ನನಗೆ ದೃಢವಾದ ವಿಶ್ವಾಸವಿದೆ. ಪ್ರಾಮಾಣಿಕ ಹಾಗೂ ನಿಷ್ಠಾವಂತರನ್ನು ಭಾರತೀಯ ಜನತಾ ಪಕ್ಷ ಕೈಬಿಡುವುದಿಲ್ಲ. ಪಕ್ಷದ ವರಿಷ್ಠರು ಕೂಡ ನನ್ನ ಕೈಬಿಡುವುದಿಲ್ಲ: ಲಕ್ಷ್ಮಣ ಸವದಿ
ಅಥಣಿ(ಏ.07): ಮುಂಬರುವ ವಿಧಾನಸಭಾ ಚುನಾವಣೆ ವಿಚಾರದಲ್ಲಿ ಅಥಣಿ ಮತಕ್ಷೇತ್ರದ ಟಿಕೆಟ್ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷದ ವರಿಷ್ಠರ ಜತೆಗೆ ನಾನು ಸಾಧಕ-ಬಾಧಕ ವಿಚಾರಗಳನ್ನು ಮಾತನಾಡಿದ್ದೇನೆ. ನನಗೇ ಸ್ಪರ್ಧಿಸಲು ಟಿಕೆಟ್ ನೀಡುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ನಡೆದ ಪಂಚಮಸಾಲಿ ಸಮುದಾಯದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅಥಣಿ ಮತಕ್ಷೇತ್ರದ ಟಿಕೆಟ್ ವಿಚಾರವಾಗಿ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಜಿಲ್ಲಾ ಕೋರ್ ಕಮಿಟಿ ಹಾಗೂ ರಾಜ್ಯ ಕೋರ್ ಕಮಿಟಿ ಸಭೆಗಳು ಮುಗಿದ ನಂತರ ದೆಹಲಿಗೆ ಅಂತಿಮವಾಗಿ 2 ಹೆಸರುಗಳನ್ನು ಕಳುಹಿಸಿಕೊಡಲಾಗಿದೆ. ನನಗೆ ದೃಢವಾದ ವಿಶ್ವಾಸವಿದೆ. ಪ್ರಾಮಾಣಿಕ ಹಾಗೂ ನಿಷ್ಠಾವಂತರನ್ನು ಭಾರತೀಯ ಜನತಾ ಪಕ್ಷ ಕೈಬಿಡುವುದಿಲ್ಲ. ಪಕ್ಷದ ವರಿಷ್ಠರು ಕೂಡ ನನ್ನ ಕೈಬಿಡುವುದಿಲ್ಲ. ಬರುವ 10ನೇ ತಾರೀಖಿನೊಳಗಾಗಿ ಸಂತಸದ ವಿಚಾರ ಬರಲಿದ್ದು, ನೀವೆಲ್ಲರೂ ನನ್ನೊಂದಿಗೆ ಇರಬೇಕು. ನಾನು ನಾಮಪತ್ರ ಸಲ್ಲಿಸುವ ದಿವಸ ತಾವೆಲ್ಲರೂ ಇಷ್ಟುದೊಡ್ಡ ಸಂಖ್ಯೆಯಲ್ಲಿ ಬರಬೇಕು. ಹಿಂದಿನ ಚುನಾವಣೆಗಳಲ್ಲಿ ಪಂಚಮಸಾಲಿ ಸಮುದಾಯ ಮಾಡಿದ ಋುಣ ನಾನು ಮರೆತಿಲ್ಲ. ನನ್ನ ಉಸಿರಿರುವವರಿಗೆ ಸಮಾಜದ ಋುಣ ತೀರಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಕೈ ಕೊಟ್ಟಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್ ಆಕಾಂಕ್ಷಿಗಳು, ಭುಗಿಲೆದ್ದ ಆಕ್ರೋಶ!
ಪಕ್ಷೇತರ ನಿಲ್ಲುವ ಪ್ರಮೇಯ ಬರುವುದಿಲ್ಲ:
ಅಥಣಿ ಮತಕ್ಷೇತ್ರದ ಟಿಕೆಟ್ ಮಹೇಶ ಕುಮಟಳ್ಳಿ ಅಥವಾ ಲಕ್ಷ್ಮಣ ಸವದಿಗಾ ಎಂಬ ಚರ್ಚೆಗಳು ಜೋರಾಗಿವೆ. ಬಹಳ ಜನರು ನನಗೆ ಟಿಕೆಟ್ ಸಿಗದಿದ್ದರೇ ಪಕ್ಷೇತರ ನಿಲ್ಲುವಂತೆ ತಿಳಿಸಿದ್ದಾರೆ. ಆದರೆ, ಆ ಸ್ಥಿತಿ ನನಗೆ ಬರುವುದಿಲ್ಲವೆಂಬ ನಂಬಿಕೆ ಇದೆ. 2004ರಲ್ಲಿ ಪಕ್ಷದ ಸದಸ್ಯನಾಗಿ ಸೇರ್ಪಡೆಯಾಗುವ ಮೂಲಕ ಇಪ್ಪತ್ತು ವರ್ಷಗಳ ಪಟ್ಟಿಯಲ್ಲಿ ನನ್ನ ಹೆಸರು ಗುರುತಿಸಿಕೊಳ್ಳಲು ನನಗೆ ಹೆಮ್ಮೆ ಇದೆ. ನನಗೆ ದೃಢವಾದ ವಿಶ್ವಾಸವಿದೆ. ಪ್ರಾಮಾಣಿಕ ಮತ್ತು ನಿಷ್ಠಾವಂತರನ್ನು ಭಾಜಪಾ ಕೈ ಬಿಡುವುದಿಲ್ಲ. ನನಗಿರುವ ವಿಧಾನ ಪರಿಷತ್ತು ಸದಸ್ಯತ್ವದ 5 ವರ್ಷ ಅವಧಿ ಮಹೇಶ ಕುಮಟಳ್ಳಿ ಅವರಿಗೆ ಕೊಡಿ ಮತ್ತು ಈ ಬಾರಿ ಟಿಕೆಟ್ ನನಗೆ ಕೊಟ್ಟರೇ ಗೆಲುವು ಸರಳವಾಗುತ್ತದೆಂಬ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಅಥಣಿ ಟಿಕೆಟ್ ಕಗ್ಗಂಟಾಗಿದೆ ಎಂದಾಗ ನಾನು ಹೇಳಿದೆ ಮಹೇಶ ಕುಮಠಳ್ಳಿ ಬಗ್ಗೆ ನನಗೆ ದ್ವೇಷವಿಲ್ಲ. ಒಂದು ವೇಳೆ ಅವರು ಸೋತರೆ ಅವರ ಸೋಲಿಗೆ ನಾನು ನೇರ ಕಾರಣೆನ್ನುವ ಕೆಲವು ಶಕ್ತಿಗಳು ಜಿಲ್ಲೆಯಲ್ಲಿವೆ. ಇದರಿಂದಾಗಿ ಪಕ್ಷ ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ. ನನಗೆ ಅಭ್ಯರ್ಥಿ ಮಾಡಿದರೇ ಜನರು ನನ್ನನ್ನು ಆಯ್ಕೆ ಮಾಡುತ್ತಾರೆಂದು ವರಿಷ್ಠರಿಗೆ ತಿಳಿಸಿದ್ದೇನೆ. ಪಕ್ಷದ ಸಿದ್ಧಾಂತ ನೋಡಿ ನಾನು ಪಕ್ಷಕ್ಕೆ ಬಂದಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಮ್ಮ ಮನದಾಳದ ವಿಚಾರಗಳನ್ನು ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದ ಪರವಾಗಿ ಧ್ವನಿಯೆತ್ತಿದ್ದು ನಾನೇ:
ಬೆಳಗಾವಿಯಲ್ಲಿ ಸುವರ್ಣ ಸೌಧ ಎದುರು ಕೂಡಲಸಂಗಮ ಶ್ರೀಗಳು ಪ್ರತಿಭಟನೆ ಕುಳಿತಾಗ ಅವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡಿಸಿ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ನಾನೊಂದು ಮಾತು ಹೇಳಿದ್ದೆ ಮಾಡುವ ಇಚ್ಛಾಶಕ್ತಿ ಇದ್ದರೇ ಎಲ್ಲವೂ ಸಾಧ್ಯ ಎಂದಿದ್ದೆ. ಯಾರೋ ಒಬ್ಬರು ಹೋಗಿ ಆಗ ಲಕ್ಷ್ಮಣ ಸವದಿ ವಿರೋಧಿಸಿದ ಎಂದು ಅಪಪ್ರಚಾರ ಮಾಡಿದರು. ಆಗ ಪಂಚಮಸಾಲಿ ಶ್ರೀಗಳು ನನ್ನ ಬಗ್ಗೆ ಅಸಮಾಧಾನಗೊಂಡರು. ನಾನು ಇವತ್ತು ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಪಂಚಮಸಾಲಿ ಸಮಾಜಕ್ಕೆ ವಿಶೇಷ ಸ್ಥಾನಮಾನ ಕೊಡಬೇಕು ಅಂತ ಹೇಳಿದವನೇ ನಾನು. ಕೊನೆಗೆ ಈಗ ಮಹಾರಾಷ್ಟ್ರ ಮಾದರಿಯಲ್ಲಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನಿಗದಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಚಿದಾನಂದ ಸವದಿ, ಹಿರಿಯ ಮುಖಂಡರಾದ ಶ್ರೀಶೈಲ ನಾರಗೊಂಡ, ಸಿದ್ದರಾಯ ಎಲಡಗಿ, ಗುರಪ್ಪ ದಾಶಾಳ, ಗಟವಾಳಪ್ಪ ಗುಡ್ಡಾಪುರ , ಗುರುಬಸು ತೇವರಮನಿ, ರಾಮನಗೌಡ ಪಾಟೀಲ, ಡಿ ಬಿ ತಕ್ಕಣ್ಣವರ, ಅಪ್ಪಾಸಾಬ ನೇಮಗೌಡ, ಮಹಾಂತೇಶ ಟಕ್ಕಣ್ಣವರ, ಪ್ರದೀಪ ನಂದಗಾವ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಪಂಚಮಸಾಲಿ ಸಮುದಾಯದ ಮುಖಂಡರು ಲಕ್ಷ್ಮಣ ಸವದಿ ಅವರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮಳ ಭಾವಚಿತ್ರ ನೀಡಿ ಸನ್ಮಾನಿಸಿದರು. ಈ ವೇಳೆ ದಿಲ್ಲಿಯಲ್ಲಿ ಮೋದಿ, ಅಥಣಿಯಲ್ಲಿ ಸವದಿ ಎಂಬ ಘೋಷಣೆ ಘೋಷಣೆಯನ್ನ ಕೂಗುವ ಮೂಲಕ ಲಕ್ಷ್ಮಣ ಸವದಿ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.
ನಟ ಸುದೀಪ್ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ: ಸತೀಶ್ ಜಾರಕಿಹೊಳಿ
ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಭಾರತೀಯ ಜನತಾ ಪಕ್ಷ ಒಂದು ಸಿದ್ಧಾಂತದ ಪಕ್ಷವಾಗಿದೆ. ಪಕ್ಷದ ವರಿಷ್ಠರ ಜತೆಗೆ ನಾನು ಸಾಧಕ-ಬಾದಕ ವಿಚಾರಗಳನ್ನು ಮಾತನಾಡಿದ್ದೇನೆ. ನನಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತಾರೆಂಬ ಆತ್ಮವಿಶ್ವಾಸವಿದೆ ಅಂತ ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.