ವಿಕಾಸಸೌಧ ಉದ್ಘಾಟನೆಗೆ ಕಾಂಗ್ರೆಸ್‌ ರಾಷ್ಟ್ರಪತಿಗಳನ್ನು ಕರೆಸಿತ್ತಾ?: ಎಚ್‌ಡಿಕೆ

By Kannadaprabha News  |  First Published May 27, 2023, 8:38 AM IST

ಸಂಸತ್‌ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದ್ದು, ತನ್ನ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. 


ಬೆಂಗಳೂರು (ಮೇ.27): ಸಂಸತ್‌ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದ್ದು, ತನ್ನ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಶುಕ್ರವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅದೇ ಆದಿವಾಸಿ ಮಹಿಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿದ್ದಾಗ ಕಾಂಗ್ರೆಸ್‌ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿದ್ದು ಯಾಕೆ ಎಂದು ಕಟುವಾಗಿ ಪ್ರಶ್ನಿಸಿದರು. 

ಕಾಂಗ್ರೆಸ್‌ ಪಕ್ಷ ಛತ್ತೀಸ್‌ಗಢದಲ್ಲಿ ವಿಧಾನಸಭಾ ಕಟ್ಟಡದ ಉದ್ಘಾಟನೆ ಮಾಡಲು ಸೋನಿಯಾಗಾಂಧಿ ಅವರನ್ನು ಕರೆಸಿತ್ತು. ಅಲ್ಲಿ ರಾಷ್ಟ್ರಪತಿ ನೆನಪಿಗೆ ಬರಲಿಲ್ಲವೇ? ಕರ್ನಾಟಕದಲ್ಲಿ ವಿಕಾಸಸೌಧ ಉದ್ಘಾಟನೆ ಮಾಡಲು ರಾಷ್ಟ್ರಪತಿಗಳನ್ನು ಕಾಂಗ್ರೆಸ್‌ ನಾಯಕರು ಕರೆದಿದ್ದರಾ? ಎಂದು ಟೀಕಾಪ್ರಹಾರ ನಡೆಸಿದರು. ಸಂಸತ್‌ ಭವನ ಉದ್ಘಾಟನೆಗೆ 21 ಪಕ್ಷಗಳು ಬಹಿಷ್ಕಾರ ಹಾಕಿವೆ. ಅದು ಆಯಾ ಪಕ್ಷದ ನಿಲುವು. ಸಂಸತ್‌ ಭವನ ಯಾವುದೋ ಪಕ್ಷದ ಸಂಘಟನೆಗೆ ಸೀಮಿತವಾದ ಭವನ ಅಲ್ಲ. ದೇಶದ ಜನರ ತೆರಿಗೆ ಹಣದಿಂದ ಕಟ್ಟಿರುವ ಭವನ ಅದು. 

Tap to resize

Latest Videos

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರು ಪತ್ನಿ ಕೆಲಸದಿಂದ ವಜಾ!

ರಾಷ್ಟ್ರಪತಿಗಳಿಂದ ಉದ್ಘಾಟನೆಯಾಗಬೇಕಿತ್ತು ಎನ್ನುವ ವಿಚಾರ ತೆಗೆದು ಕಾಂಗ್ರೆಸ್‌ ಬಹಿಷ್ಕಾರ ಮಾಡಲು ಮುಂದಾಗಿದೆ. ಇದೇ ಕರ್ನಾಟಕದಲ್ಲಿ ವಿಕಾಸಸೌಧ ಉದ್ಘಾಟನೆ ಮಾಡಲು ರಾಷ್ಟ್ರಪತಿಗಳನ್ನು ಕಾಂಗ್ರೆಸ್‌ ನಾಯಕರು ಕರೆದಿದ್ದರಾ? ಅಂದು ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರೇ ವಿಕಾಸಸೌಧದವನ್ನು ಉದ್ಘಾಟನೆ ಮಾಡಲಿಲ್ಲವೇ? ಈಗ ನೋಡಿದರೆ ಆದಿವಾಸಿ ಮಹಿಳೆಯನ್ನು ಕಡೆಗಣಿಸಿದ್ದಾರೆ ಎಂದು ನಾಟಕ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಆಹ್ವಾನ ಕಳುಹಿಸಿದ್ದಾರೆ. ಹೀಗಾಗಿ ದೇವೇಗೌಡರು ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಇದರಿಂದ ಬಿಜೆಪಿ ಬಗ್ಗೆ ಜೆಡಿಎಸ್‌ ಮೃದುಧೋರಣೆ ಎಂದು ತಿಳಿಯುವ ಅಗತ್ಯ ಇಲ್ಲ ಎಂದರು.

ಸೋಲು ಮೆಟ್ಟಿನಿಂತು ಪುಟಿದೇಳಲು ಜೆಡಿಎಸ್‌ ಸಂಕಲ್ಪ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಲ್ಲಿ ಪಡೆದ ಫಲಿತಾಂಶ, ಪಕ್ಷವನ್ನು ಸಂಘಟಿಸುವುದು, ಸಂಸತ್‌ ಭವನದ ಉದ್ಘಾಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ವಿಸ್ತೃತವಾಗಿ ಸಮಾಲೋಚನೆ ನಡೆಸಿತು. ಅರಮನೆ ಮೈದಾನದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಕೇರಳ ಅಧ್ಯಕ್ಷ ಮ್ಯಾಥ್ಯೂ ಥಾಮಸ್‌, ಸಚಿವ ಕೃಷ್ಣನ್‌ ಕುಟ್ಟಿಸೇರಿದಂತೆ ತೆಲಂಗಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತಿತ್ತರ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವು ಹೀನಾಯವಾಗಿ ಸೋಲನುಭವಿಸಿದ್ದು, ಮತ್ತೊಮ್ಮೆ ಪಕ್ಷ ಸಂಘಟಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ತಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಿ ಮುಂಬರುವ ಚುನಾವಣೆಗಳನ್ನು ಸಂಘಟಿತವಾಗಿ ಎದುರಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೇ, ನೂತನವಾಗಿ ನಿರ್ಮಿಸಿರುವ ಸಂಸತ್‌ ಭವನ ಕಟ್ಟಡ ಉದ್ಘಾಟನೆ ವಿಚಾರವು ಸಹ ಚರ್ಚೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.

ಗೃಹಲಕ್ಷ್ಮೀ ಯೋಜನೆಗಾಗಿ ಆಧಾರ್‌ ಲಿಂಕ್‌ಗೆ ಮುಗಿಬಿದ್ದ ಮಹಿಳೆಯರು

ಪ್ರತಿಪಕ್ಷಗಳು ಸಂಸತ್‌ ಭವನ ಉದ್ಘಾಟನೆಯನ್ನು ಬಹಿಷ್ಕರಿಸಲು ತೀರ್ಮಾನಿಸಿವೆ. ಈ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದರೂ ಜೆಡಿಎಸ್‌ ಪರವಾಗಿ ಎಚ್‌.ಡಿ.ದೇವೇಗೌಡ ಅವರು ಭಾಗವಹಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ದೇವೇಗೌಡ ಅವರು ಯಾವ ಕಾರಣಕ್ಕಾಗಿ ಭಾಗವಹಿಸಬೇಕು ಎಂಬುದರ ಅಗತ್ಯವನ್ನು ಪ್ರತಿಪಾದಿಸಲಾಯಿತು. ಇದೇ ವೇಳೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿವೆ.

click me!