ಸಿದ್ದರಾಮಯ್ಯ ಬದಲಿಸಿ ಯಾರನ್ನೇ ತಂದರೂ ಪಕ್ಷದಲ್ಲಿ ಅಂತರಿಕ ತುಮುಲ ಖಚಿತ. ಅಲ್ಲದೆ, ಪರ್ಯಾಯವಾಗಿ ಬರುವ ಯಾವುದೇ ನಾಯಕ ಎಲ್ಲ ಶಾಸಕರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಎಂಬ ನಂಬಿಕೆ ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ.
ಬೆಂಗಳೂರು(ಸೆ.25): ಮುಡಾ ಪ್ರಕರಣದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಕಾಂಗ್ರೆಸ್ ಹೈಕಮಾಂಡ್ ಅನ್ನು ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿಸಿದೆ. ಒಂದು ಕಡೆ ಸಮೀಪಿಸುತ್ತಿರುವ ಮೂರು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಉತ್ತಮ ಇಮೇಜ್ ಇಟ್ಟುಕೊಳ್ಳಲು ಕಠಿಣ ನಿರ್ಧಾರ ಕೈಗೊಳ್ಳುವುದೇ ಎಂಬ ಪ್ರಶ್ನೆ ಕಾಡುತ್ತಿದ್ದರೆ, ಅಕಸ್ಮಾತ್ ಇಂತಹ ಕಠಿಣ ಕ್ರಮಕ್ಕೆ ಮುಂದಾದರೆ ಗಟ್ಟಿ ನೆಲೆ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್ ಬುಡಮಟ್ಟದಲ್ಲಿ ಅಲುಗಾಡಬಹುದೇ ಎಂಬ ಆತಂಕವೂ ಕಾಡುತ್ತಿದೆ.
ಪ್ರಬಲ ಸಮುದಾಯವನ್ನು ಬೆನ್ನಿಗೆ ಹೊಂದಿರುವ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಉದ್ದೇಶ ಸದ್ಯಕ್ಕಂತೂ ಹೈಕಮಾಂಡ್‌ಗೆ ಇಲ್ಲ. ಆದರೆ, ಈ ಪರಿಸ್ಥಿತಿ ರಾಷ್ಟ್ರೀಯ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವಂತಾದರೆ ಏನು ಮಾಡುವುದು ಎಂಬ ಚಿಂತೆಯೂ ಇದೆ.
undefined
ಮುಡಾ ಹಗರಣ: ಸಿದ್ದು ತನಿಖೆಗೆ 11 ಸಮರ್ಥನೆ ನೀಡಿದ ಹೈಕೋರ್ಟ್
ಸಿದ್ದರಾಮಯ್ಯ ಅವರನ್ನು ಬದಲಿಸುವ ಯಾವುದೇ ಪ್ರಯತ್ನ ಪ್ರಬಲ ಕುರುಬ ಸಮುದಾಯ ಪಕ್ಷದಿಂದ ವಿಮುಖವಾಗುವಂತೆ ಮಾಡುತ್ತದೆ ಎಂಬ ಅರಿವು ಹೈಕಮಾಂಡ್‌ಗೆ ಇದೆ. ಆದಾಗ್ಯೂ ಅಂತಹ ರಿಸ್ಕ್ ತೆಗೆದುಕೊಂಡರೆ ಸರ್ವಸಮ್ಮತ ಪರ್ಯಾಯ ವ್ಯಕ್ತಿ ಯಾರು ಎಂಬುದು ಸಹ ಕಾಡುವ ವಿಷಯವಾಗಿದೆ. ಸಿದ್ದರಾಮಯ್ಯ ಅವರ ಗಾದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಆರೇಳು ಮಂದಿ ಆಕಾಂಕ್ಷಿಗಳು ಈಗಾಗಲೇ ಬಹಿರಂಗ ಪೈಪೋಟಿ ನಡೆಸಿದ್ದಾರೆ.
ಸಿದ್ದರಾಯಮ್ಯ ಬದಲಿಸಿ ಯಾರನ್ನೇ ತಂದರೂ ಪಕ್ಷದಲ್ಲಿ ಅಂತರಿಕ ತುಮುಲ ಖಚಿತ. ಅಲ್ಲದೆ, ಪರ್ಯಾಯವಾಗಿ ಬರುವ ಯಾವುದೇ ನಾಯಕ ಎಲ್ಲ ಶಾಸಕರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಎಂಬ ನಂಬಿಕೆ ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ.
ಸಿದ್ದರಾಮಯ್ಯ ಬದಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಏಳೆಂಟು ಮಂದಿ ಹಿರಿಯ ನಾಯಕರ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದು ಡಾ.ಜಿ.ಪರಮೇಶ್ವರ್ ಅಥವಾ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿದರೆ ಡಿ.ಕೆ.ಶಿವಕುಮಾರ್ ಬಣ ಒಪ್ಪುವುದಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುವಂತೆ ಮಾಡಬೇಕು. ಆಗ ಸಿದ್ದರಾಮಯ್ಯ ಯಾವ ನಿಲುವು ಕೈಗೊಳ್ಳುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾಗಿ, ಈ ಹಂತದಲ್ಲಿ ಹೈಕಮಾಂಡ್ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಎಂಬ ಗುಮಾನಿಯಿದೆ.
ಈ ಎಲ್ಲ ಕಾರಣಕ್ಕೆ ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರೆಯುವ ಹಾಗೂ ಸಿದ್ದರಾಮಯ್ಯ ಅವರಿಗೆ ಕಾನೂನು ಹಾಗೂ ರಾಜಕೀಯ ಹೋರಾಟ ನಡೆಸಲು ಅವಕಾಶ ನೀಡಿ, ತಾನು ಅವರ ಬೆನ್ನಿಗೆ ನಿಲ್ಲುವ ನಿಲುವು ಹೈಕಮಾಂಡ್‌ನದ್ದು ಎನ್ನಲಾಗಿದೆ. ಆದರೆ, ಮುಂದೆ ಪರಿಸ್ಥಿತಿ ಬದಲಾದರೆ ಹೈಕಮಾಂಡ್ ನಿಲುವಿನಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.