Bharat Jodo Yatra: ಸೆ.30ಕ್ಕೆ ಭಾರತ ಐಕ್ಯತಾ ಯಾತ್ರೆ ಕರ್ನಾಟಕ ಪ್ರವೇಶ

Published : Sep 08, 2022, 01:00 AM IST
Bharat Jodo Yatra: ಸೆ.30ಕ್ಕೆ ಭಾರತ ಐಕ್ಯತಾ ಯಾತ್ರೆ ಕರ್ನಾಟಕ ಪ್ರವೇಶ

ಸಾರಾಂಶ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಆಗಮನ, ರಾಜ್ಯದ 7 ಜಿಲ್ಲೆಗಳಲ್ಲಿ 22 ದಿನ ಸಂಚಾರ, ಇದರಲ್ಲಿ 4 ದಿನ ವಿಶ್ರಾಂತಿ

ಬೆಂಗಳೂರು(ಸೆ.08):  ತಮಿಳುನಾಡಿನಲ್ಲಿ ಸೆ.7 ರಿಂದ ಚಾಲನೆ ನೀಡಲಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಸೆ.30 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲಕ ರಾಜ್ಯ ಪ್ರವೇಶಿಸಲಿದೆ. ಒಟ್ಟು 7 ಜಿಲ್ಲೆಯಲ್ಲಿ 22 ದಿವಸ ಸಂಚರಿಸಲಿದೆ. ಇದರಲ್ಲಿ 4 ದಿವಸ ವಿಶ್ರಾಂತಿ ನೀಡಲಾಗಿದೆ.

ಯಾತ್ರೆ ಸಾಗುವ ಹಾದಿ:

ಸೆ.30 ರಂದು ಬೆಳಿಗ್ಗೆ ಚಾಮರಾಜನಗರದ ಬೆಂಡಗಳ್ಳಿ ಗ್ರಾಮದ ಮೂಲಕ ಯಾತ್ರೆಯು ಪ್ರವೇಶಿಸಲಿದ್ದು ತ್ರಿಪುರ ಸಭಾಂಗಣದ ಮುಂಭಾಗದಲ್ಲಿರುವ ಮೈದಾನದಲ್ಲಿ ರಾತ್ರಿ ತಂಗಲಿದೆ. ಅ.1 ರಂದು ಬೇಗೂರಿನಿಂದ ಯಾತ್ರೆ ಹೊರಡಲಿದ್ದು ತಾಂಡವಪುರದ ಎಂಐಟಿ ಕಾಲೇಜಿನ ಎದುರು ರಾತ್ರಿ ವಾಸ್ತವ್ಯ ಹೂಡಲಿದೆ. ಅ.2 ರಂದು ಗಾಂಧಿ ಜಯಂತಿಯಂದು ಮೈಸೂರಿನ ಬದನವಾಳುವಿನ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದಾರೆ.
ಅ.2 ರಂದು ಮಧ್ಯಾಹ್ನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ರಾಹುಲ್‌ ಭೇಟಿ ನೀಡಲಿದ್ದಾರೆ. ಬಳಿಕ ಕಡಕೊಳ ಮೂಲಕ ಯಾತ್ರೆ ಮುಂದುವರೆಯಲಿದ್ದು ಮೈಸೂರಿನ ಅರಮನೆ ಮೈದಾನದ ಎದುರಿನ ವಸ್ತು ಪ್ರದರ್ಶನ ಮೈದಾನದಲ್ಲಿ ರಾತ್ರಿ ಉಳಿಯಲಿದೆ. ಅ.3 ರಂದು ಮೈಸೂರಿನಿಂದ ಯಾತ್ರೆ ಆರಂಭಗೊಂಡು ಮಂಡ್ಯದ ಕೆನ್ನಾಲು, ಟಿ.ಎಸ್‌.ಛತ್ರ ಗ್ರಾಮದ ಬಸ್‌ ನಿಲ್ದಾಣ ತಲುಪಲಿದೆ.

ದೇಶದಲ್ಲಿ ಶಾಂತಿ ನೆಲಸಲು ಭಾರತ್‌ ಜೋಡೋ ಯಾತ್ರೆ: ಸಿದ್ದರಾಮಯ್ಯ

ರಾತ್ರಿ ಟಿ.ಎಸ್‌.ಛತ್ರ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗ ವಾಸ್ತವ್ಯ ಹೂಡಲಾಗುವುದು. ಅ.4 ಮತ್ತು 5 ರಂದು ಎರಡು ದಿವಸ ಯಾತ್ರೆಗೆ ವಿಶ್ರಾಂತಿ ನೀಡಲಾಗಿದೆ. ಅ.6 ರಂದು ಮಂಡ್ಯದ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಯಾತ್ರೆ ಪುನಾರಂಭಗೊಳ್ಳಲಿದೆ. ನಾಗಮಂಗಲ ತಾಲೂಕು ಚೌಡೇನಹಳ್ಳಿ ಗೇಟ್‌ ಮೂಲಕ ಬರಮದೇವರಹಳ್ಳಿ ತಲುಪಲಿದ್ದು ರಾತ್ರಿ ಎಂ.ಹೊಸೂರು ಗೇಟ್‌ನ ಸರ್ಕಾರಿ ಆಯುರ್ವೇದಿಕ್‌ ಆಸ್ಪತ್ರೆ ಮುಂಭಾಗ ವಾಸ್ತವ್ಯ ಹೂಡಲಿದೆ.

ಆದಿಚುಂಚನಗಿರಿಯಲ್ಲಿ ವಾಸ್ತವ್ಯ

ಅ.7 ರಂದು ವಿಸ್ಡಂ ಶಾಲೆಯಿಂದ ಆರಂಭವಾಗಿ, ನಾಗಮಂಗಲದ ಅಂಚೆ ಚಿಟ್ಟನಹಳ್ಳಿ ಮೂಲಕ ಬೆಳ್ಳೂರಿಗೆ ತಲುಪಿ ಆದಿಚುಂಚನಗಿರಿ ಮಠದ ಸ್ಟೇಡಿಯಂನಲ್ಲಿ ರಾತ್ರಿ ತಂಗಲಿದೆ. ಅ.8 ರಂದು ಆದಿಚುಂಚನಗಿರಿ ಮಠ ಗೇಟ್‌ನಿಂದ ಯಾತ್ರೆ ಪ್ರಾರಂಭವಾಗಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ವಡವನಘಟ್ಟ, ಮತಿಘಟ್ಟಮೂಲಕ ಕಲ್ಲೂರು ಕ್ರಾಸ್‌ನಲ್ಲಿ ವಾಸ್ತವ್ಯ ಹೂಡಲಿದೆ.

ಅ.9 ರಂದು ಕಲ್ಲೂರು ಕ್ರಾಸ್‌ನಿಂದ ತುಮಕೂರು ಜಿಲ್ಲೆ ನಿಟ್ಟೂರಿನ ಸಿದ್ದಗಂಗಾ ಶಾಲೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆದು ಬಳಿಕ ಗುಬ್ಬಿಯ ಸೋಮಲಾಪುರ ಮಾರ್ಗವಾಗಿ ಚೇಳೂರಿನ ಕೋಡಿಯಾಲ ತಲುಪಿ ರಾತ್ರಿ ತಂಗಲಿದೆ. ಅ.10 ರಂದು ಅಂಕಸಂದ್ರ ಗ್ರಾಮ, ಬೆಂಚೆ ಮೂಲಕ ಕಳ್ಳಂಬೆಳ್ಳ ತಲುಪಿ ವಾಸ್ತವ್ಯ ಹೂಡಲಿದೆ. ಅ.11 ಕ್ಕೆ ಶಿರಾದ ಸಿರಿಗಂಧ ಪ್ಯಾಲೇಸ್‌, ತಾವರೇಕೆರೆ ಗ್ರಾಮದ ಮೂಲಕ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಅಣೆಸಿದ್ರಿ ಶನೇಶ್ವರ ದೇವಸ್ಥಾನ ತಲುಪಿ ರಾತ್ರಿ ತಂಗಲಿದೆ.

ಅ.12 ರಂದು ಹಿರಿಯೂರು ಬೈಪಾಸ್‌, ಬಲೇನಹಳ್ಳಿ ಮೂಲಕ ಹರ್ತಿಕೋಟೆ ತಲುಪಿ ವಾಸ್ತವ್ಯ ಹೂಡಲಿದೆ. ಅ.13 ರಂದು ವಿಶ್ರಾಂತಿ ಇದ್ದು 14 ಕ್ಕೆ ಸಣ್ಣಿಕರೆ, ಸಿದ್ದಾಪುರ ಮಾರ್ಗವಾಗಿ ರಾತ್ರಿ ಚಳ್ಳಕೆರೆ ತಲುಪಲಿದೆ. ಅ.15 ರಂದು ಗಿರಿಯಮ್ಮನಹಳ್ಳಿ, ಹಿರೇಹಳ್ಳಿ ಟೋಲ್‌ಪ್ಲಾಜಾ ಮೂಲಕ ಹಿರೇಹಳ್ಳಿ ತಲುಪಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ರಾತ್ರಿ ಉಳಿಯಲಿದೆ.

ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ: ಎಂ.ಬಿ. ಪಾಟೀಲ್‌

ಅ.16 ರಂದು ಬೊಮ್ಮಗೊಂಡನಕೆರೆ, ಕಂಸಾಗರ, ಮೊಳಕಾಲ್ಮೂರು ಮೂಲಕ ರಾಂಪುರದಲ್ಲಿ ವಾಸ್ತವ್ಯ ಹೂಡಲಿದೆ. ಅ.17 ರಂದು ಬಳ್ಳಾರಿಯ ಹಲಕುಂದಿಯಲ್ಲಿ ವಾಸ್ತವ್ಯ. ಅ.18 ರಂದು ವಿಶ್ರಾಂತಿಯಿದ್ದು ಅ.19 ರಂದು ಸಂಗನಕಲ್ಲು ಮೂಲಕ ಮೋಕಾ ಗ್ರಾಮದಲ್ಲಿ ರಾತ್ರಿ ತಂಗಲಿದೆ. ಅ.20 ಮತ್ತು 21 ರಂದು ರಾಯಚೂರು ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಯಾತ್ರೆ ಮುಂದುವರೆಯಲಿದೆ.

7 ಜಿಲ್ಲೆ , 511 ಕಿ.ಮೀ. ಯಾತ್ರೆ

ಭಾರತ್‌ ಐಕ್ಯತಾ ಯಾತ್ರೆಯು ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟಾರೆ 511 ಕಿ.ಮೀ. ಸಂಚರಿಸಲಿದೆ. ಪ್ರತಿ ದಿನವೂ ಯಾವ ಸಮಯಕ್ಕೆ ಎಲ್ಲಿಂದ ಯಾತ್ರೆ ಪ್ರಾರಂಭವಾಗಲಿದೆ, ಯಾವ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಆಯಾ ದಿನದ ಉಸ್ತುವಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಅಂತಿಮಗೊಳಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ