
ಕುಮಟಾ (ಅ.02): ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಹೊಸ ಹೊಸ ತೆರಿಗೆ ಹೇರುತ್ತಿದೆ. ತನ್ನ ಅಧಿಕಾರ ಉಳಿಸಿಕೊಳ್ಳಲು ಹಾಗೂ ಜನರ ನಡುವೆ ಬೆಂಕಿ ಹಚ್ಚಿ ಗಮನ ಬೇರೆಡೆ ಸೆಳೆಯಲು ಜಾತಿ ಸಮೀಕ್ಷೆ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು. ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿವೆ. ಸರ್ಕಾರ ಅನುದಾನ ಕೊಡುತ್ತಿಲ್ಲ. ತನ್ನ ಮೇಲಿನ ಆರೋಪ, ಹಗರಣಗಳನ್ನು ಚಾಪೆ ಕೆಳಗೆ ತಳ್ಳುವ ಪಯತ್ನ ನಡೆಸಿದೆ. ಜನತೆ ಎಲ್ಲವನ್ನೂ ಗಮನಿಸುತ್ತಿದೆ.
ಈ ಕ್ಷಣದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಮೂಲೆಗುಂಪಾಗಲಿದೆ. ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಅಕ್ಕಿಯಂತೂ ಕೊಟ್ಟಿಲ್ಲ. ಮೋದಿಯವರು ಕೊಡುತ್ತಿರುವ ಅಕ್ಕಿಯನ್ನೇ ತಮ್ಮದು ಎಂದು ಬಿಂಬಿಸುತ್ತಿದ್ದಾರೆ. ಹೊಸ ಯೋಜನೆಗಳಂತೂ ಇಲ್ಲವೇ ಇಲ್ಲ. ಜನರ ಅವಶ್ಯಕತೆಗಳಿಗೂ ಸ್ಪಂದಿಸುತ್ತಿಲ್ಲ ಎಂದರು. ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಶಾಸಕ ದಿನಕರ ಶೆಟ್ಟಿ ಬಹಳಷ್ಟು ಪ್ರಯತ್ನಪಟ್ಟು ಒಂದು ಹಂತಕ್ಕೆ ತಂದಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಮುಂದುವರಿಸಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ವಿರೋಧವೂ ಇದೆ.
ನೆರೆಹಾನಿ, ಮಳೆ ಹಾನಿ, ಬೆಳೆ ಹಾನಿ, ಭೂಕುಸಿತ ತಡೆಯುವ ಬಗ್ಗೆಯೂ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಂಕೋಲಾ ಬಂದರು ಯೋಜನೆಗೆ ಸಂಬಂಧಿಸಿ ಮೀನುಗಾರರು ಬೀದಿಗಿಳಿದರೂ ಇಲ್ಲಿನ ಉಸ್ತುವಾರಿ ಸಚಿವರು ಜನರ ಜತೆ ಅಹವಾಲು ಸಭೆಯನ್ನೂ ಮಾಡಿಲ್ಲ ಎಂದು ಹೇಳಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವುದು ದಿವಾಳಿ ಸರ್ಕಾರ. ಅಭಿವೃದ್ಧಿಗೆ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮೀನುಗಾರಿಕೆ ಸಚಿವರಿಗೇ ಅನುದಾನವಿಲ್ಲ. ಸಮುದ್ರ ಕೊರೆತ, ಕಾರ್ಲೆಂಡ ಮುಂತಾದವುಗಳ ಕ್ರಿಯಾಯೋಜನೆಯೂ ಇಲ್ಲ. ವಿರೋಧ ಪಕ್ಷದ ಶಾಸಕರಿಗೆ ₹25 ಕೋಟಿ ಅನುದಾನ ಎಂಬುದು ಕೇವಲ ಗಿಮಿಕ್ ಮಾತ್ರ.
ಜನ ನಮ್ಮನ್ನು ಕೇಳುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ₹1800 ಕೋಟಿ ಅನುದಾನ ತಂದಿದ್ದೆ. ಈಗಿನ ಸರ್ಕಾರ ಇರುವವರೆಗೂ ಏನೂ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನರಿಗೆ ಈ ಕಾಂಗ್ರೆಸ್ ಸರ್ಕಾರ ಹೋದ ಮೇಲೆಯೇ ನನ್ನ ಬಳಿ ಬನ್ನಿ ಎಂದು ಹೇಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಸರ್ಕಾರದ ಸಾಧನೆ ಶೂನ್ಯ ಎಂದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ವೆಂಕಟೇಶ ನಾಯಕ, ಡಾ. ಜಿ.ಜಿ. ಹೆಗಡೆ, ಎಂ.ಜಿ. ಭಟ್, ಪ್ರಶಾಂತ ನಾಯ್ಕ, ದೀಪಾ ಹಿಣಿ, ಪವನ ಶೆಟ್ಟಿ, ಗಣೇಶ ಪಂಡಿತ, ಮಂಜುನಾಥ ಪಟಗಾರ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.