ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದೆ. ಜೀನ್ಸ್ ಅಪರೇಲ್ ಪಾರ್ಕ್ ನಿರ್ಮಿಸುವ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರ ಬಳಿ ಚರ್ಚಿಸಿದ್ದೇನೆ. ಬಳ್ಳಾರಿಯಲ್ಲಿ ಜೀನ್ಸ್ ಅಪರೇಲ್ ಪಾರ್ಕ್ ಆಗಿಯೇ ಆಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಬಳ್ಳಾರಿ (ಏ.27): ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದೆ. ಜೀನ್ಸ್ ಅಪರೇಲ್ ಪಾರ್ಕ್ ನಿರ್ಮಿಸುವ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರ ಬಳಿ ಚರ್ಚಿಸಿದ್ದೇನೆ. ಬಳ್ಳಾರಿಯಲ್ಲಿ ಜೀನ್ಸ್ ಅಪರೇಲ್ ಪಾರ್ಕ್ ಆಗಿಯೇ ಆಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಿಎಂ ಜತೆ ಚರ್ಚಿಸಿದ್ದು, ಬಳ್ಳಾರಿಯಲ್ಲಿ ಜೀನ್ಸ್ ಅಪರೇಲ್ ಪಾರ್ಕ್ ಆಗಿಯೇ ಆಗುತ್ತದೆ. ಅದನ್ನು ನಾವು ಮಾಡಿ ತೋರಿಸುತ್ತೇವೆ ಎಂದ ರಾಹುಲ್ ಗಾಂಧಿ, ಭಾರತೀಯ ಚೊಂಬು ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲವಾಗಿದೆ. ಕ್ಷೇತ್ರದ ಜನರು ಕಾಂಗ್ರೆಸ್‌ಗೆ ಶಕ್ತಿ ನೀಡಿ. ನುಡಿದಂತೆ ನಡೆಯುವ ಕಾಂಗ್ರೆಸ್‌ನ್ನು ಚುನಾಯಿಸಿ ಎಂದು ಮನವಿ ಮಾಡಿದರು.
ಬರ ಪರಿಹಾರದ ಬದಲು ರಾಜ್ಯಕ್ಕೆ ಮೋದಿ ಕೊಟ್ಟದ್ದು ಖಾಲಿ ಚೊಂಬು: ರಾಹುಲ್ ಗಾಂಧಿ
ಬಿಜೆಪಿ ಗೆದ್ದರೆ ಸಂವಿಧಾನ ಬದಲು: ಬಿಜೆಪಿಯವರು ಸಂವಿಧಾನ ಬದಲಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕರೆ ಖಂಡಿತ ಆ ಕೆಲಸ ಮಾಡುತ್ತಾರೆ. ದೇಶದ ರಕ್ಷಣೆಯಾಗಲು ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಸಂವಿಧಾನ ರೂಪಿಸುವ ಮುಂಚೆ ದಲಿತರು, ಆದಿವಾಸಿಗಳಿಗೆ ಯಾವುದೇ ಅಧಿಕಾರ ಇರಲಿಲ್ಲ. ಸಂವಿಧಾನ ಶೋಷಿತ ಸಮುದಾಯಗಳಿಗೆ ಎಲ್ಲವನ್ನೂ ನೀಡಿದೆ. ಜನಸಾಮಾನ್ಯರೊಂದಿಗೆ ಹೋರಾಟ ನಡೆಸಿದ ಕಾಂಗ್ರೆಸ್, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ, ಸಂವಿಧಾನ ಅಸ್ವಿತ್ವಕ್ಕೆ ಕಾರಣವಾಗಿದೆ. ಆದರೆ, ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುವ ಆಲೋಚನೆಯಲ್ಲಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ಬದಲಾಯಿಸುವ ಅಥವಾ ದುರ್ಬಲಗೊಳಿಸುವವರು ಇನ್ನೂ ಹುಟ್ಟಿಲ್ಲ ಎಂದರು.
ಬಡ ಕುಟುಂಬಕ್ಕೆ ₹1 ಲಕ್ಷ: ಕೇಂದ್ರದ ಬಿಜೆಪಿ ಸರ್ಕಾರ, ಅದಾನಿ ಸೇರಿದಂತೆ ಕೆಲವೇ ಜನ ಶ್ರೀಮಂತರ ಕೈಗೆ ದೇಶದ ಸಂಪತ್ತು ನೀಡುತ್ತಿದೆ. ಆದರೆ, ಕಾಂಗ್ರೆಸ್ಸಿನವರು ದೇಶದ ಬಡಜನರಿಗೆ ಸಂಪತ್ತು ಹಂಚಿಕೆ ಮಾಡುವ ಯೋಚನೆ ಮಾಡುತ್ತಿದ್ದೇವೆ. ಅವರು ಶ್ರೀಮಂತರಿಗೆ ಹಣ ನೀಡಲು ಬಯಸಿದರೆ, ನಾವು ಬಡವರಿಗೆ ಹಣ ನೀಡಲು ಬಯಸಿದ್ದೇವೆ. ಕರ್ನಾಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಈ ರೀತಿಯ ಜನಸಾಮಾನ್ಯರ ಕಲ್ಯಾಣಕ್ಕಾಗಿನ ಯೋಜನೆಗಳು ಈ ವರೆಗೆ ದೇಶದಲ್ಲಿ ಎಲ್ಲೂ ಜಾರಿಯಾಗಿಲ್ಲ. ಮಹಾಲಕ್ಷ್ಮಿ ಯೋಜನೆ ಮೂಲಕ ದೇಶದ ಬಡ ಕುಟುಂಬಗಳನ್ನು ಗುರುತಿಸಿ, ಅವರ ಖಾತೆಗಳಿಗೆ ವರ್ಷಕ್ಕೆ ಒಂದು ಲಕ್ಷ ಹಾಕಲಾಗುವುದು. ರಾಜ್ಯ ಸರ್ಕಾರ ಈಗಾಗಲೇ ₹2 ಸಾವಿರ ನೀಡುತ್ತಿದ್ದು ಇದರೊಂದಿಗೆ ಕಾಂಗ್ರೆಸ್‌ನಿಂದ ₹8500 ನೀಡಲಾಗುವುದು. ಈ ಮೂಲಕ ದೇಶದ ಬಡಜನರನ್ನು ಲಕ್ಷಾಧೀಶರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಿರುದ್ಯೋಗ ತಂದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕೋವಿಡ್ ತಂದಂತೆಯೇ ನಿರುದ್ಯೋಗವನ್ನು ತಂದಿದ್ದಾರೆ. ಕೋವಿಡ್ ಓಡಿಸಲು ಗಂಟೆ ಬಾರಿಸಿ, ಜಾಗಟೆ ಬಾರಿಸಿ ಎಂದಿದ್ದರು. ನಿರುದ್ಯೋಗಿ ಯುವಕರು ರಸ್ತೆಯಲ್ಲಿ ನಿಂತು ಪಕೋಡಾ ಮಾರಿ ಎಂದು ಹೇಳಿದ್ದರು. ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ ವಹಿಸದ ನರೇಂದ್ರ ಮೋದಿ ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೊಗ ಸೃಷ್ಟಿ ಮಾಡಲಾಗುವುದು. ಪದವಿಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಮಾಸಿಕ ₹8500ಗಳಷ್ಟು ಒಂದು ವರ್ಷದವರೆಗೆ ಭತ್ಯೆ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಂಭಾವನೆ ದ್ವಿಗುಣ ಮಾಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲಾಗುವುದು.
ಕೇಂದ್ರ ಜಾರಿಗೆ ತಂದಿರುವ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು. ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಣದೀಪ್ ಸುರ್ಜೆವಾಲಾ, ಬಿ.ಕೆ. ಹರಿಪ್ರಸಾದ್, ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ, ಕೊಪ್ಪಳ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಸಚಿವರಾದ ನಾಗೇಂದ್ರ, ಸಚಿವ ಶಿವರಾಜ ತಂಗಡಗಿ, ಜಮೀರ್ ಅಹ್ಮದ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಗಣೇಶ್, ಗವಿಯಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಭೀಮಾನಾಯ್ಕ ಸೇರಿದಂತೆ ಹಲವರು ಸಮಾವೇಶದಲ್ಲಿ ಉಪಸ್ಥಿತರಿದ್ದರು.
ತಡವಾಗಿ ಆರಂಭ: ಸಂಜೆ 4.30ಕ್ಕೆ ಆಗಮಿಸಬೇಕಿದ್ದ ರಾಹುಲ್ ಗಾಂಧಿ ಅವರು 5.55ಕ್ಕೆ ಬಂದರು. ನಿರೀಕ್ಷೆಯಷ್ಟು ಜನರು ಸೇರದ ಹಿನ್ನಲೆಯಲ್ಲಿ ರಾಹುಲ್ ಆಗಮನ ತಡವಾಯಿತು. ನೇರವಾಗಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರಲ್ಲದೆ, ಭಾಷಣ ನಡುವೆ ಖಾಲಿ ಚೊಂಬು ಪ್ರದರ್ಶಿಸಿದರು. ರಾಹುಲ್ ಆಗಮಿಸುತ್ತಿದ್ದಂತೆಯೇ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಹುಲ್ ರಾಹುಲ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು
ಸಿಎಂ-ಡಿಸಿಎಂ ಗೈರು: ರಾಹುಲ್ ಗಾಂಧಿ ಅವರು ಭಾಗವಹಿಸುವ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದರು. ಸಮಾವೇಶ ಶುರು ಮುನ್ನ ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದು ನಿರೂಪಕರು ಹೇಳುತ್ತಿದ್ದರು. ಆದರೆ, ಕೊನೆಗೆ ರಾಹುಲ್ ಗಾಂಧಿ ಅವರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿ, ನೇರ ಭಾಷಣಕ್ಕೆ ನಿಂತರು.