ಸ್ಪೀಕರ್‌, ಯತ್ನಾಳ್‌ ವಿರುದ್ಧ ಗೌರ್ನರ್‌ಗೆ ಕಾಂಗ್ರೆಸ್‌ ದೂರು

By Kannadaprabha News  |  First Published Mar 5, 2020, 8:19 AM IST

ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ಪೀಕರ್ ಗೆ ಕಾಂಗ್ರೆಸ್ ದೂರು ನೀಡಿದೆ.  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಿರ್ದೇಶನ ನೀಡುವಂತೆ ರಾಜ್ಯಪಾಲ ವಿ.ಆರ್‌. ವಾಲಾ ಅವರಿಗೆ ಕಾಂಗ್ರೆಸ್‌ ಪಕ್ಷ ದೂರು ನೀಡಿದೆ. 


ವಿಧಾನಸಭೆ [ಮಾ.05]:  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್‌ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಿರ್ದೇಶನ ನೀಡುವಂತೆ ರಾಜ್ಯಪಾಲ ವಿ.ಆರ್‌. ವಾಲಾ ಅವರಿಗೆ ಕಾಂಗ್ರೆಸ್‌ ಪಕ್ಷ ದೂರು ನೀಡಿದೆ. ನಂತರ ವಿಧಾನಸಭೆಗೆ ತೆರಳಿದ ಕಾಂಗ್ರೆಸ್‌ ನಾಯಕರು, ಕಳೆದ ಎರಡು ದಿನಗಳಿಂದ ನಡೆಸಿದ್ದ ಧರಣಿಯನ್ನು ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಂಡರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಸೋಮವಾರ ಹಾಗೂ ಮಂಗಳವಾರ ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು. ಈ ಬಗ್ಗೆ ನೋಟಿಸ್‌ ನೀಡಿದರೂ ಚರ್ಚೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮತಿ ನೀಡದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯಪಾಲ ವಿ.ಆರ್‌. ವಾಲಾ ಅವರನ್ನು ನಿಯೋಗ ಭೇಟಿ ಮಾಡಿತು.

Tap to resize

Latest Videos

ಈ ವೇಳೆ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವ ಮೂಲಕ ಯತ್ನಾಳ್‌ ಸಂವಿಧಾನದ 51ಎ(ಬಿ) ನಿಯಮ ಉಲ್ಲಂಘನೆ ಮಾಡಿದ್ದಾರೆ. 103 ವರ್ಷಗಳ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ 1942ರಲ್ಲಿ ಸೆರೆವಾಸ ಅನುಭವಿಸಿದ್ದ ಗಾಂಧೀವಾದಿಗೆ ಪಾಕಿಸ್ತಾನದ ಏಜೆಂಟ್‌ ಹಾಗೂ ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಯತ್ನಾಳ್‌ ಹೇಳಿದ್ದಾರೆ. ಈ ಬಗ್ಗೆ ಚರ್ಚೆಗೆ ಸ್ಪೀಕರ್‌ ಅನುಮತಿ ನೀಡಿಲ್ಲ. ಅವರಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಈ ಭೇಟಿಯ ನಂತರ ವಿಧಾನಮಂಡಲಕ್ಕೆ ತೆರಳಿದ ಕಾಂಗ್ರೆಸ್‌ ಸದಸ್ಯರು ಯತ್ನಾಳ್‌ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಸದನದಲ್ಲಿ ಕಳೆದ ಎರಡು ದಿನದಿಂದ ಕೈಗೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಕಾಂಗ್ರೆಸ್‌-ಬಿಜೆಪಿ ಗದ್ದಲ:

ಬುಧವಾರ ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಯತ್ನಾಳ್‌ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಬಿಜೆಪಿ ಸದಸ್ಯರಾದ ಅರಗ ಜ್ಞಾನೇಂದ್ರ ಹಾಗೂ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸದಸ್ಯರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಸದನದ ಹೊರಗಡೆ ನಡೆದ ಘಟನೆ ಇಟ್ಟುಕೊಂಡು ಸ್ಪೀಕರ್‌ ವಿರುದ್ಧವೇ ದೂರು ನೀಡಲು ಹೋಗಿರುವ ಕಾಂಗ್ರೆಸ್‌ ಪಕ್ಷ ಕ್ಷಮೆ ಯಾಚಿಸಬೇಕು ಎಂದು ಒತ್ತಾಯ ಮಾಡಿದರು.

ಈ ವೇಳೆ ಕಾಂಗ್ರೆಸ್‌ನ ಎನ್‌.ಎಚ್‌. ಶಿವಶಂಕರರೆಡ್ಡಿ, ಕಳೆದ ಎರಡು ದಿನ ಅವಕಾಶ ಕೊಡುವುದಾಗಿ ಹೇಳಿ ಸ್ಪೀಕರ್‌ ನೀಡಿಲ್ಲ. ಮುಖ್ಯಮಂತ್ರಿಗಳೇ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೂ ನೀಡಿಲ್ಲ. ಹೀಗಾಗಿ ಪ್ರತಿಭಟಿಸಿದರೆ ನಾವು ಏಕೆ ಕ್ಷಮೆ ಕೋರಬೇಕು ಎಂದು ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗದ್ದಲದ ವೇಳೆ ಸದನ ಪ್ರವೇಶಿಸಿದ ಸಿದ್ದರಾಮಯ್ಯ, ಯತ್ನಾಳ್‌ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ. ಪ್ರತಿಭಟನೆ ಹಿಂಪಡೆದು ಸಂವಿಧಾನದ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.

click me!