ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಶಕ್ತಿ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಭಾನುವಾರ ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಕೊಪ್ಪಳ (ಜೂ.12): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಶಕ್ತಿ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಭಾನುವಾರ ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ನಿಲ್ದಾಣದಿಂದ ಗವಿಮಠ, ಗವಿಮಠದಿಂದ -ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುವ ವಿಶೇಷ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಬಳಿಕ ಖುದ್ದು ತಾವೇ ಪ್ರಯಾಣ ಬೆಳೆಸಿದರು. ಈ ವೇಳೆಯಲ್ಲಿ ಕಂಡಕ್ಟರ್‌ನಂತೆ ಟಿಕೆಟ್ ನೀಡಿದರು.
ಸಡಗರ ಸಂಭ್ರಮ: ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಳಿರು-ತೋರಣಗಳಿಂದ ಶೃಂಗಾರಗೊಂಡಿದ್ದ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿ ಮಹಿಳೆಯರು ಸಂಭ್ರಮಿಸಿದರು. ಹೌದು! ನೂತನ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ ಸಿಗುವ ಸಂಭ್ರಮಕ್ಕೆ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದ ಆವರಣ ಸಾಕ್ಷಿಯಾಯಿತು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಉಮಾ ಪಾಟೀಲ, ಜ್ಯೋತಿ ಗೊಂಡಬಾಳ, ಕಿಶೋರಿ ಬೂದನೂರ, ಪದ್ಮಾವತಿ ಕಂಬಳಿ, ಮಂಜುಳಾ ಹಲಗೇರಿ, ರೇಖಾ ಬಿಜಾಪುರ, ಗೀತಾ, ಲತಾ ಚಿನ್ನೂರ, ಸೌಭಾಗ್ಯ ಗೊರವರ, ಅಂಬಿಕಾ ನಾಗರಾಳ, ರೂಪಾ ಬಂಗಾರಿ, ಕಾವೇರಿ ರಾಗಿ ಹಾಗೂ ಇನ್ನಿತರರು ಒಬ್ಬೊಬ್ಬರಾಗಿ ಸಾಲಾಗಿ ಶಕ್ತಿ ಯೋಜನೆಯ ಬಸ್ ಏರುತ್ತ ಸಂತಸ ವ್ಯಕ್ತಪಡಿಸಿದರು.
undefined
ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸಚಿವ ಪ್ರಯತ್ನ?: ಪೇಜಾವರ ಶ್ರೀ ಜತೆಗೂ ಚರ್ಚೆ
ಶಾಸಕ ರಾಘವೇಂದ್ರ ಹಿಟ್ನಾಳ ಇನ್ನಿತರ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸಚಿವರು ಸಹ ಬಸ್ ಏರಿ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಟಿಕೆಟ್ ವಿತರಿಸಿ ಗವಿಮಠದ ವರೆಗೆ ಪ್ರಯಾಣಿಸಿ ಗಮನ ಸೆಳೆದರು. ಬಳಿಕ ಮಹಿಳಾ ಕಾರ್ಯಕರ್ತರು ಮತ್ತು ಮಹಿಳಾ ಪ್ರಯಾಣಿಕರು ಗವಿಮಠದ ಆವರಣದಲ್ಲಿ ಸಚಿವರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.
ಮಾತಿನಂತೆ ನಡೆದಿದ್ದೇವೆ: ಇದಕ್ಕೂ ಮೊದಲು ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನಡೆದ ಶಕ್ತಿ ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಶಿವರಾಜ ತಂಗಡಗಿ, ಮಹಿಳೆಯರ ಯೋಜನೆಯನ್ನು ಮೊಟ್ಟಮೊದಲಿಗೆ ಜಾರಿ ಮಾಡಿ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸಮರ್ಥ ಮುಖ್ಯಮಂತ್ರಿಯಾಗಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ಸಚಿವ ಸಂಪುಟದಲ್ಲಿ ಐದಾರು ತಾಸುಗಳ ಸಮಯ ಚರ್ಚೆ ಆಗಿದೆ.
ತಾಯಂದಿರ ಮೂಲಕವೇ ವಿನೂತನ ಯೋಜನೆಗಳಿಗೆ ಚಾಲನೆ ಕೊಡುತ್ತಿದ್ದೇವೆ. ಮೊದಲ ಯೋಜನೆಗೆ ಶಕ್ತಿ ಎಂದು ಹೆಸರಿಟ್ಟಿರುವುದು ಇನ್ನು ಅರ್ಥಪೂರ್ಣವಾಗಿದೆ. ಚುನಾವಣಾ ಪೂರ್ವದಲ್ಲಿ ಮಾತು ಕೊಟ್ಟಂತೆ ನಾವು ನಡೆದುಕೊಂಡಿದ್ದೇವೆ. ಮಹಿಳೆಯರಿಗೆ ಶಕ್ತಿ ಕಾರ್ಡ್ ಕೊಡುವ ಪ್ರಕ್ರಿಯೆ ಬೇಗನೇ ಪೂರ್ಣಗೊಳಿಸುತ್ತೇವೆ. ಜು. 1ರಿಂದ ಅನ್ನಭಾಗ್ಯ ಜಾರಿ ಮಾಡುತ್ತೇವೆ ಎಂದು ತಿಳಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ಹಿಂದಿನಂತೆಯೇ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಈಗಲೂ ಹಲವಾರು ಕಾರ್ಯಕ್ರಮಗಳು ನೇರವಾಗಿ ಬಡವರ ಮನೆಗೆ ತಲುಪಲಿವೆ. ಎಲ್ಲ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಪುನಾರಂಭವಾಗಲಿವೆ. ಕೊಪ್ಪಳ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೆ ಬಸ್ ಓಡಿಸಲು, ಎಲ್ಲ ರಸ್ತೆ ಅಭಿವೃದ್ಧಿ ಪಡಿಸುವುದಕ್ಕೆ ಕ್ರಮ ವಹಿಸಲು ತಾವು ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಅಭಿಮಾನಿಗಳು ಹಚ್ಚಿದ ಪಟಾಕಿ ಸಿಡಿದು ಸಚಿವ ರಾಜಣ್ಣ ಕಣ್ಣಿಗೆ ಗಾಯ
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಜಿಪಂ ಸಿಇಒ ರಾಹುಲ್‌ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ, ಡಿಎಸ್ಪಿ ಶರಣಬಸಪ್ಪ ಸುಬೇದಾರ, ಕೆಕೆಆರ್‌ಟಿಸಿಯ ಕೊಪ್ಪಳ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ವೆಂಕಟೇಶ, ತಹಸೀಲ್ದಾರ್ ಅಮರೇಶ ಬಿರಾದಾರ ಇದ್ದರು. ಕೆಕೆಆರ್‌ಟಿಸಿ ಅಧಿಕಾರಿ ಸಂಜೀವಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಕೊಪ್ಪಳ ಬಸ್ ಘಟಕವು 1999ರಲ್ಲಿ ಆರಂಭವಾಗಿದೆ. ಒಟ್ಟು 443 ಬಸ್‌ಗಳು ಇವೆ. 65,600 ಮಹಿಳೆಯರು ನಿತ್ಯ ಪ್ರಯಾಣಿಸುತ್ತಾರೆ ಎಂದು ತಿಳಿಸಿದರು.