
ಹುಬ್ಬಳ್ಳಿ (ಜೂ.10): ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ ಮನೆಗೆ ಹೋಗಬೇಕು ಎಂಬುದು ನಮ್ಮ ಮೊದಲ ಡಿಮ್ಯಾಂಡ್. ಜನರು ಕಾಲ್ತುಳಿತಕ್ಕೆ ಮೃತಪಟ್ಟಿದ್ದನ್ನು ಕಮಿಷನರ್ ದಯಾನಂದ ನಮಗೆ ತಿಳಿಸಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಮೊದಲು ಡಿ.ಕೆ. ಶಿವಕುಮಾರ ಅವರನ್ನು ಅಮಾನತು ಮಾಡಿ ಎಂದ ಅವರು, ನಿಂಬಾಳ್ಕರ್ ನಿಮ್ಮದೇ ಅಧಿಕಾರಿ, ಏನು ಮಾಡುತ್ತಿದ್ದರು ಅವರು? ನಿಂಬಾಳ್ಕರ್ ನಿಮ್ಮ ಪಕ್ಷದ ಕಾರ್ಯಕರ್ತ, ಅವರನ್ನು ಏಕೆ ಅಮಾನತು ಮಾಡಿಲ್ಲ? ಅವರನ್ನು ಕೇವಲ ವರ್ಗಾವಣೆ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೇಕಾದವರಿಗೆ ಬೆಣ್ಣೆ, ಬೇಡವಾದವರಿಗೆ ಸುಣ್ಣನಾ? ಎಂದ ಅವರು, ಬೇಗಾನಿ ಶಾದಿ ಮೇ ಅಬ್ದುಲ್ ದಿವಾನಾ... ಶಾಯರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಆರ್‌ಸಿಬಿ ದೇಶ ಹಾಗೂ ರಾಜ್ಯದ ಟೀಮ್ ಅಲ್ಲ. ಘಟನೆ ನಡೆದಾಗ ಮಕ್ಕಳು, ಮೊಮ್ಮಕ್ಕಳು ಜತೆಗೆ ಸೆಲ್ಪಿ ತೆಗೆದುಕೊಳ್ಳಲು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಬ್ಯುಜಿ ಇದ್ದರು. ಪೊಲೀಸ್ ಆಯುಕ್ತರು ಕಾರ್ಯಕ್ರಮ ಬೇಡ ಎಂದರು ಎಂದು ಹೇಳಲಾಗುತ್ತಿದೆ. ಆದರೂ ಏಕೆ ಕಾರ್ಯಕ್ರಮ ಆಯೋಜನೆ ಮಾಡಿದರು ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಘಟನೆ ಕುರಿತು ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಕುಂಭಮೇಳದ ಘಟನೆಗೆ ಈ ಪ್ರಕರಣವನ್ನು ಹೋಲಿಸಿಕೊಳ್ಳುತ್ತಾರೆ. ನಾಚಿಕೆ, ಮಾನ ಮರ್ಯಾದೆ ಇದೆಯಾ ನಿಮಗೆ? ದಪ್ಪ ಚರ್ಮದವರಿಗೆ ಯಾವುದೇ ಮುಜುಗರ ಆಗುವುದಿಲ್ಲ. ಅದೇ ರೀತಿ ಇವರಿಗೆ ಏನು ಅನಿಸುತ್ತಿಲ್ಲ ಎಂದರು.
ಮುಂದೆ ನಮ್ಮ ಸರ್ಕಾರ ಬರುತ್ತೆ: ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹೊರಡಿಸುತ್ತಿರುವ ಮಂಗಳೂರು ಎಸ್ಪಿ ಬಗ್ಗೆ ಕಿಡಿಕಾರಿದ ಜೋಶಿ, ಮಂಗಳೂರು ಎಸ್ಪಿ ಮನಬಂದಂತೆ ವರ್ತಿಸುತ್ತಿದ್ದಾರೆ. ಈ ರೀತಿ ವರ್ತನೆ ನಡೆಯಲ್ಲ. ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದರು. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುವುದನ್ನು ನಿಲ್ಲಿಸಿ. ನಾನು ಬರುತ್ತೇನೆ. ಎಷ್ಟು ಜನರ ಮೇಲೆ ಕೇಸ್ ಹಾಕುತ್ತಿರೋ ಹಾಕಿ ಎಂದು ಸವಾಲೆಸೆದ ಜೋಶಿ, ಹೊಸ ಎಸ್ಪಿ ಬಹಳ ಡ್ರಾಮಾ ಮಾಡುತ್ತಿದ್ದಾರೆ ಎಂದರು.
ಭಯೋತ್ಪಾದನೆ ಕೃತ್ಯವಿದ್ದಾಗ ಎನ್‌ಐಎಗೆ ನೀಡುತ್ತೇವೆ. ಅದೇ ರೀತಿ ಕೆಲವೊಂದು ಪ್ರಕರಣಗಳನ್ನು ಎನ್‌ಐಎಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ ಪಾಕಿಸ್ತಾನ ಭಾಷೆಯನ್ನು ಬಳಸುತ್ತದೆ. ಮತಕ್ಕಾಗಿ ದೇಶವನ್ನು ಮಾರಲು ಕಾಂಗ್ರೆಸ್ ಹಿಂದೇಟು ಹಾಕುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.