
ಪಾಂಡವಪುರ (ಜು.14): ತಮಿಳುನಾಡಿಗೆ ನೀರು ಬಿಡುಗಡೆ, ಹಂಚಿಕೆ ಸಂಬಂಧ ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥ ಪಡಿಸುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆಯುವ ಕೇಂದ್ರ ಸಚಿವ ಎಚ್ಡಿಕೆ ಅಭಿನಂದನೆ ಹಾಗೂ ಕೃತಜ್ಞತೆ ಸಮಾರಂಭದ ವೇದಿಕೆ ಸಿದ್ಧತೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆ ನೀರಿನ ವಿಚಾರವಾಗಿ ಜಿಲ್ಲೆಯ ರೈತರು, ಜನರಿಗೆ ತೊಂದರೆ ಆಗದ ರೀತಿ ಕುಮಾರಣ್ಣ ಸಮಸ್ಯೆ ನಿವಾರಿಸುವ ವಿಶ್ವಾಸವಿದೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯ ಕೃಷಿ ಭೂಮಿ ತೆಕ್ಕಲು ಬಿದ್ದು ಗೆದ್ದಲು ಹಿಡಿದಿದೆ. ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರು ಇಲ್ಲದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಹೇಗೆ?. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಒಂದು ವೇಳೆ ಸರ್ಕಾರ ನೀರು ಹರಿಸಲು ಮುಂದಾದರೆ ರೈತರೊಂದಿಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಅಭಿವೃದ್ಧಿ ಕಾರ್ಯದಲ್ಲಿ ಭ್ರಷ್ಟಾಚಾರ ಸಹಿಸಲ್ಲ: ಅಧಿಕಾರಿಗಳಿಗೆ ಶಾಸಕ ಬಸವರಾಜ ರಾಯರಡ್ಡಿ ಎಚ್ಚರಿಕೆ
ಸಚಿವ ಚಲುವರಾಯಸ್ವಾಮಿಗೆ ಟಾಂಗ್: ಕಾಂಗ್ರೆಸ್ ನಾಯಕರು ಇಷ್ಟು ದಿನಗಳ ಕಾಲ ಎಲ್ಲವೂ ನಮ್ಮದು ಎನ್ನುತ್ತಿದ್ದರು. ಈಗ ಕಾವೇರಿ ಸಮಸ್ಯೆಯನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಗಲಿಗೆ ಹಾಕಿ ಕದ್ದು ಓಡಾಡುತ್ತಿದ್ದಾರೆ. ಯಾರು ಕೂಡ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ಟಾಂಗ್ ನೀಡಿದರು. ಕೇಂದ್ರ ಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಜವಾಬ್ದಾರಿ ಅರಿತು ಕೆಲಸ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಅವರ ಕೆಲಸ ಮಾಡಲಿ ಎಂದು ಕಾವೇರಿ ಸಮಸ್ಯೆ ಎಚ್ಡಿಕೆ ಬಗೆಹರಿಸುತ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಅಹವಾಲು ಸ್ವೀಕರಿಸಿ ಕಸದ ಬುಟ್ಟಿಗೆ ಎಸೆದು ಹೋಗಿದ್ದರು. ಆದರೆ, ಎಚ್‌ಡಿಕೆ ಆ ರೀತಿಯ ನಾಯಕರಲ್ಲ. ಮೊನ್ನೆ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಜೆವರೆಗೂ ಜನರ ಸಮಸ್ಯೆ ಆಲಿಸಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ ಎಂದರು. ಸರ್ಕಾರ ಕೆಲ ಸಚಿವರ ಆಕ್ಷೇಪಣೆ ನಡುವೆಯೂ ಜುಲೈ 5ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡೆಸಿದ ಜನತಾದರ್ಶನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೋಗದಂತೆ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಿ ಆದೇಶ ಹೊರಡಿಸುತ್ತಾರೆ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ: ಮನೆ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗೆ
ಸ್ಟಾರ್ ಚಂದ್ರು ಜೊತೆ ಒಡಂಬಡಿಕೆ: ನಾಲೆಗೆ ನೀರು ಹರಿದು ಒಂದು ದಿನದ ಅಂತರದಲ್ಲೇ ಲೈನಿಂಗ್ ಕುಸಿದು ಬಿದ್ದಿದೆ. ಇನ್ನೊಂದು ತಿಂಗಳು ಕಾಲ ನೀರು ಹರಿದರೆ ಕಾಮಗಾರಿಯ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಕಾಯ್ದುಕೊಳ್ಳಲಾಗಿದೆ ಎಂಬುದು ಸಾಬೀತಾಗುತ್ತದೆ. ನಾಲಾ ಆಧುನೀಕರಣ ಕಾಮಗಾರಿಗಾಗಿ ಒಡಂಬಡಿಕೆ ಮಾಡಿಕೊಂಡು ಸ್ಟಾರ್ ಚಂದ್ರು ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿತ್ತು ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.