ಗೋಕಾಕ(ಡಿ.16): ಬಿಜೆಪಿ (BJP) ಸೇರುವ ಕುರಿತು ನಮ್ಮ ನಾಯಕರ ಜತೆಗೆ, ನಮ್ಮ ಮತದಾರರ ಜತೆಗೆ ಹಾಗೂ ನನ್ನ ಜಿಲ್ಲೆಯ ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ. ನಂತರ ಮುಂದಿನ ದಿನಗಳ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್ ಜಾರಕಿಹೊಳಿ(Lakhan Jarkiholi) ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಕೆಲ ನಾಯಕರು ಕಾಂಗ್ರೆಸ್ (Congress) ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ಗೆ (Congress) ಗೆಲುವಾಗಿದೆ. ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕರು, ಬಿಜೆಪಿ ನಾಯಕರು ಸೇರಿಕೊಂಡು ಖಾಸಗಿ ಹೋಟೆಲ್‌ನಲ್ಲಿ (Hotel) ಮೀಟಿಂಗ್ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು ಎಂದು ದೂರಿದರು.
3500 ಬಿಜೆಪಿ (BJP) ಮತಗಳು ಕಾಂಗ್ರೆಸ್‌ಗೆ (Congress) ಬಿದ್ದಿವೆ. 2400 ಕಾಂಗ್ರೆಸ್ ಮತಗಳನ್ನು ಬಿಜೆಪಿಯವರು ಪಡೆದುಕೊಂಡಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡು ಅವರ ಮತ ಅವರೇ ಒಡೆದುಕೊಂಡಿದ್ದಾರೆ. ಇನ್ನೊಬ್ಬರ ಮೇಲೆ ಬಿಜೆಪಿ ನಾಯಕರು ಅಪವಾದ ಮಾಡೋದು ತಪ್ಪು ಎಂದರು.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ (Ramesh Jarkiholi) ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಉಪ ಚುನಾವಣೆಯಲ್ಲಿ (Loksabha By Election) ರಮೇಶ್ ಜಾರಕಿಹೊಳಿ ಕೆಲಸ ಮಾಡಿದ್ದಕ್ಕೆ ಬಿಜೆಪಿ (BJP) ಗೆದ್ದಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಆಗ ಈ ವಿಚಾರ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಬಿಜೆಪಿಯ 13 ಶಾಸಕರು, ಇಬ್ಬರು ಸಂಸದರು, ಒಬ್ಬ ರಾಜ್ಯಸಭಾ ಸದಸ್ಯರಿದ್ದಾರೆ (Rajyasabha Member). ನಿಮಗೆ ಗೆಲ್ಲಿಸಲು ಆಗಲಿಲ್ಲ ಅಂದರೆ ರಮೇಶ ಜಾರಕಿಹೊಳಿ (Ramesh Jarkiholi) ಸ್ಟ್ರಾಂಗ್ ಇದ್ದ ಹಾಗಾಯಿತು. ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಬೇಕೆಂದರೆ ರಮೇಶ್ ಜಾರಕಿಹೊಳಿ ಶಕ್ತಿಯನ್ನು ಪಕ್ಷ ಬಳಸಿಕೊಳ್ಳಬೇಕು ಎಂದರು.
ರಮೇಶ್ ಜಾರಕಿಹೊಳಿ ಬಿಸಿತುಪ್ಪ:
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ (Election) ಬೆಳಗಾವಿಯ ಬಿಜೆಪಿ (BJP) ಅಧಿಕೃತ ಅಭ್ಯರ್ಥಿ ಮಹಂತೇಶ ಕವಟಗಿಮಠ ಅವರ ಸೋತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ ಬೆನ್ನಲ್ಲೇ ಬಿಜೆಪಿಗೆ ಮುಂದೇನು ಮಾಡಬೇಕು ಎಂಬುದು ತೋಚದೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪಕ್ಷದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ತಮ್ಮ ಸಹೋದರ ಲಖನ್ ಅವರನ್ನು ತಾವೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಈ ಬಗ್ಗೆ ಪಕ್ಷದ ವರಿಷ್ಠರು ಮುಂಚೆಯೇ ಎಚ್ಚರಿಕೆಯನ್ನೂ ನೀಡಿದ್ದರು. ಲಖನ್ ಗೆಲುವು ಸೋಲಿಗಿಂತ ಪಕ್ಷದ ಅಧಿಕೃತ ಅಭ್ಯರ್ಥಿ ಕವಟಗಿಮಠ ಅವರ ಗೆಲುವು ಮುಖ್ಯ ಎಂಬ ಸಂದೇಶವನ್ನು ಚುನಾವಣೆಗೆ ಮುಂಚೆಯೇ ವರಿಷ್ಠರು ರಮೇಶ್ ಅವರಿಗೆ ನೀಡಿದ್ದರು.
ಬೆಳಗಾವಿಯಲ್ಲಿ ಪ್ರಾಬಲ್ಯ ಹೊಂದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವುದು ಅಷ್ಟುಸುಲಭದ ಮಾತೇನೂ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ನಾಂದಿ ಹಾಡಿದ್ದರು. ಮೇಲಾಗಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ರಮೇಶ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.
Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್ ಜಾರಕಿಹೊಳಿ ?
ಹಾಗೊಂದು ವೇಳೆ ರಮೇಶ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಈಗಿರುವ ಬಿಜೆಪಿ ಸರ್ಕಾರಕ್ಕೂ ಅಪಾಯ ತಂದೊಡ್ಡಬಹುದು ಎಂಬ ಭೀತಿಯೂ ಬಿಜೆಪಿ ಪಾಳೆಯದಲ್ಲಿದೆ. ಹೀಗಾಗಿಯೇ ಬೆಳಗಾವಿ ಸೋಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಅಳೆದೂ ತೂಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸೋಲಿನ ಕುರಿತು ವರಿಷ್ಠರ ಜತೆ ಚರ್ಚೆ: ರಮೇಶ್ ಜಾರಕಿಹೊಳಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷ ಸೋಲಬಾರದಿತ್ತು. ಆದರೆ, ಸೋತಿದೆ. ಪಕ್ಷದಲ್ಲಿ ಏನಾಗಿದೆ? ಏನಿಲ್ಲ ಎಂಬುವುದನ್ನು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ನಗರದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕೆ ಸೋಲುಂಟಾಗಿದೆ ಎಂಬುವುದನ್ನು ಪಕ್ಷದಲ್ಲಿಯೇ ಆಂತರಿಕವಾಗಿ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಸೋಲಿನ ಪಟ್ಟವನ್ನು ಲೀಡರ್ ಆದವರಿಗೆ ಕಟ್ಟುತ್ತಾರೆ. ಗುಡ್ಡಕ್ಕೆ ಭಾರ ಹೊರುವ ತಾಕತ್ತು ಇದೆ ಎಂದ ಅವರು, ಕಾಂಗ್ರೆಸ್ ಸೋಲಿಸುತ್ತೇನೆ ಅಂತಾ ನಾನು ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.