ಪಿಎಸ್‌ಐ ಹಗರಣದ ರೂವಾರಿಗಳಾದ ದಿವ್ಯ ಹಾರಗಿ, ಸ್ಯಾಂಟ್ರೋ ರವಿ ಮತ್ತು ಎನ್.ಡಿ.ಪಾಟೀಲ್ ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿರುವುದಾಗಿ ಹೇಳಲಾಗುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ರಿಪ್ಪನ್‌ಪೇಟೆ (ಏ.17): ಪಿಎಸ್‌ಐ ಹಗರಣದ ರೂವಾರಿಗಳಾದ ದಿವ್ಯ ಹಾರಗಿ, ಸ್ಯಾಂಟ್ರೋ ರವಿ ಮತ್ತು ಎನ್.ಡಿ.ಪಾಟೀಲ್ ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿರುವುದಾಗಿ ಹೇಳಲಾಗುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಇಲ್ಲಿಗೆ ಸಮೀಪದ ಹುಂಚಾ ಹೋಬಳಿ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಜಡ್ಡು ತಳಲೆ ಕಗ್ಗಚ್ಚಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಈ ಮೂವರ ಆರಗ ಜ್ಞಾನೇಂದ್ರ ಪರ ಕ್ಯಾಂಪೇನ್ ನಡೆಸುತ್ತಿದ್ದಾರೆ. ಅವರ ಕೋಟ್ಯಂತರ ಹಣದಲ್ಲಿ ನಾನು ಖಾಲಿ ಜೇಬಿನವನು.
ನನಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಘನತೆ, ಗೌರವವನ್ನು ಕಾಪಾಡಲು ಮತ್ತು ಮತದಾನದ ಮೌಲ್ಯವನ್ನು ಹೆಚ್ಚಿಸಲು ನನಗೆ ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ನದಿ ವ್ಯಾಪ್ತಿ ಗ್ರಾಮಗಳು ಮುಳುಗಡೆಯಾಗಿ ಅಲ್ಲಿನ ರೈತರು ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅವರೆಲ್ಲ ಹೊಸನಗರ ತಾಲೂಕಿನಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ರಾಜ್ಯಕ್ಕೆ ಬೆಳಕು ನೀಡಿದ ಗ್ರಾಮಗಳ ಸಂತ್ರಸ್ತರು ‘ದೀಪದ ಬುಡದಲ್ಲಿ ಕತ್ತಲೆ’ ಎಂಬಂತೆ ಬದುಕುತ್ತಿದ್ದಾರೆ.
ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ: ಸಿದ್ದರಾಮಯ್ಯ
ಅವರ ಜೀವನೋಪಾಯಕ್ಕಾಗಿ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿರುವ ರೈತರಿಗೆ ಹಕ್ಕುಪತ್ರ ನೀಡುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಈ ಬಗ್ಗೆ ಸರ್ಕಾರದ ಗಮನಸೆಳೆಯುವ ಉದ್ದೇಶದಿಂದಾಗಿ ಪಾದಯಾತ್ರೆ ನಡೆಸಲಾಯಿತು. ಆಗ ಮುಖ್ಯಮಂತ್ರಿ ಬೊಮ್ಮಾಯಿ ಅವರು 15 ದಿನದೊಳಗೆ ನಿರಾಶ್ರಿತರಿಗೆ ಹಕ್ಕುಪತ್ರ ಕೊಡುವುದಾಗಿ ಭರವಸೆ ನೀಡಿದ್ದರು. ಡಬಲ್ ಎಂಜಿನ್ ಸರ್ಕಾರದವರಿಗೆ ಗ್ರಾಮೀಣ ರೈತರ ಬವಣೆ ತಿಳಿಯಲ್ಲಿಲ್ಲವೇ? ನಮ್ಮ ತಂದೆ ಬಂಗಾರಪ್ಪಜಿ ಅವರ ಆಭಿಮಾನಿ ದೇವರುಗಳು ನೀವು. ಅವರನ್ನು ಕಂಡಂತೆ ನಾನು ನಿಮ್ಮಗಳನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುವ ಪುಣ್ಯ ಬಂದಿದೆ ಎಂದು ಹೇಳಿದರು. ಈ ಸಂದರ್ಭ ಸಭೆಯಲ್ಲಿ ಜೈಕಾರದ ಕೂಗು ಮೊಳಗಿತು.
ಗ್ಯಾರಂಟಿ ಕಾರ್ಡ್ ಮತ್ತು ಉಚಿತ 200 ಯುನಿಟ್ ವಿದ್ಯುತ್ ಸೇರಿದಂತೆ ಬಿಪಿಎಲ್ ಪಡಿತರದಾರರಿಗೆ 10 ಕೆಜಿ ಅಕ್ಕಿ ಹೀಗೆ ಹಲವು ಜನಹಿತ ಕಾರ್ಯಕ್ರಮಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ಘೋಷಿಷಿದೆ. ಈ ಕುರಿತು ಮತದಾರರಲ್ಲಿ ಮನವರಿಕೆ ಮಾಡಬೇಕು. ಬಂಗಾರಪ್ಪಜಿ ಮತ್ತು ಕಾಗೋಡು ತಿಮ್ಮಪ್ಪ ಅವರ ಭಾವಚಿತ್ರ ಹಾಕಿಕೊಂಡು ಮತ ಕೇಳಿದರೆ ಪುಕ್ಕಟ್ಟೆಮತ ಬರುತ್ತದೆ ಎಂದು ಹೇಳಿ ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್‌ನಲ್ಲಿ ನನ್ನ ಮತ್ತು ಈ ಇಬ್ಬರ ಪೋಟೋ ಹಾಕಿಕೊಂಡು ಮನೆಮನೆಗೆ ತಲುಪಿರುವುದಾಗಿ ಹೇಳಿದರು.
ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ
ಇದೇ ಸಂದರ್ಭದಲ್ಲಿ ಮಧುಬಂಗಾರಪ್ಪನವರ ಸಮ್ಮುಖ ತಳಲೆಯ ಬೇಕರಿ ಸುರೇಶ್ ಮತ್ತು ಇನ್ನಿತರ ಯುವಕರ ತಂಡು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಪಿ.ರಾಮಚಂದ್ರ, ಶ್ವೇತಾ ಆರ್. ಬಂಡಿ, ಎಐಸಿಸಿ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ.ಚಂದ್ರುಮೌಳಿಗೌಡ, ತಳಲೆ ಗೌರಮ್ಮ, ಕಲ್ಲೂರು ವಾಸಪ್ಪಗೌಡ, ಅಮ್ಮಿರ್ ಹಂಜಾ ರಿಪ್ಪನ್‌ಪೇಟೆ, ಕಲ್ಲೂರು ತೇಜಮೂರ್ತಿ, ಕೆ.ಎಸ್.ಲೋಕಪ್ಪಗೌಡ, ಷಣ್ಮುಖಪ್ಪ, ವೀರಪ್ಪ, ಸಳ್ಳಿ ಸ್ವಾಮಿರಾವ್, ಮಳವಳ್ಳಿ ಮಂಜುನಾಥ, ಗುರು ಜಯನಗರ, ಧರ್ಮಪ್ಪ ಇನ್ನಿತರ ಮುಖಂಡರು ಹಾಜರಿದ್ದರು.