ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ: ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ, ಯಾರಾಗ್ತಾರೆ ಮುಖ್ಯಮಂತ್ರಿ?

By Girish GoudarFirst Published May 18, 2023, 7:32 AM IST
Highlights

ಬಹುತೇಕ ಸಿದ್ದರಾಮಯ್ಯ ಅವರೇ ನೂತನ ಮುಖ್ಯಮಮತ್ರಿಯಾಗಿ ಘೋಷಣೆ ಆಗುವ ಸಾಧ್ಯತೆ ಇದೆ. ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇಂದು ಸಂಜೆ ನಡೆಯಲಿರೋ ಶಾಸಕಾಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಯ್ಕೆ ಘೋಷಣೆ ಸಾಧ್ಯತೆ. 

ಬೆಂಗಳೂರು(ಮೇ.18):  ಇಂದು(ಗುರುವಾರ) ಸಂಜೆ ಏಳು ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಘೋಷಣೆಯಾಗಲಿದೆ 

ಸಿದ್ದರಾಮಯ್ಯ ಅವರೇ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇಂದು ಸಂಜೆ ನಡೆಯಲಿರೋ ಶಾಸಕಾಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಯ್ಕೆಯನ್ನ ಘೋಷಿಸಲಿದ್ದಾರೆ.

‘ಸಿದ್ದು ಸಿಎಂ’ ಎಂದ ಪುಷ್ಪಾ ಅಮರನಾಥ, ಅಶೋಕ ಪಟ್ಟಣ್‌: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸುರ್ಜೇವಾಲ!

ಮೇ.20 ರ ಶನಿವಾರದಂದು ನೂತನ ಸಿಎಂ ಪ್ರಮಾಣವಚನಕ್ಕೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಎಡಪಕ್ಷದ ನಾಯಕರುಗಳಿಗೂ ಆಹ್ವಾನ ನೀಡಲಾಗಿದೆ. 

ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ಪಶ್ಚಿಮಬಂಗಾಳ ಸಿಎಂ‌ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿ ಹಲವು ನಾಯಕರುಗಳಿಗೆ ಆಮಂತ್ರಣ ನೀಡುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. 

ಸಿದ್ದರಾಮಯ್ಯ ಸಿಎಂ ಆಗಿ ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ಸಿದ್ದು ಮನೆ ಮುಂದೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.  2ನೇ ಬಾರಿ ಸಿಎಂ ಪಟ್ಟ ಅಲಂಕರಿಸಲಿರುವ ಹಿನ್ನಲೆ ಸಿದ್ದರಾಮಯ್ಯಗೆ ಶುಭಕೋರಿ ಬ್ಯಾನರ್‌ಗಳು ರಾರಾಜಿಸುತ್ತಿವೆ.  ಕಾಂಗ್ರೆಸ್ ಹೈಕಮಾಂಡ್ ಇಂದು ಅಧಿಕೃತವಾಗಿ ಕರ್ನಾಟಕದ ನೂತನ ಸಿಎಂ ಘೋಷಣೆ ಮಾಡಲಿದೆ. ಸಿದ್ದು ಸಿಎಂ ಆಗಿ ಘೋಷಣೆ ಹಿನ್ನಲೆಯಲ್ಲಿ ಮನೆ ಬಳಿ ಸಾಕಷ್ಟು ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. 

ಡಿಸಿಎಂ ಡಿಕೆಶಿಗೆ ಸಿಕ್ಕಿದ್ದೇನು?

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಧ್ಯೆ ಎರಡೂವರೆ ಎರಡೂವರೆ ವರ್ಷ ಸಿಎಂ ಅಧಿಕಾರ ಹಂಚಿಕೆ ಮಾಡಲಾಗಿದೆ. ಡಿ.ಕೆ. ಶಿವಕುಮಾರ್‌ಗೆ ಡಿಸಿಎಂ ಪಟ್ಟ ನೀಡಲಾಗಿದೆ. ಇದರ ಜತೆಗೆ ಎರಡು ಪ್ರಬಲ ಖಾತೆಗಳನ್ನ ನೀಡುವ ಸಾಧ್ಯತೆ ಇದೆ. ಗೃಹ ಖಾತೆ, ಇಂಧನ ಅಥವಾ ಜಲಸಂಪನ್ಮೂಲ ಖಾತೆಗಳನ್ನ ನೀಡುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. ಇನ್ನು ಡಿ.ಕೆ. ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲೂ ಮುಂದುವರಿಯಲಿದ್ದಾರೆ ಅಂತ ಹೇಳಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರೂ (ಸಿಎಂ ಮತ್ತು ಡಿಸಿಎಂ) ಆಗಿ ಒಟ್ಟಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

ಇಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಇರುವ ಹಿನ್ನೆಲೆಯಲ್ಲಿ ಎಲ್ಲ ಕಾಂಗ್ರೆಸ್‌ ಶಾಸಕರು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾರೆ. ಸಂಜೆ 7 ಗಂಟೆಗೆ ಕ್ವೀನ್ಸ್‌ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಭಾಗಿಯಾಗಲು ಶಾಸಕರು ಪ್ರಯಾಣ ಬೆಳೆಸಿದ್ದಾರೆ. 

ಸಿದ್ದು ಸಿಎಂ ಆಗಿದ್ದಾಯ್ತು, ಜಮೀರ್‌ಗೆ ಡಿಸಿಎಂ ಕೊಡಿ: ಅಭಿಮಾನಿಯ ಆಗ್ರಹ

ಸಿದ್ದರಾಮಯ್ಯ ನಿವಾಸದ ಬಳಿ ಹೆಚ್ಚಿದ ಪೊಲೀಸ್ ಭದ್ರತೆ

ಸಿದ್ದರಾಮಯ್ಯ ಅವರು ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿರುವ ಸಿದ್ದು ನಿವಾಸದ ಬಳಿ  ಪೊಲೀಸ್ ಭದ್ರತೆಯನ್ನ ಹೆಚ್ಚಿಸಲಾಗಿದೆ. ಮನೆ ಮುಂದೆ ಬ್ಯಾರಿಕೇಡ್ ಎಳೆದು ಬಂದೋಬಸ್ತ್ ಕಲ್ಪಿಸಲಾಗಿದೆ. ಸದ್ಯ ಮನೆ ಮುಂದೆ ಕೆಎಸ್ಆರ್ಪಿ ತುಕಡಿ ಸೇರಿದಂತೆ ಪೊಲೀಸ್ ಭದ್ರತೆಯನ್ನ ಹೆಚ್ಚಳ ಮಾಡಲಾಗಿದೆ. 

ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಮನೆ ಬಳಿ ಕಾರ್ಯಕರ್ತರು ಜಮಾಯಿಸುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಪೈಪೋಟಿಗೆ ಬಿದ್ದವರಂತೆ ಸಿದ್ದರಾಮಯ್ಯ ನಿವಾಸದ ಬಳಿ ಕಾಂಗ್ರೆಸ್ ಮುಖಂಡರಿಂದ ಪ್ಲೆಕ್ಸ್ ,ಬ್ಯಾನರ್‌ಗಳನ್ನ ಅಳವಡಿಕೆ ಮಾಡುತ್ತಿದ್ದಾರೆ.  

click me!