ಹೊರಟ್ಟಿ ಮೇಲ್ವರ್ಗ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಕಲಿಲ್ಲವೇ?: ಕಾಂಗ್ರೆಸ್‌ ಸಿಡಿಮಿಡಿ

By Kannadaprabha News  |  First Published Dec 24, 2022, 8:30 PM IST

ಉಪಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಕಿದ್ದೇಕೆ?: ಬೋಜೇಗೌಡರ ಪ್ರಶ್ನೆಗೆ ಕಾಂಗ್ರೆಸ್‌ ಸಿಡಿಮಿಡಿ


ವಿಧಾನ ಪರಿಷತ್‌(ಡಿ.24): ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾಂಗ್ರೆಸ್‌ ಈಗ ಉಪಸಭಾಪತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ದ್ವಂದ್ವ ನಿಲುವು ತಳೆದಿದೆ. ಹೊರಟ್ಟಿ ಅವರು ಮೇಲ್ವರ್ಗಕ್ಕೆ ಸೇರಿದವರೆಂಬ ಕಾರಣಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲವೇ ? ಹೀಗಂತ ಜೆಡಿಎಸ್‌ ಸದಸ್ಯ ಎಸ್‌.ಎಲ್‌.ಬೋಜೇಗೌಡ ಸದನದಲ್ಲಿ ಪ್ರಶ್ನಿಸಿದ್ದು ಸದನದಲ್ಲಿ ಕೆಲಕಾಲ ತೀವ್ರ ವಾಕ್ಸಮರ ನಿರ್ಮಾಣವಾಗಲು ಕಾರಣವಾಗಿತ್ತು.

ಸಭಾಪತಿ ಬಸವರಾಜ ಹೊರಟ್ಟಿಅವರು ಉಪಸಭಾಪತಿ ಚುನಾವಣೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿ ಮಾತನಾಡಿದ ಬೋಜೇಗೌಡ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿವೆ. ಈ ಹಿಂದೆ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇಂತಹ ಸಂದರ್ಭದಲ್ಲಿ ತಮಗೆ ಸಹಕಾರ ನೀಡುವಂತೆ ಸೌಜನ್ಯಕ್ಕಾದರೂ ನಮ್ಮನ್ನು ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

Karnataka Politics: ಮಂತ್ರಿಗಿರಿ ಸಿಗದ್ದಕ್ಕೆ ಈಶ್ವರಪ್ಪ ಬಹಿರಂಗ ಅತೃಪ್ತಿ

ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆ ವೇಳೆಗೂ, ಉಪಸಭಾಪತಿ ಚುನಾವಣೆಗೂ ಪಕ್ಷಗಳ ಸ್ಥಿತಿ ಬದಲಾಗಿಲ್ಲ. ಹೀಗಿರುವಾಗ ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದವರು ಮೇಲ್ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲವೇ ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಂಚ ಅಸಮಾಧಾನದಿಂದ, ಹೊರಟ್ಟಿಅವರು ಮೇಲ್ವರ್ಗದವರು ಎಂಬ ಮಾತು ಸರಿ ಅಲ್ಲ, ಇಂತಹ ಮಾತು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಎಂದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರು, ಬೋಜೇಗೌಡ ಅವರನ್ನು ಉದ್ದೇಶಿಸಿ, ನಿಮ್ಮ ಪಕ್ಷದ ನಿಲುವು, ನಡವಳಿಕೆ ಬಗ್ಗೆ ಮಾತನಾಡಿ, ನಮ್ಮ ಪಕ್ಷದ ಬಗ್ಗೆ ಹೇಳಲು ನೀವು ಯಾರು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಇವರ ಜೊತೆಗೆ ಎಸ್‌. ರವಿ. ಪ್ರಕಾಶ್‌ ರಾಥೋಡ್‌ ಮುಂತಾದವರು ದನಿಗೂಡಿಸಿದರು. ಇದಕ್ಕೆ ಪ್ರತಿಯಾಗಿ ನಿಮ್ಮದು ಸದಾ ದ್ವಂದ್ವ ನಿಲುವು, ಅನುಕೂಲಕ್ಕೆ ತಕ್ಕಂತೆ ನಿಲುವು ತಳೆಯುತ್ತೀರಿ, ಅಧಿಕಾರ ಬೇಕು ಎಂದಾಗ ನೀವೇ ಜೆಡಿಎಸ್‌ ಮನೆಗೆ ಬಂದಿದ್ದೀರಿ ಎಂದು ಛೇಡಿಸಿದರು. ವಾಗ್ವಾದ ತೀವ್ರವಾಗುತ್ತಿದ್ದಂತೆ ಸಭಾಪತಿಗಳು ಯಾರ ಮಾತು ಕಡತಕ್ಕೆ ಹೋಗದಂತೆ ಆದೇಶಿಸಿದರು.

ಸಭಾಪತಿ ಚುನಾವಣೆ ನಂತರ ಬೋಜೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಸದನದ ಅತ್ಯಂತ ಹಿರಿಯ ಸದಸ್ಯರು, ಅನುಭವ ಇರುವರೆಂಬ ಕಾರಣದಿಂದ ಹೊರಟ್ಟಿಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ ಯಾವತ್ತೂ ಜಾತಿ, ಧರ್ಮ ನೋಡಿಲ್ಲ. ಅದನ್ನು ಮೀರಿ ತನ್ನ ನಿಲುವು ಹೊಂದಿದೆ ಎಂದು ಹೇಳಿದರು.

ಬಿಜೆಪಿಯ ವೀರ ಸಾವರ್ಕರ್ ಅಸ್ತ್ರ ಬದಿಗೆ ಸರಿಸಿದ ಸಿದ್ದು, ಕೆರಳಿ ಕೆಂಡವಾದ ಡಿಕೆಶಿ!

ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗೆ ಕೋರ್ಸ್‌ ಪ್ರಾರಂಭಕ್ಕೆ ಚಿಂತನೆ ​

ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದ ಜತೆಗೆ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸ್‌ಗಳ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುವರ್ಣ ಸೌಧದೆದುರು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.
ಎಲ್ಲ ಶಿಕ್ಷಣ ಸಂಸ್ಥೆಗಳು ಆತ್ಮರಕ್ಷಣೆ ಕುರಿತು ವಿದ್ಯಾರ್ಥಿನಿಯರಿಗೆ ಅಲ್ಪಾವಧಿ ಕೋರ್ಸ್‌ ಕಲಿಸುವ ಅಗತ್ಯವಿದೆ. ಬರುವ ಶೈಕ್ಷಣಿಕ ವರ್ಷದಿಂದ ಹೆಣ್ಣು ಮಕ್ಕಳಿಗೆ ಅಲ್ಪಾವಧಿ ಕೋರ್ಸ್‌ ಪಿಯುಸಿ ಹಂತದಿಂದ ತರಬೇತಿ ನೀಡುವುದು ಸೂಕ್ತ. ಅದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ತಾವು ಗೃಹ ಸಚಿವನಾಗಿದ್ದ ವೇಳೆ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗೆ ಕರಾಟೆ ತರಬೇತಿ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಕಳೆದ ವರ್ಷ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಈ ತರಬೇತಿ ಪ್ರಾರಂಭಿಸಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿರುವುದು ಶ್ಲಾಘನೀಯ. ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಆತ್ಮರಕ್ಷಣಾಕಲೆ ಅಗತ್ಯ ಎಂದ ಅವರು, ಇಲ್ಲಿ ತರಬೇತಿ ಪಡೆದ ಹೆಣ್ಣು ಮಕ್ಕಳು ಉಳಿದವರಿಗೂ ತರಬೇತಿ ನೀಡಬೇಕು. ಹೆಣ್ಣು ಮಕ್ಕಳು ಆತ್ಮರಕ್ಷಣೆ ತಿಳಿದಿದ್ದರೆ, ಸುರಕ್ಷಿತ ಸಮಾಜ ನಿರ್ಮಾಣ ಮಾಡಿದಂತಾಗುತ್ತದೆ ಎಂದರು. ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ನಿರ್ಭಯ ಯೋಜನೆಯನ್ನು 700 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಲ್ಲಿ ಕೈಗೊಳ್ಳಲಾಗಿದೆ. ಇದನ್ನು ಉಳಿದ ನಗರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರಿದ್ದರು.
 

click me!