ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವೇ ರೂಪಿಸಿದ ರೂಪಾಯಿ ಚಿಹ್ನೆನ್ನು ತಿರಸ್ಕರಿಸಿರುವ ತಮಿಳುನಾಡಿನ ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಸ್ಟಾಲಿನ್, ತಮ್ಮ ವೈಫಲ್ಯವನ್ನು ಮಚ್ಚಿಡುವುದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಉಡುಪಿ (ಮಾ.16): ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವೇ ರೂಪಿಸಿದ ರೂಪಾಯಿ ಚಿಹ್ನೆನ್ನು ತಿರಸ್ಕರಿಸಿರುವ ತಮಿಳುನಾಡಿನ ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಸ್ಟಾಲಿನ್, ತಮ್ಮ ವೈಫಲ್ಯವನ್ನು ಮಚ್ಚಿಡುವುದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ, ರೂಪಾಯಿ ಚಿಹ್ನೆಯನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದದ್ದಲ್ಲ. ಕಾಂಗ್ರೆಸ್ ಸರ್ಕಾರ ಇರುವಾಗಲೇ ಜಾರಿಗೆ ತಂದದ್ದು, ಆಗ ತಮಿಳುನಾಡಿನ ಎ. ರಾಜ, ದಯಾನಿಧಿ ಮಾರನ್, ಎಲ್ಲರೂ ಸರ್ಕಾರದಲ್ಲಿದ್ದರು. ಚಿದಂಬರಂ ವಿತ್ತ ಸಚಿವರಾಗಿದ್ದರು. ಆಗ ವಿರೋಧಿಸಲಿಲ್ಲ, ಈಗ ಯಾಕೆ ವಿರೋಧಿಸುತಿದ್ದೀರಿ ಎಂದವರು ಪ್ರಶ್ನಿಸಿದರು.
ತಥಾಕಥಿತ ಇಂಡಿ ಘಟಬಂಧನ್ ನ ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷಗಳು ದೇಶದ ರಾಜಕೀಯವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ಕಾಂಗ್ರೆಸ್ ಸರ್ಕಾರವೇ ರಚಿಸಿದ ರೂಪಾಯಿ ಚಿಹ್ನೆಯ ಬಗ್ಗೆ ನಮ್ಮ ಅಭ್ಯಂತರ ಏನು ಇರಲಿಲ್ಲ, ಈ ಚಿಹ್ನೆಯನ್ನು ವಿನ್ಯಾಸ ಮಾಡಿದ್ದೇ ತಮಿಳುನಾಡಿನವರು, ಈಗ ತ್ರಿಭಾಷಾ ಸೂತ್ರವನ್ನು ವಿರೋಧಿಸುವುದಕ್ಕಾಗಿ ಈ ಚಿಹ್ನೆಯನ್ನು ತಿರಸ್ಕರಿಸುವ ಕ್ಷುಲ್ಲಕ ರಾಜಕಾರಣ ಮಾಡುತಿದ್ದಾರೆ ಎಂದವರು ಹೇಳಿದರು. ಡಿಎಂಕೆ ವಿರೋಧಿಸುತ್ತಿರುವ ತ್ರಿಬಾಷಾ ಸೂತ್ರ ಜಾರಿಗೆ ತಂದಿರುವುದು ಯಾರು? ದೇಶದಾದ್ಯಂತ ಹಿಂದಿ ಇರಬೇಕು ಎಂದು ನಾವು ಹೇಳಿದ್ದಲ್ಲ, ಅದು ನೆಹರು ಕಾಲದಿಂದಲೇ ಇದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅದೇ ತ್ರಿಭಾಷಾಸೂತ್ರ ಪಾಲಿಸಲು ಹೇಳಿದ್ದೇವೆ, ಆದರೆ ಡಿಎಂಕೆ ಸಿಎಂ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ತಮ್ಮ ವೈಫಲ್ಯತೆಯನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು. ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಸಂಸದ ಪಿ. ಸಿ. ಮೋಹನ್ ನಡುವೆ ನಡೆದ ಜಟಾಪಟಿಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಪ್ರದೀಪ್ ಈಶ್ವರ್ರಂತಹ ವ್ಯಕ್ತಿ ಮತ್ತು ಅವರು ಬಳಸಿದ ಅಪ ಶಬ್ದಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ, ಅದು ಸರ್ಕಾರದ ದುಡ್ಡಿನಲ್ಲಿ ಮಾಡುವ ಕಾರ್ಯಕ್ರಮ, ನಿಮ್ಮ ಅಪ್ಪಂದಲ್ಲ ಅನ್ನುವ ಈ ರೀತಿಯ ಭಾಷೆ ಶೋಭೆ ತರುವಂತದ್ದಲ್ಲ ಎಂದರು.
ಪರಮೇಶ್ವರ್ ಬಿಟ್ಟು ಉಳಿದ ಎಲ್ಲರೂ ಡಿಕೆಶಿ ಡಿನ್ನರ್ ಪಾರ್ಟಿಗೆ ಹೋಗಿದ್ವಿ: ಎಂ.ಬಿ.ಪಾಟೀಲ್
ಸಿದ್ಧರಾಮಯ್ಯ ಬುದ್ದಿ ಹೇಳಲಿ: ರಾಜಕಾರಣಿಗಳು ವ್ಯವಸ್ಥೆ ಮತ್ತು ಮಿತಿಯನ್ನು ಬಿಟ್ಟು ಮಾತನಾಡಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರದೀಪ್ ಈಶ್ವರ್ ಅವರು ಬಳಸಿದ ಅಪಶಬ್ದಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಅಪ್ಪನ ಸರ್ಕಾರವಾ ಎಂಬ ಕೆಟ್ಟ ಶಬ್ದ ಬಳಸುವುದು ಸರಿಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮಾತುಗಳು ಸೌಜನ್ಯ ಮತ್ತು ಗೌರವವನ್ನು ತಂದು ಕೊಡುವುದಿಲ್ಲ. ಪ್ರದೀಪ್ ಈಶ್ವರ್ ಅವರ ಈ ಶಬ್ದದ ಬಳಕೆ ನೋವಿನ ಸಂಗತಿ, ಸಿಎಂ ಸಿದ್ದರಾಮಯ್ಯ ಪ್ರದೀಪ್ ಈಶ್ವರ ಅವರನ್ನು ಕರೆದು ಬುದ್ಧಿ ಹೇಳುವ ಅವಶ್ಯಕತೆ ಇದೆ, ಇಲ್ಲದಿದ್ದರಲ್ಲಿ ಆತನ ಸ್ವೆಚ್ಛಾಚಾರತನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದವರು ಹೇಳಿದರು.