
ಚನ್ನಪಟ್ಟಣ/ಕೋಲಾರ (ಮೇ 1, 2023): ಭಾರತೀಯರ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್, 85% ಕಮಿಷನ್ ಸರ್ಕಾರವಾಗಿತ್ತು ಎಂಬುದನ್ನು ಆ ಪಕ್ಷದಿಂದ ಪ್ರಧಾನಿಯಾಗಿದ್ದ ನೇತಾರರೇ ಒಪ್ಪಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗಾಗಿ 1 ರೂ. ಬಿಡುಗಡೆ ಮಾಡಿದರೆ, ಗ್ರಾಮ ಪಂಚಾಯತ್‌ಗೆ ತಲುಪುವುದು ಕೇವಲ 15 ಪೈಸೆ ಮಾತ್ರ ಎಂಬುದನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯೇ ಹೇಳಿದ್ದರು. ಭ್ರಷ್ಟಾಚಾರದ ಮೂಲವಾದ, ಕರ್ನಾಟಕದ ವಿಕಾಸಕ್ಕೆ ಕಂಟಕವಾದ ಕಾಂಗ್ರೆಸ್‌ನಿಂದ ರಾಜ್ಯದ ಉದ್ಧಾರ ಅಸಾಧ್ಯ. ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಆ ಮೂಲಕ ಬಿಜೆಪಿ 40% ಸರ್ಕಾರ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣತೊಟ್ಟಿರುವ ಮೋದಿ, ಭಾನುವಾರ ಕೋಲಾರ, ಚನ್ನಪಟ್ಟಣ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬೃಹತ್ ಸಮಾವೇಶ ನಡೆಸಿದರು. ಬಳಿಕ, ಮೈಸೂರಲ್ಲಿ ರೋಡ್ ಶೋ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಜೆಡಿಎಸ್ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮುಂದಾಗಿರುವ ಮೋದಿ, ಜೆಡಿಎಸ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ಗಳನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್ ಕೀ ಬಾತ್’ ಮೂಲಕ ಜನ ಸಂಪರ್ಕ: ಮೋದಿ
ಕಾಂಗ್ರೆಸ್‌ನವರು ಕಡಿಮೆ ಮೌಲ್ಯದ ವಿದೇಶಿ ಆಟಿಕೆಗಳಿಂದ ಭಾರತದ ಮಾರುಕಟ್ಟೆಗಳನ್ನು ತುಂಬಿಸಿ ಪರಂಪರಾಗತ ಚನ್ನಪಟ್ಟಣದ ಬೊಂಬೆ ಉದ್ಯಮವನ್ನೂ ನಷ್ಟಕ್ಕೆ ದೂಡಿದ್ದರು. ನಾನು ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣ ಗೊಂಬೆ, ಕುಶಲಕರ್ಮಿಗಳ ಬಗ್ಗೆ ಮಾತನಾಡಿದ್ದೆ. ದೇಶದ ಜನರಲ್ಲಿ ಭಾರತೀಯ ಆಟಿಕೆಗಳನ್ನು ಖರೀದಿಸುವಂತೆ ಮನವಿ ಮಾಡಿದ್ದೆ. ಈ ಪ್ರಯತ್ನದ ಕಾರಣ ವಿದೇಶಿ ಗೊಂಬೆಗಳ ಆಮದಿನಲ್ಲಿ ಶೇ.70ರಷ್ಟು ಕಡಿಮೆಯಾಗಿದ್ದು, ದೇಶದ ಆಟಿಕೆಗಳ ರಫ್ತು ಅಷ್ಟೇ ವೃದ್ಧಿಯಾಗಿದೆ. ಇವತ್ತು ಸಾವಿರಾರು ಕೋಟಿ ರೂಪಾಯಿಗಳ ಆಟಿಕೆಗಳನ್ನು ರಫ್ತು ಮಾಡುತ್ತಿದ್ದೇವೆ. ಇದರಿಂದ ಚನ್ನಪಟ್ಟಣ ಬೊಂಬೆಗಳ ಉದ್ಯಮಕ್ಕೂ ಲಾಭವಾಗುತ್ತಿದೆ ಎಂದರು.
ಇದೇ ವೇಳೆ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಕಾಂಗ್ರೆಸ್‌ನ ಗ್ಯಾರಂಟಿಗೆ ವಾರಂಟಿಯೇ ಇಲ್ಲ. ಕಾಂಗ್ರೆಸ್‌ಗೆ ತನ್ನ ವಾರೆಂಟಿಯೇ ಮುಗಿದಿದೆ. ಹೀಗಾಗಿ ಗ್ಯಾರೆಂಟಿ ಕಾರ್ಡ್‌ಗಳನ್ನು ಹಿಡಿದುಕೊಂಡು ತಿರುಗಾಡುತ್ತಿದೆ. ಹಿಮಾಚಲ ಪ್ರದೇಶದ ಮಾದರಿಯಂತೆಯೇ ಆ ಎಲ್ಲ ಗ್ಯಾರೆಂಟಿಗಳು ಸುಳ್ಳಿನ ಮೂಟೆ ಆಗಿವೆ ಎಂದರು.
ಇದನ್ನೂ ಓದಿ: ಮನ್ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ
ಕೇಂದ್ರದಲ್ಲಿ ದಶಕಗಳ ನಂತರ ಸದೃಢ ಸರ್ಕಾರ ಬಂದಿದೆ. ನಮ್ಮ ಅರ್ಥ ವ್ಯವಸ್ಥೆಯಿಂದು ಚೆನ್ನಾಗಿದೆ. ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗುತ್ತಿದೆ. ರಾಜ್ಯದಲ್ಲಿಯೂ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗಿದೆ. ಹೀಗಾಗಿ, ರಾಜ್ಯದ ಜನ ನಿಶ್ಚಯ ಮಾಡಿದ್ದಾರೆ, ಈ ಬಾರಿ ಬಿಜೆಪಿಯೇ ನಮ್ಮ ಆಯ್ಕೆ ಎಂದು. 5 ವರ್ಷಕ್ಕಲ್ಲ. ಮುಂದಿನ 30 ವರ್ಷಗಳ ಅಭಿವೃದ್ಧಿಗಾಗಿ ಈ ಚುನಾವಣೆ. ಕರ್ನಾಟಕವನ್ನು ದೇಶದಲ್ಲಿಯೇ ನಂ.1 ಮಾಡುವುದು ನಮ್ಮ ಗುರಿಯಾಗಿದ್ದು, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನೀತಿಗಳೇ ರಿವರ್ಸ್ ಗೇರ್‌ಗಳಂತಿವೆ. ಕಾಂಗ್ರೆಸ್-ಜೆಡಿಎಸ್ಗೆ ಕರ್ನಾಟಕ ಎಟಿಎಂ. ವಿಶ್ವಾಸಘಾತಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ದೇಶದ ರೈತರ ಜೊತೆಯಲ್ಲಿ ಪ್ರತಿ ಬಾರಿಯೂ ವಿಶ್ವಾಸಘಾತುಕತನ ಮಾಡಿದೆ. ಮೊದಲು ರೈತರನ್ನು ಸಾಲದ ಸುಳಿಯಲ್ಲಿ ಮುಳುಗಿಸುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ನಂತರ ಚುನಾವಣೆ ಬಂದಾಗ ಸಾಲಮನ್ನಾದ ತೋರಿಕೆಯ ನಾಟಕ ಆಡುತ್ತದೆ.
- ನರೇಂದ್ರ ಮೋದಿ, ಪ್ರಧಾನಿ
ಇದನ್ನೂ ಓದಿ: Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.