ಮಹದೇವಪುರ ಕದನ: ಬಿಜೆಪಿ ಭದ್ರಕೋಟೆಯಲ್ಲಿ ಲಿಂಬಾವಳಿಗೆ ಕಾಂಗ್ರೆಸ್‌ ಸವಾಲು..!

Published : Apr 01, 2023, 12:56 PM IST
ಮಹದೇವಪುರ ಕದನ: ಬಿಜೆಪಿ ಭದ್ರಕೋಟೆಯಲ್ಲಿ ಲಿಂಬಾವಳಿಗೆ ಕಾಂಗ್ರೆಸ್‌ ಸವಾಲು..!

ಸಾರಾಂಶ

ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಹಾಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ನಾಗೇಶ್‌ ಅವರನ್ನು ಕಾಂಗ್ರೆಸ್‌ ಈ ಬಾರಿ ಮಹದೇವಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಿದೆ. ಜೆಡಿಎಸ್‌ ಅಭ್ಯರ್ಥಿ ಘೋಷಿಸುವುದು ಬಾಕಿ ಇದೆ. ಉಳಿದಂತೆ ಆಮ್‌ ಆದ್ಮಿ ಪಾರ್ಟಿ (ಆಪ್‌) ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

ಚಂದ್ರಮೌಳಿ ಎಂ.ಆರ್‌.

ಬೆಂಗಳೂರು(ಏ.01): ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಮಹದೇವಪುರ ಒಂದು. ಹತ್ತಾರು ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಇಲ್ಲಿವೆ. ಉದ್ಯೋಗಕ್ಕಾಗಿ ಬಂದಿರುವ ದೇಶದ ವಿವಿಧ ಮೂಲೆಗಳ ಜನರು ವಾಸಿಸುತ್ತಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳು, ಬೃಹತ್‌ ಶಾಪಿಂಗ್‌ ಮಾಲ್‌ಗಳನ್ನು ಒಳಗೊಂಡಿದೆ. ಈ ಪ್ರದೇಶದ ಸಮೀಪವೇ ಐಟಿಪಿಎಲ್‌ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಂಪನಿಗಳು ಇರುವ ವೈಟ್‌ಫೀಲ್ಡ್‌, ಮಾರತ್‌ಹಳ್ಳಿ ಸಹ ಇವೆ. ಒಂದು ರೀತಿ ಮಿನಿ ಭಾರತವನ್ನು ಮಹದೇವಪುರ ಪ್ರತಿನಿಧಿಸುತ್ತಿದೆ.

ಪರಿಶಿಷ್ಟಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಿಂದ ಬಿಜೆಪಿಯ ಹಿರಿಯ ಮುಖಂಡ ಅರವಿಂದ ಲಿಂಬಾವಳಿ 2008, 2014 ಹಾಗೂ 2018ರಲ್ಲಿ ನಡೆದ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಉನ್ನತ ಶಿಕ್ಷಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಲಿಂಬಾವಳಿ ಅವರು ಪುನಃ ಈ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

ವರುಣಾದಲ್ಲಿ ವಿಜಯೇಂದ್ರ ನಿಂತ್ರೂ ಗೆಲ್ಲೋದು ಸಿದ್ರಾಮಯ್ಯ ಎಂದ ಬಿವಿ ಶ್ರೀನಿವಾಸ್‌!

ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಹಾಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ನಾಗೇಶ್‌ ಅವರನ್ನು ಕಾಂಗ್ರೆಸ್‌ ಈ ಬಾರಿ ಮಹದೇವಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಿದೆ. ಜೆಡಿಎಸ್‌ ಅಭ್ಯರ್ಥಿ ಘೋಷಿಸುವುದು ಬಾಕಿ ಇದೆ. ಉಳಿದಂತೆ ಆಮ್‌ ಆದ್ಮಿ ಪಾರ್ಟಿ (ಆಪ್‌) ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

ನಾಯಕರ ರಕ್ಷೆಯ ಬಲ

2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ, ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದ ಎ.ಸಿ. ಶ್ರೀನಿವಾಸ್‌, ಕಳೆದ ಎರಡು ವರ್ಷಗಳಿಂದ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಈಗ ದೇವನಹಳ್ಳಿ ಕ್ಷೇತ್ರಕ್ಕೆ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಹೀಗಾಗಿ ಕಾಂಗ್ರೆಸ್‌ ಈ ಬಾರಿ ಹೊಸಬರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಎಚ್‌.ನಾಗೇಶ್‌ ಕ್ಷೇತ್ರಕ್ಕೆ ಹೊಸ ಮುಖ. ಅರವಿಂದ ಲಿಂಬಾವಳಿ ಅವರ ವಿರುದ್ಧ ಕಾಣಿಸಿಕೊಂಡಿರುವ ಅಸಮಾಧಾನ, ಕಾಂಗ್ರೆಸ್‌ ನಾಯಕರ ಶ್ರೀರಕ್ಷೆ ಮುಂದಿಟ್ಟುಕೊಂಡು ಜನರ ಮನ ಗೆಲ್ಲಬೇಕಾಗಿದೆ.

ಬಿಜೆಪಿ-ಕಾಂಗ್ರೆಸ್‌ ನಡುವೆ ಪೈಪೋಟಿ

ಕಳೆದ ಮೂರು ಚುನಾವಣೆಗಳ ಇತಿಹಾಸ ತಿರುವಿಹಾಕಿದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇರುವುದು ಕಂಡು ಬರುತ್ತದೆ. ಜೆಡಿಎಸ್‌ ಶಕ್ತಿ ತುಂಬಾ ಕಡಿಮೆ ಎನ್ನಬಹುದು.ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ ಬಲವಾಗಿದ್ದರೆ, ನಗರ ಪ್ರದೇಶದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಿದೆ.

ಜಾತಿ ಲೆಕ್ಕಾಚಾರ

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರ ಇದಾಗಿದ್ದು 5.72 ಲಕ್ಷ ಮತದಾರರಿದ್ದಾರೆ. ಈ ಪೈಕಿ 3,08,859 ಪುರುಷ ಮತದಾರರು, 2,63,560 ಮಹಿಳಾ ಮತದಾರರು ಇದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಒಂದು ಲಕ್ಷ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗದ ಮತದಾರರೇ ನಿರ್ಣಾಯಕರಾಗಿದ್ದು ಸುಮಾರು 2.25 ಲಕ್ಷ ಮತಗಳು ಇವರದ್ದೆ. ಹಿಂದುಳಿದ ವರ್ಗ 98 ಸಾವಿರ, ಒಕ್ಕಲಿಗರು 95 ಸಾವಿರ, ಮುಸ್ಲಿಮರು 45ರಿಂದ 50 ಸಾವಿರ ಹಾಗೂ ಇತರ ಸಮುದಾಯ ಸುಮಾರು 30 ಸಾವಿರ ಮತಗಳು ಇವೆ.

ಕ್ಷೇತ್ರದ ಹಿನ್ನೆಲೆ

ಕ್ಷೇತ್ರಗಳ ಪುನರ್‌ರಚನೆಯ ನಂತರ ಅಸ್ತಿತ್ವಕ್ಕೆ ಬಂದ ಮಹದೇವಪುರ ವಿಧಾನಸಭಾ ಕ್ಷೇತ್ರ 2008ರಿಂದಲೂ ಬಿಜೆಪಿ ಭದ್ರಕೋಟೆಯಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರ, ವಿಸ್ತೀರ್ಣದ ದೃಷ್ಟಿಯಿಂದಲೂ ದೊಡ್ಡದು. ಯಲಹಂಕಕ್ಕೆ ಹೊಂದಿಕೊಂಡ ಪ್ರದೇಶದಿಂದ ಆರಂಭಗೊಂಡು ಸರ್ಜಾಪುರ ರಸ್ತೆ ತನಕ ವಿಸ್ತರಿಸಿಕೊಂಡಿದೆ. ಹೂಡಿ, ಗರುಡಾಚಾರ್‌ಪಾಳ್ಯ, ಕಾಡುಗೋಡಿ, ವೈಟ್‌ಫೀಲ್ಡ್‌, ಹಗದೂರು, ದೊಡ್ಡನೆಕ್ಕುಂದಿ, ವರ್ತೂರು, ಮಾರತಹಳ್ಳಿ, ದೊಡ್ಡಕನ್ನಲಿ, ಬೆಳ್ಳಂದೂರು ಸುತ್ತಮುತ್ತಲ ಪ್ರದೇಶವನ್ನು ಈ ಕ್ಷೇತ್ರ ಒಳಗೊಂಡಿದೆ. ನಗರದ ಹೊರವಲಯದ 11 ಗ್ರಾಮಪಂಚಾಯಿತಿಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ಶಿರಸಿಯಲ್ಲಿ ಈವರೆಗೆ ಸೋಲನ್ನೇ ಕಾಣದ ಕಾಗೇರಿ ಗೆಲುವಿನ ಓಟ ಮುಂದುವರಿಸ್ತಾರಾ?

ಸತತವಾಗಿ ಮೂರು ಬಾರಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ಹಿಡಿದು ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇಷ್ಟಾದರೂ ಸಹ ಈ ಬಾರಿ ಗೆಲುವಿನ ಹಾದಿ ಸುಲಭವಾಗಿಲ್ಲ. ಹೊಸ ಮುಖ ನೋಡಬೇಕೆಂಬ ಅಭಿಪ್ರಾಯ ಕ್ಷೇತ್ರದಲ್ಲಿ ಬರುತ್ತಿದೆ. ಇದು ಲಿಂಬಾವಳಿ ಅವರಿಗೆ ಸವಾಲಾಗಿ ಪರಿಣಮಿಸಿದೆ. ಮೂರು ಚುನಾವಣೆಗಳ ಮತದಾನದ ಅಂಕಿ-ಅಂಶ ವಿಶ್ಲೇಷಿಸಿದಾಗ ಲಿಂಬಾವಳಿ ಅವರ ಗೆಲುವಿನ ಅಂತರ ದೊಡ್ಡ ಪ್ರಮಾಣದಲ್ಲಿ ಇಲ್ಲ. 2008ರ ಚುನಾವಣೆಯಲ್ಲಿ ಲಿಂಬಾವಳಿ 76,018 ಮತ ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಬಿ.ಶಿವಣ್ಣ 63,018 ಮತ, 2013ರ ಚುನಾವಣೆಯಲ್ಲಿ ಲಿಂಬಾವಳಿ 1,10,244 ಮತ, ಕಾಂಗ್ರೆಸ್ಸಿನ ಎ.ಸಿ.ಶ್ರೀನಿವಾಸ 1,04095 ಮತ, 2018ರಲ್ಲಿ ಲಿಂಬಾವಳಿ 1,41,682 ಮತ, ಕಾಂಗ್ರೆಸ್ಸಿನ ಎ.ಸಿ. ಶ್ರೀನಿವಾಸ 1,23,898 ಮತ ಪಡೆದಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್