ಲಕ್ಷ್ಮಣ ಸವದಿ ತಾಳ್ಮೆಯಿಂದ ಇದ್ದಿದ್ದರೆ ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ಆದರೆ, ಲಕ್ಷ್ಮಣ ಸವದಿ ದುಡುಕಿ, ಉದ್ವೇಗಕ್ಕೆ ಒಳಗಾಗಿ ತಪ್ಪು ನಿರ್ಣಯ ಕೈಗೊಂಡಿದ್ದಾರೆ.
ವಿಜಯಪುರ (ಏ.17): ಲಕ್ಷ್ಮಣ ಸವದಿ ತಾಳ್ಮೆಯಿಂದ ಇದ್ದಿದ್ದರೆ ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ಆದರೆ, ಲಕ್ಷ್ಮಣ ಸವದಿ ದುಡುಕಿ, ಉದ್ವೇಗಕ್ಕೆ ಒಳಗಾಗಿ ತಪ್ಪು ನಿರ್ಣಯ ಕೈಗೊಂಡಿದ್ದಾರೆ. ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಮ್ಮ ಸಾಂಕೇತಿಕ ನಾಮಪತ್ರ ಸಲ್ಲಿಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಅವರಿಗೂ ಬಿಜೆಪಿಯಲ್ಲಿ ಅವಮಾನ ಆಗಿದೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಂಡಿರುತ್ತಾರೆ.
ರಾಜಕಾರಣದಲ್ಲಿ ನನಗೂ ಸಾಕಷ್ಟು ಅವಮಾನವಾಗಿದೆ. ನಾನೂ ಮಂತ್ರಿಯಾಗಲು, ಡಿಸಿಎಂ ಆಗಲು ಅರ್ಹನಾಗಿದ್ದೆ. ಆದರೆ, ಯಾವುದೋ ಕಾರಣಕ್ಕೆ ನನಗೆ ಕೊಡಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಪಕ್ಷ ಬಿಟ್ಟು ಹೋಗಿಲ್ಲ ಎಂದರು. ಪಕ್ಷಕ್ಕೆ ಅವಶ್ಯಕತೆ ಇದ್ದಾಗ ಅವರು ನಮಗೆ ಯಾವ ಸ್ಥಾನಮಾನ ನೀಡಬೇಕೋ ಅದನ್ನು ನೀಡಿಯೇ ನೀಡುತ್ತಾರೆ. ನಾನು ಪಕ್ಷದ ಕುರಿತು ಎಂದಿಗೂ ಹಗುರವಾಗಿ ಮಾತನಾಡಿಲ್ಲ, ನನ್ನದೇನಿದ್ದರೂ ವ್ಯಕ್ತಿಗತ ಜಗಳವಿತ್ತು. ಜೆಡಿಎಸ್‌ನಲ್ಲಿ ಇದ್ದಾಗಲೂ ಇತ್ತೂ. ಈಗಲೂ ಇದೆ ಎಂದರು. ಸವದಿ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಪಕ್ಷ ಸವದಿಯವರನ್ನು ಉಳಿಸಿಕೊಳ್ಳಲು ಸಾಕಷ್ಟುಪ್ರಯತ್ನ ಮಾಡಿದೆ.
ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದೆ: ಎಚ್.ಡಿ.ಕುಮಾರಸ್ವಾಮಿ
ಪಕ್ಷದಿಂದ ಅಮಿತ್ ಶಾ, ಬಿ.ಎಲ್.ಸಂತೋಷ ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ ಎಂದರು. ಈಶ್ವರಪ್ಪ ರಾಜಕೀಯ ನಿವೃತ್ತಿ ವಿಚಾರ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎನ್ನುವ ಸಂದೇಶವನ್ನು ಈಶ್ವರಪ್ಪ ನೀಡಿದ್ದಾರೆ. ಎಲ್ಲ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು ಎಂದರು. ದೇಶಕ್ಕೆ ಮೋದಿಯಂಥ ನಾಯಕ ಬೇಕಿದೆ. ಮೋದಿ ದೇಶದ ಹಿತದೃಷ್ಟಿಯಿಂದ ಕೆಲ ಸಮರ್ಪಕ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ಜನರು ರಾಹುಲ್ ಗಾಂಧಿಯಂಥ ಅರೆಹುಚ್ಚನನ್ನು ಎಂದಿಗೂ ಪ್ರಧಾನಿ ಮಾಡುವುದಿಲ್ಲ ಎಂದರು.
ಅಭಿವೃದ್ಧಿ ಜೊತೆ ನೆಮ್ಮದಿಯ ಆಡಳಿತ ನೀಡಿರುವೆ: ನಗರದಲ್ಲಿ ನಿರೀಕ್ಷೆಗೂ ಮೀರಿ ಆದ ಅಭಿವೃದ್ಧಿ, ಸುರಕ್ಷತೆಯಿಂದ ಜನ ಈ ಬಾರಿ ಮತ ಹಾಕಲು ಉತ್ಸಾಹ ಹೊಂದಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಕೆಎಚ್‌ಬಿ ಕಾಲೊನಿಯ ಯೋಗ ಗಾರ್ಡನ್‌ನಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡಿದ ಅವರು, ಕಳೆದ 25 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯವನ್ನು ನಾನು ಮಾಡಿದ್ದೇನೆ. ಕೊರೋನಾದಿಂದ ಎರಡು ವರ್ಷ ಅಭಿವೃದ್ಧಿ ಕುಂಠಿತಗೊಂಡರೂ ಉಳಿದ ಕೇವಲ ಮೂರು ವರ್ಷಗಳಲ್ಲಿ ವಿಜಯಪುರ ಮಾದರಿ ನಗರವಾಗಿ ಅಭಿವೃದ್ಧಿ ಮಾಡಿರುವ ತೃಪ್ತಿ ಇದೆ ಎಂದರು.
ಅಭಿವೃದ್ಧಿ ಜೊತೆ ದೌರ್ಜನ್ಯ, ಗೂಂಡಾಗಿರಿ ನಿಲ್ಲಿಸಿ, ಹಿಂದೂ ಬಾಂಧವರು ನೆಮ್ಮದಿಯಿಂದ ಬದುಕುವಂತೆ ಮಾಡಿರುವೆ. ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅವಮಾನ ತಪ್ಪಿಸಲು 35 ಕಡೆ ಮಾರುಕಟ್ಟೆ ಮಾಡಿರುವೆ ಎಂದರು. ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಕ್ಕೆ ಮತ್ತೆ ಹೆಚ್ಚುವರಿ .250 ಕೋಟಿ ಅನುದಾನ ಬಿಡುಗಡೆ ಮಾಡಿದ್ದರಿಂದ ಅತ್ಯುನ್ನತ ವಿಮಾನ ನಿಲ್ದಾಣ ಆಗಲು ಸಾಧ್ಯವಾಯಿತು. ವೈನ್‌ಪಾರ್ಕ್, ಟೆಕ್ಸಟೈಲ್ ಪಾರ್ಕ್, ಜಿಟಿಟಿಸಿ ಕಾಲೇಜು ಮಂಜೂರು ಮಾಡಲಾಗಿದೆ. ಔದ್ಯೋಗಿಕ ನಗರವನ್ನೂ ಶೀಘ್ರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮಾದಪ್ಪ ನನ್ನ ಕಳುಹಿಸಿದ್ದಾನೆ, ಬರಿಗೈಲಿ ಕಳುಹಿಸಬೇಡಿ: ಸಚಿವ ಸೋಮಣ್ಣ
ಉತ್ತಮ ಜನಪ್ರತಿನಿಧಿಗಳು ಆಯ್ಕೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಆಡಳಿತ ನಡೆಸುತ್ತಿರುವುದರಿಂದ, ಅಭಿವೃದ್ಧಿ ಜೊತೆಗೆ ಸುರಕ್ಷಿತವಾಗಿದ್ದೇವೆ. ಆರ್ಥಿಕತೆಯಲ್ಲಿ ಇಂಗ್ಲೆಂಡ್‌ನಂಥ ರಾಷ್ಟ್ರವನ್ನು ಹಿಂದಿಕ್ಕಿ, ಭಾರತ ವಿಶ್ವದ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಅದೇ ರೀತಿಯ ಆಡಳಿತ ವಿಜಯಪುರದಲ್ಲಿ ಕಲ್ಪಿಸಿರುವೆ. ದೇಶದಲ್ಲಿ ಉತ್ತರಪ್ರದೇಶ ಬಿಟ್ಟರೆ, ಕರ್ನಾಟಕದ ವಿಜಯಪುರದಲ್ಲಿ ಮಾತ್ರ ಬೋಲ್ಡೋಜರ್ ಘರ್ಜನೆ ಕೇಳುತ್ತದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.