Karnataka Politics: ಗುಂಡಿನಿಂದ ಬಾಂಬ್‌ಗೆ ಬಡ್ತಿ ಕಾಂಗ್ರೆಸ್‌ ಸಾಧನೆ: ಕಟೀಲ್‌

By Kannadaprabha News  |  First Published Nov 28, 2021, 6:40 AM IST

*   ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗ ಕಾಂಗ್ರೆಸ್‌ ಕೊಡುಗೆ
*   ಮಹಿಳೆಯರಿಗೆ ಶಕ್ತಿ ನೀಡಿದ ಮೋದಿ
*   ದೇಶವನ್ನು ಪರಿವರ್ತನೆ ಮಾಡಿದ್ದರ ಪರಿಣಾಮ ಜಗತ್ತು ಇಂದು ಭಾರತದತ್ತ ಮುಖ ಮಾಡುತ್ತಿದೆ


ಬಾಗಲಕೋಟೆ(ನ.28):  ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌(Congress) ಪಕ್ಷದ ನಾಲ್ಕು ಕೊಡುಗೆಗಳು ಎಂದರೆ ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗ ಸಮಸ್ಯೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌(Nalin Kumar Kateel) ಆರೋಪಿಸಿದ್ದಾರೆ.

ಬಾಗಲಕೋಟೆಯ(Bagalkot) ವಿದ್ಯಾಗಿರಿಯಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ(BJP) ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷಗಳ ಸುದೀರ್ಘ ಆಡಳಿತದ ಅವ​ಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಕೊಡುಗೆ ಎಂದರೆ ಇಂತಹ ನಾಲ್ಕು ಕೊಡುಗೆಗಳಾಗಿವೆ ಎಂದರು.

Tap to resize

Latest Videos

undefined

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಹೆಚ್ಚು ಅ​ಧಿಕಾರ ನಡೆಸಿರುವ ಕಾಂಗ್ರೆಸ್‌ ಅ​ಧಿಕಾರದಲ್ಲಿದ್ದಾಗ ಭ್ರಷ್ಟಾಚಾರ(Corruption) ಹಾಗೂ ಭಯೋತ್ಪಾದನೆಯನ್ನು(Terrorism) ದೇಶದಲ್ಲಿ(India) ತಂದಿತು. ಜೊತೆಗೆ ಬಡತನ(Poverty) ಹಾಗೂ ನಿರುದ್ಯೋಗ ಸೇರಿಕೊಂಡಿತು. ಇಂತಹ ಕೊಡುಗೆ ನೀಡಿದ ಕಾಂಗ್ರೆಸ್‌ ಪಕ್ಷವನ್ನು ಜನತೆ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

BY Vijayendra: ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ವಿಜಯೇಂದ್ರ, ಯಾವ ಕ್ಷೇತ್ರ?

ನೆಹರೂ ಕಾಲದಲ್ಲಿ ಒಂದು ಗುಂಡಿನಿಂದ ಗೋಡ್ಸೆಯನ್ನು ಕೊಲ್ಲಲಾಯಿತು. 17 ಗುಂಡಿನಿಂದ ಇಂದಿರಾ ಗಾಂಧಿ(Indira Gandhi)​ಯವರನ್ನೇ ಕೊಂದರು, ರಾಜೀವ್‌ ಗಾಂಧಿ(Rajiv Gandhi) ​ಕಾಲದಲ್ಲಿ ಬಾಂಬ್‌ ಸ್ಫೋಟ ಆಯಿತು. ಹೀಗಾಗಿ ಒಂದು ಗುಂಡಿನಿಂದ 17 ಗುಂಡಿಗೆ ಪ್ರಮೋಷನ್‌ ಆಗಿ 17 ಗುಂಡಿನಿಂದ ಬಾಂಬ್‌ಗೆ ಪ್ರಮೋಷನ್‌ ಆಗಿದೆ. ಇದು ಈ ಹಿಂದಿನ ಕಾಂಗ್ರೆಸ್‌ ಪಕ್ಷದ ಆಡಳಿತವಾಗಿತ್ತು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಪಕ್ಷದ ಈ ನಾಲ್ಕು ಅಪಾಯಕಾರಿ ಕೊಡುಗೆಗಳನ್ನು ಅ​ಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಹಂತ ಹಂತವಾಗಿ ಹಸಿವು ಮುಕ್ತ ಹಾಗೂ ಬಡತನ ಮುಕ್ತ ದೇಶವನ್ನಾಗಿ ಕೊಂಡೊಯ್ಯುತ್ತಿದ್ದು ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ತಡೆಗಟ್ಟಿದ್ದಾರೆ. ಕಾಶ್ಮೀರ(Jammu and Kashmir) ಹೊರತುಪಡಿಸಿದರೆ ಇಡೀ ದೇಶದಲ್ಲಿ ಭಯೋತ್ಪಾದನೆ ಇಲ್ಲವಾಗಿದೆ ಎಂದರು.

ಬಡತನ ಹಾಗೂ ನಿರುದ್ಯೋಗ ಹೋಗಲಾಡಿಸಲು ಮುದ್ರಾ ಯೋಜನೆಯಂತಹ ಜನಪರ ಯೋಜನೆ ತಂದಿದ್ದರಿಂದ ಇಂದು ದೇಶದಲ್ಲಿ 12 ಕೋಟಿ ಉದ್ಯೋಗಗಳು(Jobs) ಸೃಷ್ಟಿಯಾಗಿವೆ. ಮಹಿಳೆಯರ(Woman) ಸ್ವಾವಲಂಬಿ ಬದುಕು ರೂಪಿಸಲು ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಿದರು.

ದೇಶದಲ್ಲಿನ ಸರ್ಕಾರವನ್ನು ಯಾರಾದರೂ ನಡೆಸಬಹುದು, ಸೋನಿಯಾಗಾಂಧಿ ​ಸೇರಿದಂತೆ ಯಾರಾದರೂ ನಡೆಸಬಹುದು. ಆದರೆ ದೇಶವನ್ನು ಪರಿವರ್ತನೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಾಯಿತು ಎಂದು ನಳಿನಕುಮಾರ್‌ ಕಟೀಲ ಹೇಳಿದರು.

ದೇಶವನ್ನು ಪರಿವರ್ತನೆ ಮಾಡಿದ್ದರ ಪರಿಣಾಮ ಜಗತ್ತು ಇಂದು ಭಾರತದತ್ತ ಮುಖ ಮಾಡುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ, ಕಾಶಿಯ ಅಭಿವೃದ್ಧಿ, ಕೋವಿಡ್‌ ಕಾಲಘಟ್ಟದಲ್ಲಿ ಜಾರಿಗೆ ತಂದ ಆತ್ಮನಿರ್ಭರ ಭಾರತದಂತಹ ಯೋಜನೆಗಳು ಇಂದು ಜನರ ಮನಸ್ಸಿನಲ್ಲಿ ಬೇರುರಿವೆ ಎಂದು ಹೇಳಿದರು.

Karnataka Politics:ಒಂದೇ ದಿನ ಎರಡೆರಡು ಅಚ್ಚರಿಯ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್‌ಗೆ ಬಿಗ್ ಶಾಕ್

ಮಹಿಳೆಯರಿಗೆ ಶಕ್ತಿ ನೀಡಿದ ಮೋದಿ:

ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಾನಂತಿ ಶ್ರೀನಿವಾಸನ್‌ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿಯವರ(Narendra Modi) ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದ್ದು ಎಲ್ಲ ಜಾತಿ, ಜನಾಂಗದವರಿಗೆ ಆದ್ಯತೆ ಸಿಗುತ್ತಿದೆ. ಹಲವು ರಾಜ್ಯಗಳಲ್ಲಿ ಶೇಕಡಾ 50ರಷ್ಟು ಮಹಿಳಾ ಮೀಸಲಾತಿ ನೀಡಲಾಗಿದೆ. ಕೇಂದ್ರದ ಸಂಪುಟದಲ್ಲಿ 11 ಮಹಿಳೆಯರಿಗೆ ಸಚಿವ ಸ್ಥಾನ, 8 ರಾಜ್ಯಗಳಲ್ಲಿ ಮಹಿಳಾ ರಾಜ್ಯಪಾಲರ ನೇಮಕ ಮಾಡಿರುವುದು ಇತಿಹಾಸದಲ್ಲೇ ಪ್ರಥಮವಾಗಿದೆ ಎಂದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ, ರಮೇಶ ಭೂಸನೂರು, ಸೋಮನಗೌಡ ಪಾಟೀಲ, ಅರುಣ ಶಹಪುರ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿಯ ಉಸ್ತುವಾರಿಗಳಾದ ಅಶ್ವತ್ಥ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ, ಆರ್‌.ಎಸ್‌.ಪಾಟೀಲ ಕೂಚಬಾಳ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸೂರು ಸೇರಿದಂತೆ ವಿವಿಧ ಘಟಕಗಳ ಪದಾ​ಧಿಕಾರಿಗಳು ಇದ್ದರು.

ಗಮನಸೆಳೆದ ಶೋಭಾಯಾತ್ರೆ

ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಶನಿವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಗೆ ಮುನ್ನ ನಡೆದ ಶೋಭಾಯಾತ್ರೆ ಗಮನಸೆಳೆಯಿತು. ತೆರೆದ ಜೀಪಿನಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಸೇರಿದಂತೆ ಇತರ ಪದಾ​ಧಿಕಾರಿಗಳ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಮಹಿಳಾ ಡೊಳ್ಳು ಕುಣಿತ ಹಾಗೂ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಕೆಂಪು ಶಾಲುಗಳನ್ನು ಹಾಕಿ ಹೆಜ್ಜೆ ಹಾಕಿ ಗಮನಸೆಳೆದರು. ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ ಸೇರಿದಂತೆ ಇತರರು ಸಹ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
 

click me!