ಫೆ.10ರೊಳಗೆ ಕಾಂಗ್ರೆಸ್‌ ಮೊದಲ ಪಟ್ಟಿ ಪ್ರಕಟ?

By Kannadaprabha NewsFirst Published Jan 26, 2023, 4:15 AM IST
Highlights

ಬಹುತೇಕ ಹಾಲಿ ಶಾಸಕರು, 2-3 ದಳ ಶಾಸಕರಿಗೆ ಟಿಕೆಟ್‌, ಫೆ.2ಕ್ಕೆ ಸಭೆ, ಬಳಿಕ ಹೈಕಮಾಂಡ್‌ ಒಪ್ಪಿಗೆ ಪಡೆದು ಪಟ್ಟಿ ಟಿಕೆಟ್‌ ಸಾಧ್ಯತೆ. 

ಬೆಂಗಳೂರು(ಜ.26):  ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಬಹುತೇಕ ಫೆ.10ರ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಮೂರ್ನಾಲ್ಕು ಮಂದಿಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಹಾಲಿ ಶಾಸಕರು, ಜೆಡಿಎಸ್‌ನಿಂದ ಇನ್ನೂ ಕಾಂಗ್ರೆಸ್‌ ಸೇರದ 2-3 ಮಂದಿ ಶಾಸಕರು ಹಾಗೂ ಅತ್ಯಂತ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆ.10ರೊಳಗೆ ಪ್ರಕಟಿಸಲು ಕಾಂಗ್ರೆಸ್‌ ಕಸರತ್ತು ನಡೆಸಿದೆ.

ಈ ಹಿನ್ನೆಲೆಯಲ್ಲಿ ಫೆ.2ರಂದು ಪ್ರದೇಶ ಚುನಾವಣಾ ಸಮಿತಿಯ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ಸಮಿತಿಯ 30 ಸದಸ್ಯರು ಚರ್ಚಿಸಿ 100ಕ್ಕೂ ಹೆಚ್ಚು ಮಂದಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಆಖೈರುಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ ಫೆ.10ರೊಳಗೆ ಎಐಸಿಸಿ ಮೂಲಕವೇ ಪ್ರಕಟವಾಗುವಂತೆ ಮಾಡುವ ಉದ್ದೇಶವನ್ನು ರಾಜ್ಯ ನಾಯಕರು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ರಮೇಶ್‌ ಜಾರಕಿಹೊಳಿ ಜೆಡಿಎಸ್‌ಗೆ ಬೇಡ: ಎಚ್‌.ಡಿ.ಕುಮಾರಸ್ವಾಮಿ

ಮೂಲಗಳ ಪ್ರಕಾರ, ವಯಸ್ಸಾಗಿದೆ ಎಂಬ ಕಾರಣಕ್ಕಾಗಿ ಟಿಕೆಟ್‌ ಒಲ್ಲೆ ಎನ್ನುತ್ತಿರುವ ಪಾವಗಡದ ಹಾಲಿ ಶಾಸಕ ವೆಂಕಟರಮಣಪ್ಪ, ಅಫಜಲ್‌ಪುರದ ಎಂ.ವೈ.ಪಾಟೀಲ್‌ ಅವರು ತಮ್ಮ ಪುತ್ರರಿಗೆ ಟಿಕೆಟ್‌ ಕೇಳಿದ್ದಾರೆ. ಆದರೆ, ಎಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯರಾದರೂ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್‌ ದಾವಣಗೆರೆ ಉತ್ತರ ಕ್ಷೇತ್ರಗಳ ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದು, ಈ ಇಬ್ಬರ ಹೆಸರು ಪಟ್ಟಿಸೇರಲಿದೆ ಎನ್ನಲಾಗಿದೆ. ಇನ್ನು, ರಾಯಚೂರಿನ ಡಿ.ಎಸ್‌.ಹುಲಿಗೇರಿ ಅವರನ್ನು ಹೊರತುಪಡಿಸಿ ಉಳಿದ ಬಹುತೇಕ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್‌ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ, ಇನ್ನೂ ಕಾಂಗ್ರೆಸ್‌ ಪಕ್ಷ ಸೇರದಿರುವ ಜೆಡಿಎಸ್‌ನ ಶಾಸಕರಾದ ಗುಬ್ಬಿಯ ವಾಸು, ಅರಸೀಕೆರೆಯ ಶಿವಲಿಂಗೇಗೌಡ ಅವರ ಹೆಸರು ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಪಕ್ಷೇತರರಾದ ಶರತ್‌ ಬಚ್ಚೇಗೌಡ ಅವರಿಗೆ ಹೊಸಕೋಟೆ ಕ್ಷೇತ್ರದ ಟಿಕೆಟ್‌ ದೊರೆಯುವುದು ಖಚಿತ ಎನ್ನಲಾಗಿದೆ. ಮತ್ತೊಬ್ಬ ಪಕ್ಷೇತರ ನಾಗೇಶ್‌ ಅವರಿಗೂ ಪಕ್ಷದ ಟಿಕೆಟ್‌ ದೊರೆಯುವುದು ಖಚಿತವಾದರೂ ಕ್ಷೇತ್ರದ ಬಗ್ಗೆ ಗೊಂದಲ ಬಗೆಹರಿಯಬೇಕಿದೆ ಎಂದು ಮೂಲಗಳು ಹೇಳುತ್ತವೆ.

click me!