ಕಾಂಗ್ರೆಸ್‌ನ 224 ಅಭ್ಯರ್ಥಿಗಳ ನಾಮಪತ್ರ ಅನೂರ್ಜಿತ ಭೀತಿ: ಕೊನೆಗೂ ಖೆಡ್ಡಾ ತೋಡಿದ ಬಿಜೆಪಿ

By Sathish Kumar KHFirst Published Apr 21, 2023, 1:53 PM IST
Highlights

ಯಾವುದೇ ಪಕ್ಷ ಅಭ್ಯರ್ಥಿಗಳಿಂದ ಹಣವನ್ನು ಪಡೆದು ಬಿ-ಫಾರಂ ನೀಡುವಂತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಭ್ಯರ್ಥಿಗಳಿಂದ ತಲಾ 2 ಲಕ್ಷ ರೂ. ಹಣ  ಪಡೆದು ಬಿ-ಫಾರಂ ವಿತರಿಸಿದ್ದಾರೆ.

ಬೆಂಗಳೂರು (ಏ.21): ದೇಶದಲ್ಲಿ ಯಾವುದೇ ಪಕ್ಷದಿಂದ ತನ್ನ ಅಭ್ಯರ್ಥಿಗಳಿಂದ ಹಣವನ್ನು ಪಡೆದು ಬಿ-ಫಾರಂ ನೀಡುವಂತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಎಲ್ಲ ಅಭ್ಯರ್ಥಿಗಳಿಂದ ತಲಾ 2 ಲಕ್ಷ ರೂ. ಹಣವನ್ನು ಪಡೆದು ಬಿ-ಫಾರಂ ವಿತರಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಷ್ಟ್ರೀಯ ಕಾಂಗ್ರೆಸ್ ಹಣವನ್ನ‌ ತೆಗೆದುಕೊಂಡು ಅಪ್ಲಿಕೇಶನ್ ಕೊಟ್ಟು, ಬಿ ಫಾರ್ಮ್ ವಿತರಿಸಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬಿ ಫಾರ್ಮ್ ಕೊಡಲು ನಿಯೋಜಿತರಾಗಿದ್ದರು. ಆದರೆ, ಇವರು ಯಾರಿಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರ್ಮ್ ಬೇಕು, ಅವರು ಅರ್ಜಿ ಹಾಕಬೇಕು ಎಂದು ಹೇಳಿದ್ದರು. ಪ್ರತೀ ಅರ್ಜಿಗೆ 2ಲಕ್ಷ ಹಣವನ್ನು ಪಾವತಿಸಿಕೊಂಡಿದ್ದಾರೆ. ಈವರೆಗೆ ರಾಜ್ಯದಲ್ಲಿ ಈವರೆಗೂ 1,350 ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಇದು ಜನಪ್ರತಿನಿಧಿ ಕಾಯ್ದೆ 171d ಪ್ರಕಾರ ಇದು ಅಪರಾಧ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

Latest Videos

ಬಿಜೆಪಿ ಬಾಂಬ್‌ಗೆ ಒಡೆಯದ ಕನಕಪುರ ಬಂಡೆ : ನಾಮಪತ್ರ ಊರ್ಜಿತದಿಂದ ಡಿಕೆಶಿ ಫುಲ್‌ ಖುಷ್

ಬಿ- ಫಾರಂ ವಿತರಣೆಯಿಂದ 23 ಕೋಟಿ ರೂ. ಸಂಗ್ರಹ: ಚುನಾವಣೆಯಲ್ಲಿ ಬಿ ಫಾರ್ಮ್ ಕೊಡಲು ಅಪ್ಲಿಕೇಶನ್ ಕೊಡಲು ಹಣ ಪಡೆಯುವಂತಿಲ್ಲ. ಇದು ಅಪರಾಧ ಆಗುತ್ತದೆ. ಯಾರು ಈ ರೀತಿ ಹಣ ಕೊಟ್ಟು ಬಿ ಫಾರ್ಮ್ ಪಡೆದಿದ್ದಾರೆ ಅದು ಕೂಡ ಅಪರಾಧವಾಗಿದೆ. ಡಿ.ಕೆ. ಶಿವಕುಮಾರ್ ಅವರೇ ಹೇಳಿದಂತೆ 23 ಕೋಟಿ ಹಣ ಸಂಗ್ರಹ ಆಗಿದೆ‌. ಈಗ ಕಾಂಗ್ರೆಸ್‌ನಿಂದ ಬಿ ಫಾರ್ಮ್ ಕೊಟ್ಟಿದ್ದನ್ನು ಹಾಗೂ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳ ಬಿ-ಫಾರಂಗಳನ್ನು ಅನುರ್ಜಿತಗೊಳಿಸುವಂತೆ ಮನವಿ ಮಾಡಿದ್ದೇವೆ. ಪೀಪಲ್ ರೆಪ್ರೆಸೆಂಟೇಟಿವ್ಸ್ ಕಾಯ್ದೆ ಪ್ರಕಾರ 224 ಅಭ್ಯರ್ಥಿಗಳನ್ನು ಅನೂರ್ಜಿತಗೊಳಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಹಣ ಸಂಗ್ರಹ: ರಾಜ್ಯದಲ್ಲಿ ಸುಸಜ್ಜಿತ ಕಾಂಗ್ರೆಸ್‌ ಭವನ (ಇಂದಿರಾ ಭವನ) ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರೂ (ಕೆಪಿಸಿಸಿ) ಆಗಿರುವ ಡಿ.ಕೆ. ಶಿವಕುಮಾರ್ ಅವರು ಈ ಬಾರಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ತಲಾ 1 ಸಾವಿರ ರೂ. ಕೊಟ್ಟು ಅರ್ಜಿಯನ್ನು ಪಡೆಯಬೇಕು. ಇನ್ನು ಅರ್ಜಿಯನ್ನು ಸಲ್ಲಿಕೆ ಮಾಡುವಾಗ ಕಾಂಗ್ರೆಸ್‌ ಭವನ ನಿರ್ಮಾಣ ಮಾಡುವುದಕ್ಕಾಗಿ ತಲಾ 2 ಲಕ್ಷ ರೂ. ದೇಣಿಗೆಯನ್ನು ಪಡೆಯಲಾಗಿದೆ. ಆದರೆ, ಈಗ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ 2 ಲಕ್ಷ ಹಣವನ್ನು ಪಡೆದು ಬಿ-ಫಾರಂ ನೀಡಿದೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಿಟ್ಟುಸಿರು ಬಿಟ್ಟಿದ್ದ ಡಿಕೆಶಿಗೆ ಮತ್ತೊಮ್ಮೆ ಕಂಟಕ: ಕನಕಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಡಿ.ಕೆ. ಶವಕುಮಾರ್‌ ಅವರು ಭರ್ಜರಿ ರ್ಯಾಲಿಯೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿ ಬಂದಿದ್ದರು. ಆದರೆ, ಇದಾದ ಬೆನ್ನಲ್ಲೇ ಅವರು ಆಸ್ತಿ ವಿವರ ಸಲ್ಲಿಕೆಯ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಬಿಜೆಪಿ ಕಾನೂನು ವಿಭಾಗದ ಸದಸ್ಯರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಂದಾಗಿದ್ದರು. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕನಕಪುರದಲ್ಲಿ ಸಲ್ಲಿಕೆ ಮಾಡಿದ್ದ ನಾಮಪತ್ರ ತಿರಸ್ಕೃತ ಆಗುವ ಆತಂಕವಿತ್ತು.ಇದಾದ ನಂತರ ಯಾವುದೇ ದಾಖಲೆಗಳಲ್ಲಿ ವ್ಯತ್ಯಾಸ ಆಗದಂತೆ ಮುತುವರ್ಜಿವಹಿಕೊಂಡು ಒಟ್ಟು 4 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಜೊತೆಗೆ, ಅವರ ಸಹೋದರನಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದರು. ಆದರೆ, ಇಂದು ಅವರ ನಾಮಪತ್ರವನ್ನು ರಾಮನಗರ ಜಿಲ್ಲೆಯ ಕನಕಪುರ ಚುನಾವಣಾಧಿಕಾರಿ ಸಂತೋಷ್‌ ಅವರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅವರ ಎಲ್ಲ ದಾಖಲೆಗಳು ಸರಿಯಾಗಿದ್ದು, ನಾಮಪತ್ರ ಊರ್ಜಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗ ಬಿ-ಫಾರಂ ವಿತರಣೆಯಲ್ಲಿ ಹಣ ಪಡೆದಿರುವುದಕ್ಕೆ ಮತ್ತೊಮ್ಮೆ ಉರುಳು ಬಂದಂತಾಗಿದೆ.

click me!