ಚುನಾವಣೆ ಬಳಿಕವೇ ಕಾಂಗ್ರೆಸ್‌ ಸಿಎಂ ಆಯ್ಕೆ: ರಾಹುಲ್‌ ಗಾಂಧಿ

Published : Oct 09, 2022, 06:53 AM IST
ಚುನಾವಣೆ ಬಳಿಕವೇ ಕಾಂಗ್ರೆಸ್‌ ಸಿಎಂ ಆಯ್ಕೆ: ರಾಹುಲ್‌ ಗಾಂಧಿ

ಸಾರಾಂಶ

ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಉಂಟಾಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಚರ್ಚೆಗೆ ಪಕ್ಷದ ವರಿಷ್ಠ ನಾಯಕ ರಾಹುಲ್‌ ಗಾಂಧಿ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ.

ತುಮಕೂರು (ಅ.09): ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಉಂಟಾಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಚರ್ಚೆಗೆ ಪಕ್ಷದ ವರಿಷ್ಠ ನಾಯಕ ರಾಹುಲ್‌ ಗಾಂಧಿ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ ಎಂದು ಪ್ರತಿಪಾದಿಸಿರುವ ಅವರು, ಚುನಾವಣೆಯ ನಂತರವಷ್ಟೇ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಅವರ ಆಪ್ತ ವಲಯದ ಕೆಲ ನಾಯಕರು ಇತ್ತೀಚಿನ ದಿನಗಳಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೆ, ಪಕ್ಷದ ಕೆಲ ಸಭೆ-ಸಮಾರಂಭಗಳಲ್ಲಿ ಇದೇ ದನಿಯ ಕೂಗು ಎದ್ದಿತ್ತು. ಇದಕ್ಕೆ ಪ್ರತಿಯಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕು ಎಂದು ಅವರ ಆಪ್ತ ವಲಯದ ನಾಯಕರು ಹಾಗೂ ಬೆಂಬಲಿಗರು ದನಿಯೆತ್ತಿದ್ದರು. ಇದರಿಂದಾಗಿ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಚರ್ಚೆ ತೀವ್ರಗೊಂಡಿತ್ತಲ್ಲದೆ, ಪ್ರತಿಪಕ್ಷಗಳೂ ಇದನ್ನು ವ್ಯಂಗ್ಯವಾಡತೊಡಗಿದ್ದವು.

ಬಸವ ತತ್ವದಂತೆ ಭಾರತ್‌ ಜೋಡೋ ಯಾತ್ರೆ: ರಾಹುಲ್‌ ಗಾಂಧಿ

ರಾಹುಲ್‌ ಸ್ಪಷ್ಟ ನುಡಿ: ಭಾರತ್‌ ಜೋಡೋ ಯಾತ್ರೆ ನಿಮಿತ್ತ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಸ್ಪಷ್ಟಮಾತುಗಳಲ್ಲಿ ಉತ್ತರಿಸಿದರು. ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ನಾಯಕರಿದ್ದಾರೆ. ನಮ್ಮ ಪಕ್ಷಕ್ಕೆ ನಾಯಕರ ಕೊರತೆ ಇಲ್ಲ. ಅಲ್ಲದೆ, ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ. ಪಕ್ಷದಲ್ಲಿ ತನ್ನದೇ ಆದ ಆಂತರಿಕ ವ್ಯವಸ್ಥೆ ಇದೆ. ಆ ವ್ಯವಸ್ಥೆ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದ ಬಳಿಕ ಶಾಸಕರು, ಸ್ಥಳೀಯ ನಾಯಕರು ಚರ್ಚಿಸಿ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್‌ ಜೊತೆ ಮೈತ್ರಿ ಬಗ್ಗೆ ರಾಜ್ಯ ನಾಯಕರ ತೀರ್ಮಾನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಭಾರತ್‌ ಜೋಡೋ ಯಾತ್ರೆ ನಿಮಿತ್ತ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ಕರ್ನಾಟಕದಲ್ಲಿ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳಬೇಕೋ, ಬೇಡವೋ ಎಂಬುದರ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತಾರೆ. ನನ್ನ ಪ್ರಕಾರ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಕರ್ನಾಟಕದಲ್ಲಿ ಯಾರ ಸಹಾಯವೂ ಇಲ್ಲದೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಕೈಯಲ್ಲಿ ಅಪ್ಪು ಫೋಟೋ; 'ಭಾರತ್ ಜೋಡೋ ಯಾತ್ರೆ'ಯಲ್ಲಿ ಪುನೀತ್‌ಗೆ ನಮನ

ಅಧ್ಯಕ್ಷ ಚುನಾವಣೆಗೆ ಬಳ್ಳಾರಿಯಲ್ಲಿ ರಾಹುಲ್‌ ಮತದಾನ: ಅಕ್ಟೋಬರ್‌ 17ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ರಾಹುಲ್‌ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ನ ಇತರ 40 ನಾಯಕರು ಬಳ್ಳಾರಿಯಲ್ಲಿ ಸ್ಥಾಪಿಸಲಾಗುವ ಮತದಾನ ಕೇಂದ್ರದಲ್ಲಿ ಮತದಾನ ಮಾಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಅಂದು ಭಾರತ್‌ ಜೋಡೋ ಯಾತ್ರೆ ಇರುವುದಿಲ್ಲ. ಮತದಾನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅಂದು ಯಾತ್ರೆಗೆ ವಿಶ್ರಾಂತಿ ನೀಡಲಾಗುವುದು. ಅಲ್ಲದೆ, ಅಂದು ಬಳ್ಳಾರಿಯಲ್ಲಿ ಮತದಾನ ಕೇಂದ್ರ ತೆರೆಯಲಾಗುವುದು. ರಾಹುಲ್‌ ಗಾಂಧಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ 40 ಪದಾಧಿಕಾರಿಗಳು ಈ ಮತದಾನ ಕೇಂದ್ರದಲ್ಲಿಯೇ ಮತದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!