ರಾಜ್ಯದ ಕನಿಷ್ಠ 20 ಲೋಕಸಭೆ ಸೀಟು ಗೆಲ್ಲಲು ಕಾಂಗ್ರೆಸ್‌ ಗುರಿ: ಶಾಸಕಾಂಗ ಸಭೆಯಲ್ಲಿ ಸಿದ್ದು, ಡಿಕೆಶಿ ಸೂಚನೆ

By Kannadaprabha NewsFirst Published May 25, 2023, 5:35 AM IST
Highlights

ವಿಧಾನಸಭೆಯಲ್ಲಿ ಪಕ್ಷಕ್ಕೆ ದೊರೆತಿರುವ ಜಯದಿಂದ ಮೈ ಮರೆಯಬಾರದು. 2024ರ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ 20 ಸ್ಥಾನಗಳನ್ನು ಗೆಲ್ಲಲೇಬೇಕು. ಹೀಗಾಗಿ ರಾಜ್ಯ ಸರ್ಕಾರ ಜಾರಿ ಮಾಡುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಪಕ್ಷದ ಬಡವರ ಪರ ಸಿದ್ಧಾಂತದ ಪ್ರತೀಕ ಎಂದು ಬಿಂಬಿಸಬೇಕು. 

ಬೆಂಗಳೂರು (ಮೇ.25): ‘ವಿಧಾನಸಭೆಯಲ್ಲಿ ಪಕ್ಷಕ್ಕೆ ದೊರೆತಿರುವ ಜಯದಿಂದ ಮೈ ಮರೆಯಬಾರದು. 2024ರ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ 20 ಸ್ಥಾನಗಳನ್ನು ಗೆಲ್ಲಲೇಬೇಕು. ಹೀಗಾಗಿ ರಾಜ್ಯ ಸರ್ಕಾರ ಜಾರಿ ಮಾಡುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಪಕ್ಷದ ಬಡವರ ಪರ ಸಿದ್ಧಾಂತದ ಪ್ರತೀಕ ಎಂದು ಬಿಂಬಿಸಬೇಕು. ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದಸ್ಯರಿಗೆ ಸೂಚನೆ ನೀಡಲಾಗಿದೆ.

ವಿಧಾನಸೌಧದಲ್ಲಿ ಬುಧವಾರ ಬೆಳಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮುಖವಾಗಿ ಶಾಸಕರು ಸರ್ಕಾರಕ್ಕೆ ಕೆಟ್ಟಹೆಸರು ಬಾರದಂತೆ ನಡೆದುಕೊಳ್ಳಬೇಕು. ಶಿಸ್ತು ಉಲ್ಲಂಘನೆ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು. ಮುಖ್ಯವಾಗಿ ಲೋಕಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ವಿಧಾನಸಭೆಯಲ್ಲಿ 135 ಸ್ಥಾನ ಗೆದ್ದಿರುವ ರಾಜ್ಯದಿಂದ ಕನಿಷ್ಠ 20 ಮಂದಿ ಸಂಸದರು ಕಾಂಗ್ರೆಸ್‌ನಿಂದ ಆಯ್ಕೆಯಾಗಬೇಕು ಎಂದು ನಾಯಕರು ಸೂಚನೆ ನೀಡಿದ್ದಾರೆ.

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಫುಲ್‌ ಚಾರ್ಜ್‌!

ಲೋಕಸಭೆ ಗಮನದಲ್ಲಿಟ್ಟುಕೊಳ್ಳಿ- ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಿಂದ ರಾಜ್ಯ ಹಾಗೂ ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ಬಿಜೆಪಿ ಸಂಸದರು ನಾಲ್ಕೂವರೆ ವರ್ಷಗಳಿಂದ ಜನರ ಪರ ಬಾಯಿ ಬಿಟ್ಟಿಲ್ಲ. ರಾಜ್ಯದ ಜನತೆಯೂ ಇದನ್ನು ಗಮನಿಸಿದ್ದಾರೆ. ಕೊರೋನಾ, ಪ್ರವಾಹ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ತುಟಿ ಬಿಚ್ಚಿಲ್ಲ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಜನಪರವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಇನ್ನು ಬಿಜೆಪಿಯವರು ಮಾಡುವ ಸುಳ್ಳು ಆಪಾದನೆಗಳಿಗೂ ಶಾಸಕರೆಲ್ಲರೂ ಸೇರಿ ಪ್ರತ್ಯುತ್ತರ ನೀಡಬೇಕು. ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯವಾಗಿದೆ. ಇದನ್ನು ಸದನ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸುವ ಮೂಲಕ ಜನರಿಗೆ ಮುಟ್ಟಿಸಬೇಕು ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

20 ಸ್ಥಾನ ಗೆಲ್ಲಲೇಬೇಕು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು. ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಸಚಿವರು ಆಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು. ನಮಗೆ ಪಕ್ಷದ ಕಚೇರಿಯೇ ದೇಗುಲ ಅದಕ್ಕೆ ಮೊದಲ ಆದ್ಯತೆ ನೀಡಬೇಕು.

ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ. ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು. ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಮರೆಯಬಾರದು. ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲು ಸಹಕರಿಸಬೇಕು. ಸರ್ಕಾರಕ್ಕೆ ಕೆಟ್ಟಹೆಸರು ತರಲು ಪ್ರತಿಪಕ್ಷಗಳು ಕಾಯುತ್ತಿರುತ್ತವೆ. ಹೀಗಾಗಿ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಸಚಿವ ಮುನಿಯಪ್ಪಗೆ ಡಿಕೆಶಿ ತಿರುಗೇಟು: ಸಭೆಗಳಲ್ಲಿ ಅಧಿಕಾರಿಗಳೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಬೇಕು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ನೀಡಿದ ಸಲಹೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು ಎಂದು ಎಂದು ತಿಳಿದುಬಂದಿದೆ. ‘ಚುನಾವಣೆ ಸಮಯದಲ್ಲಿ ಕೇಸು ಹಾಕಿಸಿಕೊಂಡವರು ನಾವು. ನಮಗೆ ಕೊಟ್ಟನೋವು ನಮಗೆ ಗೊತ್ತಿದೆ. ಭ್ರಷ್ಟಾಚಾರ ಹೊರಗೆಡವಿದ ಪ್ರಿಯಾಂಕ್‌ ಖರ್ಗೆಗೆ ಸಮನ್ಸ್‌ ನೀಡಿ ಕಾಟ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಹೇಗೆಲ್ಲಾ ತೊಂದರೆ ನೀಡಿದ್ದಾರೆ ಎಂಬುದು ಗೊತ್ತಿದೆ. ಹೀಗಾಗಿ ಆ ನೋವಿನಿಂದ ಮಾತನಾಡಿದ್ದೇನೆ’ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವುದಾಗಿ ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು: ಇಂದು ಸಿದ್ದು, ಡಿಕೆಶಿ ದಿಲ್ಲಿಗೆ

ಶಾಸಕರಿಗೆ ಸಲಹೆ
- ಸರ್ಕಾರಕ್ಕೆ ಕೆಟ್ಟಹೆಸರು ಬಾರದಂತೆ ಶಾಸಕರು ನಡೆದುಕೊಳ್ಳಬೇಕು
- ಕಾಂಗ್ರೆಸ್‌ ಶಿಸ್ತು ಉಲ್ಲಂಘಿಸಿ ಮುಜುಗರ ಉಂಟು ಮಾಡಬಾರದು
- ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು
- ಗ್ಯಾರಂಟಿ ಸ್ಕೀಂಗಳನ್ನು ಬಡವರ ಪರ ಸಿದ್ಧಾಂತ ಎಂದು ಬಿಂಬಿಸಬೇಕು
- ವಿಧಾನಸಭೆ ಗೆಲುವಿನ ಯಾನ ಎಲ್ಲ ಎಲೆಕ್ಷನ್‌ನಲ್ಲಿ ಮುಂದುವರಿಯಬೇಕು

click me!