ಪ್ರತಿಪಕ್ಷಗಳು ಸುರಿಸುತ್ತಿರುವ ಟೀಕೆಗಳ ಮಳೆಯಿಂದಲೇ ಗ್ಯಾರಂಟಿಗಳಿಗೆ ಉತ್ತಮ ಪ್ರಚಾರ ದೊರೆಯುತ್ತಿದೆ. ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಯೋಜನೆ ಮುಂದುವರಿಸುವತ್ತ ಕಾಂಗ್ರೆಸ್ ಗಮನ ಹರಿಸಲಿದೆ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು
ದೇಶದ ಪ್ರತಿ ನಾಗರಿಕರ ಬದುಕಿನ ಮೇಲೆ ರಾಜಕೀಯ ಕ್ಷೇತ್ರ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತದೆ. ನಾವಿಲ್ಲಿ ಕೈಗೊಳ್ಳುವ ಒಂದೇ ಒಂದು ನಿರ್ಣಯ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುತ್ತದೆ. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹತ್ತಾರು ಬಾರಿ ಯೋಚಿಸಬೇಕು ಎಂಬುದನ್ನು ನನ್ನ ಈವರೆಗಿನ ರಾಜಕೀಯ ಅನುಭವದಲ್ಲಿ ಕಂಡುಕೊಂಡಿದ್ದೇನೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ, ದೇಶಾದ್ಯಂತ ವ್ಯಾಪಿಸಿಕೊಂಡಿರುವುದು ಜನಜೀವನ ಕೇಂದ್ರಿತ ದೃಷ್ಟಿಯಿಂದಲೇ ಹೊರತು, ಇದರ ಹಿಂದೆ ಬೇರಾವ ಕಾರಣವೂ ಇಲ್ಲ. ತೀರಾ ಬಡವನ ಬಗ್ಗೆ ಯೋಚಿಸಿ ಆತ ಅಥವಾ ಆಕೆಯನ್ನು ಬಡತನದಿಂದ ಹೇಗೆ ಮೇಲೆತ್ತಬಹುದೆಂದು ನಮ್ಮ ಪಕ್ಷ ಚಿಂತಿಸುತ್ತದೆ.
undefined
ಆ ಚಿಂತನೆಯಿಂದಲೇ ಹುಟ್ಟಿಕೊಂಡ ಯೋಜನೆಯಾದ ಗ್ಯಾರಂಟಿಗಳು ರಾಜಕಾರಣದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿವೆ. ಈ ಯೋಜನೆ ಸುಖಾಸುಮ್ಮನೆ ಚುನಾವಣೆ ಗೆಲ್ಲಲು ತಂದ ತಂತ್ರವಲ್ಲ. ಇದು ಹತ್ತಾರು ಬಾರಿ ಯೋಚಿಸಿ, ಅಳೆದು ತೂಗಿ ಜಾರಿ ಮಾಡಿದ ಯೋಜನೆ.ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ನಾಯಕರಾದ ರಾಹುಲ್ ಗಾಂಧಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಕರ್ನಾಟಕದ ಆರೂವರೆ ಕೋಟಿ ಜನರಿಗೆ ಕಾಂಗ್ರೆಸ್ ಏನು ವಾಗ್ದಾನ ನೀಡಿತ್ತೋ ಅದನ್ನು ಈಡೇರಿಸಿದ್ದೇವೆ.
ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದ ನಂತರ ಆರ್ಥಿಕ ನಷ್ಟ, ಆರ್ಥಿಕ ವ್ಯವಸ್ಥೆಯಲ್ಲಿ ಅಸಮತೋಲನ ಎಂದೆಲ್ಲ ಟೀಕೆಗಳು ಬಂತು. ಈ ಟೀಕೆಗಳು ಇನ್ನೂ ನಿಂತಿಲ್ಲ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 4,000 ರುಪಾಯಿ ನೀಡುವ ಈ ಯೋಜನೆ, ಆರ್ಥಿಕತೆಯನ್ನು ವಿಭಿನ್ನ ಆಯಾಮದಿಂದ ಸುಧಾರಿಸುತ್ತದೆ ಎನ್ನುವುದನ್ನು ಟೀಕಾಕಾರರು ಇನ್ನೂ ಅರಿತುಕೊಂಡಿಲ್ಲ. ಇವೇ ಪ್ರತಿಪಕ್ಷಗಳು ಅಧಿಕಾರದಲ್ಲಿದ್ದಾಗ ಯೋಜನೆ ತರುವುದು, ಅದಕ್ಕೆ ಅನುದಾನ ನಿಗದಿಪಡಿಸುವುದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಆ ಯೋಜನೆ ಯಶಸ್ವಿಯಾಗಿದೆಯೇ, ಅದು ಜನಜೀವನದ ಮೇಲೆ ಪರಿಣಾಮ ಬೀರಿದೆಯೇ ಎಂಬ ಅಧ್ಯಯನ ಕೂಡ ನಡೆದಿಲ್ಲ. ಆದರೆ ಗ್ಯಾರಂಟಿಗಳು ಹಾಗಲ್ಲ. ಗ್ಯಾರಂಟಿಗಳು ಯಾವ ಮಟ್ಟಿಗೆ ಯಶಸ್ವಿಯಾಗಿವೆ ಎಂದರೆ, ಬಡ ವೃದ್ಧೆಯೊಬ್ಬರು ಗ್ಯಾರಂಟಿಯ ಹಣದಲ್ಲಿ ಇಡೀ ಹಳ್ಳಿಗೆ ಊಟ ಹಾಕಿಸುತ್ತಾರೆ. ನೂರಾರು ಕನಸು ಕಟ್ಟಿಕೊಂಡ ಮಹಿಳೆ ಗ್ಯಾರಂಟಿಯ ಹಣದಲ್ಲಿ ಫ್ರಿಜ್ ಖರೀದಿಸುತ್ತಾರೆ. ಉಚಿತ ಪ್ರಯಾಣಕ್ಕಾಗಿ ಬಸ್ ಹತ್ತುವ ವೃದ್ಧೆ ಬಸ್ಸಿನ ಬಾಗಿಲಿಗೆ ನಮಸ್ಕಾರ ಮಾಡುತ್ತಾರೆ. ಈ ಎಲ್ಲ ಘಟನೆಗಳು ಗ್ಯಾರಂಟಿಗಳ ಯಶಸ್ಸಿನ ಗಾಥೆಯನ್ನು ಸಾರುತ್ತವೆ.
ಹರಿದುಬಂದ ಆದಾಯ!: ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎನ್ನುವವರು ಈ ಅಂಕಿ ಅಂಶ ನೋಡಬೇಕು. ರಾಜ್ಯ ಸರ್ಕಾರ ಆದಾಯ ಸಂಗ್ರಹದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಏಳು ತಿಂಗಳಲ್ಲಿ 1.03 ಲಕ್ಷ ಕೋಟಿ ರು. ಆದಾಯ ಸರ್ಕಾರದ ಖಜಾನೆಗೆ ಹರಿದುಬಂದಿದೆ. ಈ ಆರ್ಥಿಕ ವರ್ಷದ ನಿಗದಿತ ಗುರಿಯ ಶೇ.53 ರಷ್ಟು ಸಾಧನೆ ಈಗಲೇ ಪೂರ್ಣಗೊಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಸಾಧನೆಯ ಪ್ರಮಾಣ ಶೇ.11.2 ರಷ್ಟು ಅಧಿಕವಾಗಿದೆ. ಅಂದರೆ ಗ್ಯಾರಂಟಿಗಳು ಜಾರಿಯಲ್ಲಿದ್ದಾಗಲೂ ಸರ್ಕಾರದ ಆದಾಯ ಹೆಚ್ಚುತ್ತಲೇ ಇದೆ.
2024-25 ರ ಮೊದಲ ತ್ರೈಮಾಸಿಕದಲ್ಲಿ 2.2 ಶತಕೋಟಿ ರು. ಗೂ ಅಧಿಕ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಾಗಿದೆ. ಈ ವಿಷಯದಲ್ಲಿ ಕರ್ನಾಟಕ, ಗುಜರಾತ್ ರಾಜ್ಯವನ್ನೂ ಹಿಂದಿಕ್ಕಿದೆ. ಇಷ್ಟೆಲ್ಲ ಇದ್ದರೂ ‘ಖಜಾನೆ ಖಾಲಿʼ ಎನ್ನುವ ಟೊಳ್ಳು ಆರೋಪ ಮಾತ್ರ ಮುಂದುವರಿದಿದೆ. ಹೀಗೆ ಬರುವ ಆದಾಯದ ಲಾಭವನ್ನು ಕಾಂಗ್ರೆಸ್ ಸರ್ಕಾರ ನೇರವಾಗಿ ಜನರ ಕೈಗೆ ನೀಡುತ್ತಿರುವುದೇ ಈ ಆರೋಪಗಳಿಗೆ ಕಾರಣವಾಗಿರಬಹುದೇನೋ ಗೊತ್ತಿಲ್ಲ. ಅಂತೂ ನಮ್ಮ ಸರ್ಕಾರ ಜನರಿಗೆ ಆರ್ಥಿಕ ಶಕ್ತಿ ನೀಡುತ್ತಿರುವುದರಿಂದ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಇದು ಮುಖ್ಯವಾಗಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರ ಜೇಬು ತುಂಬುತ್ತಿದೆ.
ದೀರ್ಘಕಾಲದ ಯೋಜನೆ: ಗ್ಯಾರಂಟಿಗಳು ಬದುಕಿನ ಮೇಲೆ ಬೀರುವ ಸಕಾರಾತ್ಮಕ ಪರಿಣಾಮ ಜನರಿಗೆ ಅರಿವಾಗಿದೆ. ಇದನ್ನು ಮೆಚ್ಚಿಕೊಂಡಿರುವ ಜನರು 2028 ರಲ್ಲೂ ಕಾಂಗ್ರೆಸ್‌ಗೆ ಬಹುಮತ ನೀಡಿ ಗೆಲ್ಲಿಸುವುದು ಖಚಿತ. ಆದ್ದರಿಂದ ಗ್ಯಾರಂಟಿಗಳು ಕೇವಲ ಐದು ವರ್ಷವಲ್ಲ, ನಂತರದ ಹತ್ತು ವರ್ಷ ಕೂಡ ಮುಂದುವರಿಯಲಿವೆ. ಬಿಜೆಪಿ ಈ ಬಗ್ಗೆ ಆತಂಕಕ್ಕೀಡಾಗಿರುವುದರಿಂದಲೇ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಇದನ್ನು ನಕಲು ಮಾಡಲು ಯತ್ನಿಸಿತ್ತು. ಪ್ರತಿಪಕ್ಷಗಳ ಉದ್ದೇಶ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದೇ ಹೊರತು, ಆರ್ಥಿಕತೆಯ ಮೇಲಿನ ಪ್ರೀತಿಯಲ್ಲ. ಇನ್ನೂ ತಮಾಷೆಯ ಸಂಗತಿ ಎಂದರೆ, ಪ್ರತಿಪಕ್ಷಗಳು ಸುರಿಸುತ್ತಿರುವ ಟೀಕೆಗಳ ಮಳೆಯಿಂದಲೇ ಗ್ಯಾರಂಟಿಗಳಿಗೆ ಉತ್ತಮ ಪ್ರಚಾರ ದೊರೆಯುತ್ತಿದೆ. ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಯೋಜನೆ ಮುಂದುವರಿಸುವತ್ತ ಕಾಂಗ್ರೆಸ್ ಗಮನ ಕೇಂದ್ರೀಕರಿಸಲಿದೆ.
ಮಹಿಳೆಯರಿಗೆ ಶಕ್ತಿ: ರಾಜ್ಯ ರಾಜಕಾರಣದಲ್ಲಿ ಹಲವಾರು ವರ್ಷಗಳಿಂದ ಮಹಿಳಾ ಸಬಲೀಕರಣದ ಬಗ್ಗೆ ಮಾತು ಕೇಳಿಬರುತ್ತಿದೆ. ಆದರೆ ಇದನ್ನು ಯಥಾವತ್ತಾಗಿ ಅನುಷ್ಠಾನ ಮಾಡುವಷ್ಟು ಮನಸ್ಸನ್ನು ಯಾರೂ ಮಾಡಿಲ್ಲ. ಗ್ಯಾರಂಟಿಗಳು ಆ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಒಂದು ಕುಟುಂಬದ ಆಧಾರವಾದ ಮಹಿಳೆಗೆ ನೇರವಾಗಿ ಹಣ ನೀಡಿದರೆ ಆ ಇಡೀ ಕುಟುಂಬ ಪ್ರಗತಿಯತ್ತ ನಡೆಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ, ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಶಕ್ತಿ ಕಲ್ಪಿಸಿದೆ.
ಉಚಿತ ಬಸ್ ಪ್ರಯಾಣ ‘ಶಕ್ತಿʼ ಯೋಜನೆಯ ಲಾಭ ಮಹಿಳೆಯರಿಗೆ ಯಶಸ್ವಿಯಾಗಿ ಸಿಕ್ಕಿದೆ. ಕಾಂಗ್ರೆಸ್‌ನ ಮಹಿಳಾ ಕೇಂದ್ರಿತ ಅಭಿವೃದ್ಧಿಯನ್ನು ಮೆಚ್ಚಿದ ಮಹಿಳೆಯರು ಪಕ್ಷಕ್ಕೆ ಮತ ಹಾಕಿದ್ದಾರೆ. ಮುಂದೆಯೂ ಮಹಿಳೆಯರು ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಇದು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿಬಿಟ್ಟಿದೆ. ಆದ್ದರಿಂದ ಯೋಜನೆಗಳ ಸ್ಥಗಿತ ಎನ್ನುವ ಹೊಸ ಸುಳ್ಳನ್ನು ಹರಿಬಿಡಲಾಗಿದೆ.ಅಕ್ಟೋಬರ್ ಅಂತ್ಯದ ವೇಳೆಗೆ ಶಕ್ತಿ ಯೋಜನೆಯಡಿ 318.63 ಕೋಟಿ ಉಚಿತ ಟಿಕೆಟ್ ನೀಡಿದ್ದು, ಇದಕ್ಕಾಗಿ 7,691.13 ಕೋಟಿ ರು. ಖರ್ಚು ಮಾಡಲಾಗಿದೆ. ಯೋಜನೆಗೆ ಮೊದಲು 84 ಲಕ್ಷದಷ್ಟಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆ (ಮಹಿಳೆ-ಪುರುಷ ಸೇರಿ) ಯೋಜನೆ ಜಾರಿಯ ನಂತರ 1.08 ಕೋಟಿಗೆ ತಲುಪಿದೆ. ಈ ಪೈಕಿ ಶೇ.58 ರಷ್ಟು ಮಹಿಳಾ ಪ್ರಯಾಣಿಕರಾಗಿದ್ದಾರೆ.
ಈ ಯೋಜನೆಯನ್ನು ಮಹಿಳೆಯರು ಬಹಳ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಸೇರಿದಂತೆ ತಾವು ಇಷ್ಟ ಪಟ್ಟ ಯಾವುದೇ ಸ್ಥಳಗಳಿಗೆ ಉಚಿತವಾಗಿ ಪ್ರಯಾಣಿಸುವ ಮೂಲಕ ಪ್ರಯಾಣಕ್ಕಾಗಿ ಮಾಡುತ್ತಿದ್ದ ಖರ್ಚನ್ನು ಉಳಿಸುತ್ತಿದ್ದಾರೆ. ಹೀಗೆ ಉಳಿತಾಯವಾದ ಹಣ, ಕುಟುಂಬದ ಅಗತ್ಯಗಳಿಗೆ ಖರ್ಚಾಗಿ ಮರಳಿ ಆರ್ಥಿಕ ವ್ಯವಸ್ಥೆಯನ್ನು ಸೇರುತ್ತಿದೆ. ಇದು ಚಕ್ರದಂತೆ ನಿರಂತರ ಪ್ರಕ್ರಿಯೆಯಾಗಿದ್ದು, ಇದರಿಂದ ಆರ್ಥಿಕತೆ ಇನ್ನಷ್ಟು ಸಮೃದ್ಧವಾಗುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಯಾವುದೇ ಯೋಜನೆ ಸ್ಥಗಿತಗೊಳ್ಳಲು ನಮ್ಮ ಪಕ್ಷ ಹಾಗೂ ಸರ್ಕಾರ ಬಿಡುವುದಿಲ್ಲ. ಇನ್ನು ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್ ಒಳಗೆ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಘೋಷಿಸಿದ್ದೆವು.
ಅದರಂತೆ 1 ಕೋಟಿ 60 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಇದಕ್ಕೆ ಪ್ರತಿ ತಿಂಗಳು ಸುಮಾರು 800 ಕೋಟಿ ರುಪಾಯಿ ಆಗುತ್ತದೆ. ಇಲ್ಲಿಯವರೆಗೆ 10,000 ಕೋಟಿ ರುಪಾಯಿಯನ್ನು ಇದಕ್ಕಾಗಿ ವ್ಯಯಿಸಲಾಗಿದೆ. 4.5 ಕೋಟಿ ಕಾರ್ಡ್‌ಗಳಿಗೆ ತಲಾ 5 ಕೆಜಿ ಅಕ್ಕಿ, ತಲಾ 170 ರುಪಾಯಿಯಂತೆ ತಿಂಗಳಿಗೆ ಸುಮಾರು 700 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. 1 ಲಕ್ಷ 25 ಸಾವಿರ ಯುವನಿಧಿ ಫಲಾನುಭವಿಗಳಿಗೆ 3 ಸಾವಿರ ರು. ಮತ್ತು 1.5 ಸಾವಿರ ರು. ನಂತೆ ನಮ್ಮ ಸರ್ಕಾರ ನಿರಂತರವಾಗಿ ಹಣ ಕೊಡುತ್ತಿದೆ. ಇದನ್ನು ವಿರೋಧ ಪಕ್ಷದವರಿಗೆ ತಡಿಯಲು ಸಾಧ್ಯ ಇಲ್ಲ. ಚುನಾವಣೆಗೆ ಮುನ್ನ ಗ್ಯಾರಂಟಿಗಳನ್ನು ತರಲಾಗುವುದೆಂದು ಕಾಂಗ್ರೆಸ್ ನುಡಿದಿತ್ತು. ಅದನ್ನು ಗೆದ್ದ ಬಳಿಕ ನಡೆಸಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್
ಈ ‘ನುಡಿದಂತೆ ನಡೆಯುವʼ ಸಂಕಲ್ಪಕ್ಕೆ ಎಳ್ಳಷ್ಟೂ ಚ್ಯುತಿ ಬಾರದಂತೆ ನಮ್ಮ ಪಕ್ಷ ನಡೆದುಕೊಂಡಿದೆ. ಕಾಂಗ್ರೆಸ್‌ನ ಒಂದೇ ಒಂದು ಗ್ಯಾರಂಟಿ ಎಂದಿಗೂ ನಿಲ್ಲುವುದಿಲ್ಲ. ಇದು ಜನಜೀವನದಲ್ಲಿ ಸದಾ ಹರಿಯುವ ಪ್ರಗತಿ, ಇದು ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ. ಕಾಂಗ್ರೆಸ್ ಪಕ್ಷವು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿತು. ಉಳುವವವನೇ ಹೊಲದೊಡೆಯ ಜಾರಿ ಮಾಡಿ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳುವಂತೆ ಮಾಡಿತು. ಶೋಷಿತರ, ಧಮನಿತರ, ಕೈಲಾಗದವರ ಪರವಾಗಿ ಪ್ರತಿ ಬಾರಿ ಕೆಲಸ ಮಾಡಿದೆ. ಇದು ಚುನಾವಣೆಗಾಗಿ, ಮತಗಳಿಕೆಗಾಗಿ ಅಲ್ಲ. ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಂಥದ್ದೆ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ ಹಾಗೂ ಕಾಂಗ್ರೆಸ್ ಪಕ್ಷದ ತತ್ವ - ಸಿದ್ಧಾಂತವಾಗಿದೆ.