ರಾಜ್ಯದಲ್ಲಿ ಒಬಿಸಿ, ಎಸ್ಸಿ-ಎಸ್ಟಿ ಮೀಸಲಾತಿ ಕಬಳಿಸಿ ಮುಸ್ಲಿಂರಿಗೆ ಕೊಡುತ್ತಿರುವುದು ಸತ್ಯ. ನಮ್ಮ ಬಳಿ ದಾಖಲೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಏ.27): ರಾಜ್ಯದಲ್ಲಿ ಒಬಿಸಿ, ಎಸ್ಸಿ-ಎಸ್ಟಿ ಮೀಸಲಾತಿ ಕಬಳಿಸಿ ಮುಸ್ಲಿಂರಿಗೆ ಕೊಡುತ್ತಿರುವುದು ಸತ್ಯ. ನಮ್ಮ ಬಳಿ ದಾಖಲೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಲೇ ನ್ಯಾಷನಲ್ ಒಬಿಸಿ ಕಮಿಷನ್‌ಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸಿಎಂ ಹಾಜರಾಗುವಂತೆ ಒಬಿಸಿ ಕಮಿಷನರ್ ನೀಡಿದ ನೋಟಿಸ್ ನನ್ನ ಬಳಿ ಇದೆ. ಒಬಿಸಿ ಕಮಿಷನ್‌ಗೆ ಸಿಎಂ ಪತ್ರ ಬರೆದಿಲ್ಲ ಎಂದಾದರೆ ಹಂಸರಾಜ್ ನೀಡಿರುವ ನೋಟಿಸ್‌ಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಈಗ ಚುನಾವಣೆ ಕಾರಣದಿಂದ, ದಲಿತ ಒಬಿಸಿ ಮೀಸಲಾತಿ ಕಬಳಿಸುತ್ತಿಲ್ಲ. ಮುಸ್ಲಿಂರಿಗೆ ನೀಡುತ್ತಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಬಳಿಸಿ ತಮ್ಮ ವೋಟ್ ಬ್ಯಾಂಕ್ ಆದ ಮುಸ್ಲಿಂರಿಗೆ ಕೊಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದ ಅವರು, ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಸಹ ಇದನ್ನು ಸ್ಪಷ್ಟಪಡಿಸಿದೆ ಎಂದರು.
ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು
ಈ ವಿಷಯದಲ್ಲಿ ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನವೇ ಮುಸ್ಲಿಂರಿಗೆ ಮೀಸಲಾತಿ ವಾಪಸ್ ಕೊಡುವುದಾಗಿ ಹೇಳಿದ್ದು, ಈಗದನ್ನು ಸಾಧಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2 ಪರ್ಸೆಂಟ್ ಮೀಸಲಾತಿ ಕಲ್ಪಿಸಲು ಇವರು ವಿರೋಧಿಸಿದ್ದರು ಎಂದು ಹೇಳಿದ ಜೋಶಿ, ರಾಜ್ಯದ 14 ಕ್ಷೇತ್ರಗಳಲ್ಲಿ ನಡೆದ ಮತದಾನದಿಂದ ಜೆಡಿಎಸ್ -ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.
ಚೊಂಬು ಹಿಡಿದು ಅಭ್ಯಾಸ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರ ಕೈಗೆ ಚೊಂಬು ಕೊಡುವುದನ್ನು ಕಾಂಗ್ರೆಸ್ ನಿಲ್ಲಿಸಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ 14 ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಿ ಜನರು ಕೈಯಲ್ಲಿ ಚೊಂಬು ಹಿಡಿಯುವುದನ್ನು ತಪ್ಪಿಸಿದ್ದಾರೆ. ಪರಿಣಾಮ ಜನರೂ ಕಾಂಗ್ರೆಸಿಗರ ಕೈಗೆ ಚೊಂಬು ಕೊಡುತ್ತಾ ಬಂದರು. ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ಡಾಡುವುದು ಅಭ್ಯಾಸವಾಗಿದೆ ಎಂದು ವ್ಯಂಗ್ಯವಾಡಿದರು.
ರಣಹೇಡಿಯ ರೀತಿ ಮಂಡ್ಯ ಕ್ಷೇತ್ರಕ್ಕೆ ಓಡಿದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್ ವಂಗ್ಯ
ಯುಪಿಎ ಅವಧಿಯಲ್ಲಿ ₹ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದಲ್ಲದೆ, ಅವರ ವಿರುದ್ಧ ಗೆದ್ದವರಿಗೆ ಪದ್ಮವಿಭೂಷಣ ಕೊಟ್ಟು ಸತ್ಕರಿಸುವ ಮೂಲಕ ದಲಿತರ ಕೈಗೆ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು ಎಂದು ಹರಿಹಾಯ್ದರು. ಇದೆಲ್ಲದರ ಪರಿಣಾಮ ಜನರೂ ನಿಮ್ಮ ಕೈಗೆ ಚೊಂಬು ಕೊಟ್ಟು ಕಳುಹಿಸುತ್ತಿದ್ದಾರೆ. ದೇಶದ ಎರಡೇ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ಸಚಿವ ಜೋಶಿ ಕುಟುಕಿದರು.