ಲೆಕ್ಕಾಚಾರ ತಲೆ ಕೆಳಗೆ ಮಾಡಿದ ಕಡೂರು ಟಿಕೆಟ್, ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ಕ್ಷೇತ್ರಗಳಲ್ಲಿ ಟೆನ್ಷನ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.08): ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಟಿಕೆಟ್ ಹಂಚಿಕೆ ಕಾಂಗ್ರೆಸ್‌ಗೆ ಕಗ್ಗಂಟು ಆಗಿದೆ. ಟಿಕೆಟ್ ಹಂಚಿಕೆಯ ಮೊದಲ ಪಟ್ಟಿ ಪ್ರಕಟಗೊಂಡಾಗ ಆಕಾಂಕ್ಷಿಗಳು ತಲೆ ಕೆಡಿಸಿಕೊಳ್ಳಲಿಲ್ಲ, ಎರಡನೇ ಪಟ್ಟಿಯಲ್ಲಿ ಕಡೂರು ಕ್ಷೇತ್ರದ ಟಿಕೆಟ್ ಪ್ರಕಟಗೊಂಡ ನಂತರ ಆಕಾಂಕ್ಷಿಗಳ ಲೆಕ್ಕಾಚಾರ ತಲೆ ಕೆಳಗಾಗಿದೆ. ಇದಲ್ಲದೆ ಹಲವು ಮಂದಿ ಟಿಕೆಟ್ ಸಿಗುವ ಆಸೆಯನ್ನು ಕೈಬಿಡುವ ಹಂತಕ್ಕೆ ತಲುಪಿದ್ದಾರೆ. ಟಿಕೆಟ್‌ಗೆ ಲಾಭಿ ಮಾಡಲು ಬೆಂಗಳೂರು, ದೆಹಲಿಗೆ ಹಲವು ಬಾರಿ ಹೋಗಿ ಬಂದ ಮುಖಂಡರಲ್ಲಿ ಇತ್ತೀಚಿನ ಬೆಳವಣಿಗೆಯಿಂದಾಗಿ ತಳಮಳ ಉಂಟಾಗಿದೆ.
undefined
ಜಾತಿ ಲೆಕ್ಕಾಚಾರ
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಟಿ. ರಾಜೇಗೌಡ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆ ಮಾಡಲಾಗಿದೆ. ಮೂಡಿಗೆರೆ ಮೀಸಲು ಕ್ಷೇತ್ರ ಇಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲ.ಆದ್ರೆ ಈ ಭಾರೀ ಮೀಸಲು ಕ್ಷೇತ್ರದಲ್ಲೂ ಹೆಚ್ಚಿನ ಟಿಕೆಟ್ ಆಕ್ಷಾಂಕಿಗಳದ್ದು ತೀವ್ರ ಪೈಪೋಟಿ ಎದುರಾಗಿದೆ.ಮೂಡಿಗೆರೆ ಬಿಟ್ಟು ಇನ್ನುಳಿದ ಮೂರು ಕ್ಷೇತ್ರಗಳ ಪೈಕಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್‌ವಿ ದತ್ತ ಅವರಿಗೆ ಟಿಕೆಟ್ ಸಿಗುತ್ತದೆ. ಇನ್ನುಳಿದ ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಕುರುಬ ಹಾಗೂ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ಸಿಗಲಿದೆ. ಹಾಗಾದರೆ ಯಾವ ಜಾತಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಎಂಬ ಕುತೂಹಲ ಇತ್ತು.
ಚುನಾವಣೆ ಸ್ಪರ್ಧೆಗೆ ಮುನ್ನ ಸಿಟಿ ರವಿ ಟೆಂಪಲ್ ರನ್, ಚಿಕ್ಕಮಗಳೂರಿನ ಪ್ರಮುಖ ದೇವಾಲಯಗಳಲ್ಲಿ ಪೂಜೆ
ಆದರೆ, ಕಡೂರು ಕ್ಷೇತ್ರದಲ್ಲಿ ವೈಎಸ್‌ವಿ ದತ್ತಾ ಅವರ ಬದಲಿಗೆ ಕೆ.ಎಸ್. ಆನಂದ್ ಅವರಿಗೆ ಟಿಕೆಟ್ ನೀಡಿದ್ದರಿಂದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಬಂದಿದೆ. ಕಡೂರು ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿದ್ದರಿಂದ ಇನ್ನುಳಿದ ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಯಾವುದೋ ಒಂದು ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಆದ್ಯತೆ ಸಿಗುವುದು ಅನುಮಾನ.
ಚಿಕ್ಕಮಗಳೂರು ಕಡೂರಿನಲ್ಲಿ ಕುರುಬ ಸಮುದಾಯಕ್ಕೆ ಆದ್ಯತೆ ನೀಡಿದ್ದರಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ಸಿಗುವ ಆಂದಾಜು ಮಾಡಲಾಗಿದೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಮಹಡಿಮನೆ ಸತೀಶ್, ಬಿ.ಎಚ್. ಹರೀಶ್ ಜತೆಗೆ ಬಿಜೆಪಿಗೆ ಗುಡ್ ಬೈ ಹೇಳಿರುವ ಎಚ್.ಡಿ. ತಮ್ಮಯ್ಯ ಕೂಡ ಫಿಚ್‌ನಲ್ಲಿ ಇದ್ದಾರೆ.
ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಟಿಕೆಟ್ ನೀಡಬೇಕೆಂದು ಅರ್ಜಿ ಹಾಕಿರುವ 6 ಮಂದಿ ಪಕ್ಷದ ವರಿಷ್ಟರಿಗೆ ಒತ್ತಾಯಿಸಿದ್ದರಿಂದ ಚುನಾವಣೆ ಸಂದರ್ಭದಲ್ಲಿ ಈ ಆಂತರಿಕ ಬಿಕ್ಕಟ್ಟಿನಲ್ಲಿ ಇನ್ನಷ್ಟು ಬಿರುಕು ಕಾಣಬಾರದೆಂಬ ಉದ್ದೇಶದಿಂದ ನಿನ್ನೆ ತಡ ರಾತ್ರಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಪರಿಸ್ಥಿತಿ ಅವಲೋಕನಾ ಸಭೆ ನಡೆದಿದೆ.
ಪ್ರತಿಭಟನೆ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ನೀಡಿದರೆ ತರೀಕೆರೆ ಕ್ಷೇತ್ರದಲ್ಲಿ ಇದೇ ಸಮುದಾಯಕ್ಕೆ ಮತ್ತೆ ಟಿಕೆಟ್ ನೀಡುವುದು ಅನುಮಾನ. ಈ ಕಾರಣಕ್ಕಾಗಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ದೋರನಾಳು ಪರಮೇಶ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಅವರ ಬೆಂಬಲಿಗರು ತರೀಕೆರೆಯ ಕಾಂಗ್ರೆಸ್ ಕಚೇರಿ ಎದುರು ರಸ್ತೆಯಲ್ಲಿ ಟಯರ್ ಇಟ್ಟು ಬೆಂಕಿ ಹಚ್ಚಿ ಶನಿವಾರ ಪ್ರತಿಭಟನೆ ನಡೆಸಿದರು.
ಕಡೂರು ಕ್ಷೇತ್ರದ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಲಾಗಿದೆ. ಚಿಕ್ಕಮಗಳೂರು ಟಿಕೆಟ್ ಲಿಂಗಾಯಿತ ಸಮುದಾಯಕ್ಕೆ ನೀಡಿದರೆ, ತರೀಕೆರೆ ಯಾವ ಸಮುದಾಯಕ್ಕೆ ಎಂಬ ಪ್ರಶ್ನೆ ಮತದಾರರ ಮುಂದಿದೆ.
ರಾಜಕೀಯದಲ್ಲಿ ತಪ್ಪಿದ ಗಣಿತ ಮೇಸ್ಟ್ರು ಲೆಕ್ಕಚಾರ: ಅಭಿಮಾನಿಗಳಿಗೆ ಭಾವುಕ ಪತ್ರ ಬರೆದ ವೈಎಸ್‌ವಿ ದತ್ತಾ..!
ತರೀಕೆರೆ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಸೇರಿರುವ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಹಾಗೂ ಮಡಿವಾಳ ಸಮುದಾಯಕ್ಕೆ ಸೇರಿರುವ ಗೋಪಿಕೃಷ್ಣ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಬಲವಾಗಿ ಇರುವುದರಿಂದ ಯಾವ ಸಮುದಾಯಕ್ಕೆ ಟಿಕೆಟ್ ಸಿಗಬಹುದು ಎಂಬ ಕುತೂಹಲ ಸಾರ್ವಜನಿಕರ ಮುಂದಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.