ಮೈಸೂರು ಮಹಾನಗರ ಪಾಲಿಕೆ: ಜೆಡಿಎಸ್‌ ಎಡವಟ್ಟಿನಿಂದ ತಪ್ಪಿದ ಉಪ ಮೇಯರ್‌ ಸ್ಥಾನ!

Published : Sep 07, 2022, 11:00 PM IST
ಮೈಸೂರು ಮಹಾನಗರ ಪಾಲಿಕೆ: ಜೆಡಿಎಸ್‌ ಎಡವಟ್ಟಿನಿಂದ ತಪ್ಪಿದ ಉಪ ಮೇಯರ್‌ ಸ್ಥಾನ!

ಸಾರಾಂಶ

ತನ್ನದೇ ತಪ್ಪಿನಿಂದಾಗಿ ಜೆಡಿಎಸ್‌ಗೆ ಒಲಿಯಬೇಕಿದ್ದ ಉಪ ಮೇಯರ್‌ ಸ್ಥಾನವು ಈಗ ಕೈತಪ್ಪಿದೆ.

ಮಹೇಂದ್ರ ದೇವನೂರು

ಮೈಸೂರು(ಸೆ.07):  ಜೆಡಿಎಸ್‌ ಮಾಡಿಕೊಂಡ ಎಡವಟ್ಟಿನಿಂದಾಗಿ ಉಪ ಮೇಯರ್‌ ಸ್ಥಾನ ಕೈತಪ್ಪಿದೆ. ಜೆಡಿಎಸ್‌ ಎಂದರೇ ಎಡವಟ್ಟು, ತಪ್ಪು ನಿರ್ಧಾರಗಳಿಗೆ ಖ್ಯಾತಿ. ಕಳೆದ ಬಾರಿ ನ್ಯಾಯಾಲಯದಲ್ಲಿ ಸದಸ್ಯತ್ವ ರದ್ದತಿ ಪ್ರಕರಣ ಇರುವ ರುಕ್ಮಿಣಿ ಮಾದೇಗೌಡರನ್ನು ಮೇಯರ್‌ ಮಾಡಿ, ನಂತರ ಅನರ್ಹಗೊಂಡಾಗ ಮುಖಭಂಗ ಅನುಭವಿಸಿತ್ತು. ನಂತರ ಮೈಸೂರು ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇಯರ್‌ ಸ್ಥಾನಕ್ಕೆ ಮಧ್ಯಂತರ ಚುನಾವಣೆ ನಡೆದಾಗ ಬಿಜೆಪಿ ಜೊತೆ ಅಪರೋಕ್ಷ ಮೈತ್ರಿ ಮಾಡಿಕೊಂಡಿತು. ಈ ಬಾರಿ ತನ್ನ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ಗೆ ಮುಖಭಂಗ ಮಾಡಲು ನೇರ ಮೈತ್ರಿ ಮಾಡಿಕೊಂಡು ಉಪ ಮೇಯರ್‌ ಸ್ಥಾನ ಪಡೆಯಲು ಮುಂದಾಗಿತ್ತು. ಆದರೆ ತನ್ನದೇ ತಪ್ಪಿನಿಂದಾಗಿ ಜೆಡಿಎಸ್‌ಗೆ ಒಲಿಯಬೇಕಿದ್ದ ಉಪ ಮೇಯರ್‌ ಸ್ಥಾನವು ಈಗ ಕೈತಪ್ಪಿ ಹೋಗಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ದೂರ ಉಳಿಯುತ್ತೇವೆ, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎನ್ನುತ್ತಲೇ, ಮೇಯರ್‌ ಸ್ಥಾನ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಜೆಡಿಎಸ್‌ ಹೊಂದಾಣಿಕೆಗೆ ಮುಂದಾಯಿತು. ಈ ವೇಳೆ ಬಿಜೆಪಿ ಪಟ್ಟು ಬಿಡದ ಹಿನ್ನೆಲೆಯಲ್ಲಿ ಮೇಯರ್‌ ಸ್ಥಾನವನ್ನು ಬಿಜೆಪಿಗೆ ಬಿಟ್ಟು, ಉಪ ಮೇಯರ್‌ ಸ್ಥಾನವನ್ನಾದರೂ ಪಡೆಯಲು ಜೆಡಿಎಸ್‌ ಮುಂದಾಯಿತು.

ಬಿಜೆಪಿಯವರು ಜೆಡಿಎಸ್‌ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಆದರೆ ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು. ಜಾತಿ ಪ್ರಮಾಣ ಪತ್ರ ನೀಡುವುದನ್ನು ಮರೆತಿದ್ದರು. ಇದರಿಂದಾಗಿ ನಾಮಪತ್ರ ಪರಿಶೀಲನೆ ವೇಳೆ ಚುನಾವಣ ಅಧಿಕಾರಿಯೂ ಆದ, ಪ್ರಾದೇಶಿಕ ಆಯುಕ್ತ ಜಿ. ಪ್ರಕಾಶ್‌ ನಾಮಪತ್ರ ತಿರಸ್ಕರಿಸಿದರು. ಇದರಿಂದಾಗಿ ತನಗೆ ದೊರಕಿದ್ದ ಸ್ಥಾನವನ್ನೂ ಜೆಡಿಎಸ್‌ ಬಿಜೆಪಿಗೆ ಬಿಟ್ಟುಕೊಟ್ಟಿತು. ಮೇಯರ್‌ ಸ್ಥಾನವಷ್ಟೆಸಾಕು ಎಂದುಕೊಂಡಿದ್ದ ಬಿಜೆಪಿ, ನಿರಾಯಾಸವಾಗಿ ಉಪ ಮೇಯರ್‌ ಸ್ಥಾನವನ್ನೂ ತನ್ನದಾಗಿಸಿಕೊಂಡಿತು.

ನಿರ್ಮಲಾ ಹರೀಶ್‌ಗೆ ತಪ್ಪಿದ ಅವಕಾಶ

ಜೆಡಿಎಸ್‌ ಸದಸ್ಯೆ ನಿರ್ಮಲಾ ಹರೀಶ್‌ ಕಾಂಗ್ರೆಸ್‌ ಬೆಂಬಲ ಪಡೆದು ಉಪ ಮೇಯರ್‌ ಆಗುವ ಅಭಿಲಾಷೆ ಹೊಂದಿದ್ದರು. ಇದಕ್ಕೆ ಪ್ರತಿಯಾಗಿ ಮೇಯರ್‌ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಲು ನಿರ್ಧರಿಸಿದ್ದರು.
ಅದರಂತೆ ಮೇಯರ್‌ ಚುನಾವಣೆ ವೇಳೆ ನಿರ್ಮಲಾ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದರು. ಉಪ ಮೇಯರ್‌ ಚುನಾವಣೆ ವೇಳೆ ಜೆಡಿಎಸ್‌ನಿಂದ ರೇಷ್ಮಾ ಬಾನು ಮತ್ತು ನಿರ್ಮಲಾ ಹರೀಶ್‌ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ರೇಷ್ಮಾ ಬಾನು ಅವರ ನಾಮಪತ್ರ ತಿರಸ್ಕೃತಗೊಂಡರೆ, ನಿರ್ಮಲಾ ಹರೀಶ್‌ ಕಣದಲ್ಲಿಯೇ ಉಳಿದರು. ಈ ಕ್ಷಣದಲ್ಲಿಯಾದರೂ ಜೆಡಿಎಸ್‌ ನಿರ್ಮಲಾ ಅವರನ್ನೇ ಬೆಂಬಲಿಸಿ, ಉಪ ಮೇಯರ್‌ ಸ್ಥಾನವನ್ನು ತನ್ನಲ್ಲಿಯೇ ಇರಿಸಿಕೊಳ್ಳಬಹುದಿತ್ತೇನೊ ಎಂಬ ಚರ್ಚೆ ನಡೆಯಿತು.

ಘಾಸಿಗೊಂಡ ಜೆಡಿಎಸ್‌ ಸದಸ್ಯರು: ರೇಷ್ಮಾ ಬಾನು ಅವರ ನಾಮಪತ್ರ ತಿರಸ್ಕೃತಗೊಳ್ಳುತ್ತಿರುವಂತೆಯೇ ಜೆಡಿಎಸ್‌ ಸದಸ್ಯರು ಘಾಸಿಗೊಳಗಾದರು. ರೇಷ್ಮಾ ಬಾನು ತಬ್ಬಿಬ್ಬಾಗಿ ತಮ್ಮ ಪಕ್ಷದ ನಾಯಕರತ್ತ ಮುಖ ಮಾಡಿದರು. ಈ ವೇಳೆ ಜಾತಿ ಪ್ರಮಾಣ ಪತ್ರ ನೀಡಲು ಅವರು ಮುಂದಾದರೂ, ಯಾವುದೇ ಪ್ರಯೋಜನವಾಗದಿದ್ದಾಗ, ಜೆಡಿಎಸ್‌ನಲ್ಲಿ ನಿರಾಸೆಯ ಕಾರ್ಮೋಡ ಆವರಿಸಿತು.

ಕಳೆದ ಬಾರಿ ಪ್ರತ್ಯೇಕವಾಗಿ ಕಣಕ್ಕಿಳಿದು ಸಂಖ್ಯಾಬಲದ ಮೇಲೆ ಬಿಜೆಪಿಗೆ ಮೇಯರ್‌ ಸ್ಥಾನ ದಕ್ಕುವಂತೆ ನೋಡಿಕೊಂಡಿದ್ದ ಜೆಡಿಎಸ್‌ ಈ ಬಾರಿ ಮೇಯರ್‌ ಸ್ಥಾನವನ್ನು ಬಿಜೆಪಿ ತನಗೇ ಬಿಟ್ಟುಕೊಡಲಿದೆ ಎನ್ನುವ ನಿರೀಕ್ಷೆ ಹೊಂದಿತ್ತು. ಅದೇ ರೀತಿ ಕಳೆದ ಮೂರು ದಿನಗಳಿಂದ ಸಭೆ ಮೇಲೆ ಸಭೆ ನಡೆಸುತ್ತಿದ್ದ ಜೆಡಿಎಸ್‌ ನಾಯಕರು ಬಿಜೆಪಿ ಮಾತುಕತೆಗೆ ಮುಂದಾಗದಿದ್ದರಿಂದ ಪ್ರತ್ಯೇಕವಾಗಿ ಕಣಕ್ಕಿಳಿಯಲು ತೀರ್ಮಾನಿಸಿದರು. ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಬೇಡ, ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಸಿಗದಂತೆ ತಡೆಯಬೇಕು ಎನ್ನುವ ಚಿಂತನೆಯಲ್ಲೇ ಇದ್ದ ಜೆಡಿಎಸ್‌ ನಾಯಕರು ಬಿಜೆಪಿ ಮುಖಂಡರು ನಿರೀಕ್ಷೆ ಹುಸಿ ಮಾಡಲ್ಲ ಎನ್ನುವ ಅಪರಿಮಿತ ನಂಬಿಕೆ ಇಟ್ಟಿದ್ದರು.

ಬಿಜೆಪಿಗೆ ಒಲಿದ ಮೈಸೂರು ಮೇಯರ್, ಉಪ ಮೇಯರ್: ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು ಎಂದ ಶಾಸಕ

ಆದರೆ, ಬಿಜೆಪಿ ಯಾವಾಗ ಮೈತ್ರಿಗೆ ಮುಂದಾಗದೆ ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿ ಶಿವಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತೋ ಆಗ ಜೆಡಿಎಸ್‌ ತಂತ್ರವು ಬದಲಾಯಿತು. ಬಿಸಿಎ(ಮಹಿಳೆ) ವರ್ಗದಿಂದ ಆಯ್ಕೆಯಾಗಿದ್ದ ನಿರ್ಮಲಾ ಹರೀಶ್‌ ಬದಲು ರೇಷ್ಮಾ ಬಾನು ಅವರಿಗೆ ಅವಕಾಶ ಕೊಟ್ಟು, ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ದಿಢೀರ್‌ ನಿರ್ಧರಿಸಿತು.

ಶಿವಕುಮಾರ್‌ ಪರವಾಗಿ ಬಿಜೆಪಿಯ 27 ಸದಸ್ಯರ ಮತಗಳೊಂದಿಗೆ ಜೆಡಿಎಸ್‌ ಶಾಸಕರಾದ ಜಿ.ಟಿ. ದೇವೇಗೌಡ, ಮರಿತಿಬ್ಬೇಗೌಡ, ಸಿ.ಎನ್‌. ಮಂಜೇಗೌಡ ಸೇರಿದಂತೆ ಜೆಡಿಎಸ್‌ನ 20 ಸದಸ್ಯರು ಕೈ ಎತ್ತಿದರು. ಓರ್ವ ಪಕ್ಷೇತರ ಮಾತ್ರ ತಟಸ್ಥವಾಗಿ ಉಳಿದರು. ಇದರಿಂದಾಗಿ ಶಿವಕುಮಾರ್‌ ಮೇಯರ್‌ ಆಗಿ ನಿರಾಶದಾಯಕವಾಗಿ ಆಯ್ಕೆಯಾದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು