತ್ತೇನೆ ಎಂದು ಭಾವುಕರಾದರು.

ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಧುಗಿರಿ ಹೆಸರು ಭದ್ರಾ ಮೇಲ್ದಂಡೆ ಪಟ್ಟಿಗೆ ಸೇರಿಸಬೇಕು. ಎಚ್‌.ಡಿ.ಕುಮಾರಸ್ವಾಮಿ ಮಂಜೂರು ಮಾಡಿದ ಕೈಗಾರಿಕಾ ವಲಯ ಪುನಶ್ಚೇತನವಾಗಬೇಕು. ಎತ್ತಿನ ಹೊಳೆ, ಬೆಟ್ಟದ ರೋಪವೇ ಕಾಮಗಾರಿಗೆ ಒತ್ತು ನೀಡಬೇಕು ಎಂದರು. ಬಿಜೆಪಿ ಮುಖಂಡ ಎಲ್‌.ಸಿ.ನಾಗರಾಜು ಮಾತನಾಡಿ, ನಮ್ಮ ತಾಲೂಕಿನಲ್ಲಿ ಹಸಿದ ಹೊಟ್ಟೆ, ಜಾಲಿ ಮುಳ್ಳಿನ ಮರ ,ಬತ್ತಿದ ನೆಲ, ಬರಿದಾದ ನದಿಗಳೇ ಮಧುಗಿರಿಯ ಹೆಜ್ಜೆ ಗುರುತು. ಇವುಗಳನ್ನು ಹೋಗಾಲಾಡಿಸಲು ಸಚಿವ ಸೋಮಣ್ಣ ಮಧುಗಿರಿ ತಾಲೂಕಿಗೆ ಶಾಶ್ವತ ನೀರಾವರಿ, ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಠಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ: ಮನೆ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗೆ

ಮಾಜಿ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಸುರೇಶ್‌ಗೌಡ, ಎಂಎಲ್ಸಿ ಚಿದಾನಂದಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಭೀಮನಕುಂಟ ಹುನಮಂತೇಗೌಡ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜನಪ್ಪ, ಮಧುಗಿರಿ ಮಂಡಲದ ಬಿಜೆಪಿ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಡಾ .ಜಿ.ಕೆ.ಜಯಾಮ್‌, ಪುರವರ ಮೂರ್ತಿ, ಎಸ್‌.ಡಿ.ಕೃಷ್ಣಪ್ಪ, ಕೊಂಡವಾಡಿ ಚಂದ್ರಶೇಖರ್‌, ಹೆಬ್ಬಾಕ ರವಿ, ಬಿ.ಕೆ.ಮಂಜುನಾಥ್‌, ಅನಿಲ್‌ಕುಮಾರ್‌, ಲಕ್ಷ್ಮೀಪತಿ, ನಾಗರಾಜಪ್ಪ, ಪುರಸಭೆ ಸದಸ್ಯರಾದ ಎಂ.ಆರ್‌.ಜಗನ್ನಾಥ್‌ , ಕೆ.ನಾರಾಯಣ್‌, ಸಿಡದರಗಲ್ಲು ಶ್ರೀನಿವಾಸ್‌, ರುದ್ರೇಶ್‌, ಧೀಕ್ಷಿತ್‌, ಮಹೋನ್‌ರಾಜ್, ಜಿ.ಆರ್‌.ಧನ್‌ಪಾಲ್‌, ಸುರೇಶ್‌ಚಂದ್ರ, ಲತಾ ಸಿದ್ದಗಂಗಮ್ಮ ಹಾಜರಿದ್ದರು.

click me!