ಸಿದ್ದರಾಮಯ್ಯ ಅವರನ್ನು ಅಲೆಮಾರಿ ಎಂದು ಟೀಕಿಸಿರುವ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ಅಲೆಮಾರಿ ಸಮುದಾಯವನ್ನು ನಿಂದಿಸಿದ್ದಾರೆಂದು ಒಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಹೇಳಿದರು.
ಶಿವಮೊಗ್ಗ (ಏ.7) : ಸಿದ್ದರಾಮಯ್ಯ ಅವರನ್ನು ಅಲೆಮಾರಿ ಎಂದು ಟೀಕಿಸಿರುವ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ಅಲೆಮಾರಿ ಸಮುದಾಯವನ್ನು ನಿಂದಿಸಿದ್ದಾರೆಂದು ಒಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ(Siddaramaiah) ಅವರನ್ನು ಟೀಕೆ ಮಾಡಿದರೆ ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುತ್ತಿದ್ದಾರೆ. 30 ವರ್ಷ ರಾಜಕಾರಣದಲ್ಲಿ ಸಕ್ರಿಯವಾಗಿದ್ದವರು ಅವರು. ಪಕ್ಷದ ರಾಜ್ಯಾಧ್ಯಕ್ಷ, ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಈಶ್ವರಪ್ಪ(KS Eshwarappa) ಅವರು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆಂದರೆ ಪಕ್ಷದಲ್ಲಿ ಅವರ ಪರಿಸ್ಥಿತಿ ಎಂಥದ್ದು ಎನ್ನುವುದು ಅರ್ಥವಾಗುತ್ತದೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅಲೆಮಾರಿ ಎಂಬ ಸತ್ಯ ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ : ಪರಮಾನಂದ
ಬಿ.ಎಸ್.ಯಡಿಯೂರಪ್ಪ(BS Yadiyurappa) ಅವರು ಪುತ್ರ ಬಿ.ವೈ.ರಾಘವೇಂದ್ರ(BY Raghavendra) ಅವರಿಗೆ ಸಂಸದ ಸ್ಥಾನಕ್ಕೆ ಟಿಕೆಟ್ ಕೊಡಿಸಿದ್ದಾಗ ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ ಎಂದು ತೀವ್ರ ವಿರೋಧ ಮಾಡಿದ್ದ ಈಶ್ವರಪ್ಪ ಅವರು ಈಗ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಹಾಗಾದರೆ, ಕೆ.ಇ.ಕಾಂತೇಶ್ ನಿಮ್ಮ ಕುಟುಂಬದವರು ಅಲ್ಲವಾ? ಪುತ್ರನಿಗೆ ಟಿಕೆಟ್ ನೀಡಿದರೆ ನಾನು ಹಿಂದೆ ಸರಿಯುತ್ತೇನೆ ಎನ್ನುವ ನಿಮ್ಮ ಉದ್ದೇಶ ಕುಟುಂಬ ರಾಜಕಾರಣ ಅಲ್ವಾ? ಎಂದು ಪ್ರಶ್ನಿಸಿದರು.
ಈಗ ಬಿಜೆಪಿ ಸೇರ್ಪಡೆ ಆಗಿರುವ ಡಾ.ಧನಂಜಯ ಸರ್ಜಿ ಅವರು ಪಕ್ಷ ಸೇರುವುದಕ್ಕೂ ಮುನ್ನ ‘ಶಿವಮೊಗ್ಗದಲ್ಲಿ ಶಾಂತಿ ನಡಿಗೆ’ ಎಂಬ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗದಂತೆ ಅಧಿಕಾರಿಗಳ ಮೂಲಕ ನೋಡಿಕೊಂಡ ಈಶ್ವರಪ್ಪ ಅವರ ಉದ್ದೇಶ ನಗರದಲ್ಲಿ ಶಾಂತಿ ಬೇಡ ಎನ್ನುವುದು ಆಗಿದೆ ಎಂದು ಟೀಕಿಸಿದರು.
ಆಯನೂರು ಬಗ್ಗೆ ಚರ್ಚಿಸಿಲ್ಲ:
ಆಯನೂರು ಮಂಜುನಾಥ್(Ayanuru Manjunath) ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜಿಲ್ಲಾ ಸಮಿತಿಯ ಜೊತೆ ಪಕ್ಷದ ರಾಜ್ಯ ನಾಯಕರು ಯಾವುದೇ ರೀತಿ ಚರ್ಚೆ ನಡೆಸಿಲ್ಲ. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಮುಖ್ಯ. ಆಯನೂರು ಮಂಜುನಾಥ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್‌ಗೆ ಬಂದರೂ ಸ್ವಾಗತಿಸುತ್ತೇವೆ. ಅಭ್ಯರ್ಥಿ ಘೋಷಣೆ ಹೈಕಮಾಂಡ್ ತೀರ್ಮಾನ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.
‘ಈಶ್ವರಪ್ಪ ಹೇಳಿಕೆಯಿಂದ ಅಲೆಮಾರಿಗಳಿಗೆ ಅಪಮಾನ’
ಬಿಜೆಪಿಯ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಲೆಮಾರಿಗಳಿಗೆ ಹೋಲಿಸುವ ಮೂಲಕ ಅಲೆಮಾರಿ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈಶ್ವರಪ್ಪ ಅವರಿಗೆ ಅವರ ಪಕ್ಷದಲ್ಲೇ ಟಿಕೆಟ್ ಸಿಗುವ ಖಾತ್ರಿ ಇಲ್ಲ. ಅವರ ಪಕ್ಷದಲ್ಲೆ ವಿರೋಧಿಗಳಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೇ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ: ಶ್ರೀರಾಮುಲು
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಮೂಲತಃ ವಲಸೆ ಬಂದವರೇ ಆಗಿದ್ದಾರೆ. ಇಂಥವರಿಗೆ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ. 40 ಪರ್ಸೆಂಟ್ ಈಶ್ವರಪ್ಪ ಅವರು ಮಂತ್ರಿಗಿರಿ ಕಳೆದುಕೊಂಡಿದ್ದು, ಮತ್ತೆ ಕೋರ್ಚ್ ವಿಚಾರಣೆ ದಿನ ನಿಗದಿ ಮಾಡಿದೆ. ಇದರಿಂದ ಈಗ ಮುನ್ನೆಲೆಗೆ ಬರಲು ಸಿದ್ದರಾಮಯ್ಯ ಅವರ ವಿಚಾರವನ್ನೆ ಮಾತನಾಡಬೇಕಾಗಿದೆ. ಅದಕ್ಕಾಗಿ ಪದೇ ಪದೇ ಸಿದ್ದರಾಮಯ್ಯವರ ಜಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.